ರಷ್ಯಾ ಆಕ್ರಮಿತ ನಗರ ಖೆರ್ಸೊನ್ನಲ್ಲಿ ಆಯುಧವೇ ಇಲ್ಲದೆ ಬೀದಿಗಿಳಿದು ಪ್ರತಿಭಟಿಸುತ್ತಿರುವ ಜನರ ಮೇಲೆ ರಷ್ಯಾ ಪಡೆಗಳು ಗುಂಡು ಹಾರಿಸಿವೆ ಎಂದು ಉಕ್ರೇನ್ ನಾಯಕರು ಹೇಳಿದ್ದಾರೆ. ಪ್ರತಿಭಟನಾಕಾರರ ಮೇಲೆ ರಷ್ಯಾ ಪಡೆಗಳು ಏಕಾಏಕಿ ಗ್ರೆನೇಡ್ ಮತ್ತು ಗುಂಡಿನ ದಾಳಿ ಆರಂಭಿಸಿದ್ದರಿಂದ ಪ್ರತಿಭಟನಾಕಾರರು ಹೆದರಿ ಓಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮರಿಯುಪೋಲ್ ಮತ್ತು ಕೀವ್ ನಗರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ರಷ್ಯಾ ಅವಿರತ ಪ್ರಯತ್ನಿಸುತ್ತಿದೆ. ವಾಯುದಾಳಿ ತೀವ್ರಗೊಂಡಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಈವರೆಗಿನ ಬೆಳವಣಿಗಳ 10 ಅಂಶಗಳು ಇಲ್ಲಿದೆ.
ನಾಗರಿಕರ ಮೇಲೆ ರಷ್ಯಾ ದಾಳಿ: ನಾಗರಿಕರನ್ನು ನಗರಗಳಿಂದ ತೆರವುಗೊಳಿಸಲು ರೂಪಿಸಿರುವ ಮಾನವೀಯ ಕಾರಿಡಾರ್‌ಗಳ ಮೇಲೆಯೂ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ನಾಗರಿಕರು, ಮಕ್ಕಳಿಗೆ ಗಾಯವಾಗಿದೆ. ದಾಳಿಯ ನಡುವೆಯೂ 3 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಸರ್ಕಾರ ಮಾಹಿತಿ ನೀಡಿದೆ.
ರಾಸಾಯನಿಕ ಅಸ್ತ್ರ ಬಳಕೆ ಆತಂಕ: ಉಕ್ರೇನ್ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಕೆ ಮಾಡಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಾಯುತ್ತಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗಂಭೀರ ಆರೋಪ ಮಾಡಿದ್ದಾರೆ.
ನ್ಯಾಟೊಗೆ ರಷ್ಯಾ ಕಂಡರೆ ಭಯ: ರಷ್ಯಾ ದೇಶವನ್ನು ನೋಡಿದರೆ ನ್ಯಾಟೊಗೆ ಭಯ. ಉಕ್ರೇನ್ ದೇಶವನ್ನು ನ್ಯಾಟೊದ ಸದಸ್ಯ ದೇಶವೆಂದು ಸ್ವೀಕರಿಸಿ ಅಥವಾ ಉಕ್ರೇನ್ ಸದಸ್ಯ ರಾಷ್ಟ್ರವಲ್ಲ ಎಂದು ಬಹಿರಂಗವಾಗಿ ಘೋಷಿಸಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸವಾಲು ಹಾಕಿದ್ದಾರೆ.
ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ: ಯುದ್ಧ ವಿರೋಧಿಸಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆಗಳನ್ನು ರಷ್ಯಾ ಸೇನೆ ಉಗ್ರವಾಗಿ ಹತ್ತಿಕ್ಕುತ್ತಿದೆ. ಖೆರ್ಸನ್ ನಗರದಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಸ್ಟೆನ್ ಗನ್, ಗ್ರೆನೇಡ್, ಗುಂಡಿನ ದಾಳಿ ನಡೆದಿದೆ.
ಜನಾಭಿಪ್ರಾಯ ಸಂಗ್ರಹಕ್ಕೆ ಒತ್ತಾಯ: ರಷ್ಯಾ ವಿಚಾರದಲ್ಲಿ ಉಕ್ರೇನ್ನ ಮುಂದಿನ ನಡೆ ಹೇಗಿರಬೇಕು ಎನ್ನುವ ಬಗ್ಗೆ ಸ್ಪಷ್ಟ ನಿಲುವು ತಳೆಯಲು ಜನಾಭಿಪ್ರಾಯ ಸಂಗ್ರಹ ಅಗತ್ಯ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ನೇರ ಭೇಟಿ ಮಾಡುವ ಇಚ್ಛೆಯನ್ನು ಝೆಲೆನ್‌ಸ್ಕಿ ವ್ಯಕ್ತಪಡಿಸಿದ್ದಾರೆ.
ವಿಮೋಚನೆಯೋ ದೌರ್ಜನ್ಯವೋ: ಸುಮಾರು 3 ಲಕ್ಷ ಜನಸಂಖ್ಯೆಯ ಖೆರ್ಸೊನ್ ನಗರವು ರಷ್ಯಾ ದಾಳಿಯ ಆರಂಭದ ದಿನಗಳಲ್ಲಿಯೇ ಸೋತು ಶರಣಾಗಿತ್ತು. ಮಿಲಿಟರಿ ಗೆಲುವನ್ನು ರಷ್ಯಾ ವಿಮೋಚನೆ ಎಂದು ಬಣ್ಣಿಸಿತ್ತು. ಆದರೆ ಈ ನಗರದಲ್ಲಿ ಆರಂಭವಾಗಿದ್ದ ಯುದ್ಧವಿರೋಧಿ ಪ್ರತಿಭಟನೆಗಳು ರಷ್ಯಾದ ಹಚ್ಚುತ್ತಿದ್ದ ವಿಮೋಚನೆಯ ಹಣೆಪಟ್ಟಿಯನ್ನು ಜಗತ್ತಿನ ಕಣ್ಣಿನಲ್ಲಿ ಪ್ರಶ್ನಿಸಿತ್ತು.
ಶರಣಾಗತಿ ಸಾಧ್ಯವಿಲ್ಲ: ಉಕ್ರೇನ್ ಎಂದಿಗೂ ರಷ್ಯಾಕ್ಕೆ ಸೋತು ಶರಣಾಗುವುದಿಲ್ಲ. ಬೇಕಿದ್ದರೆ ನಮ್ಮ ದೇಶವನ್ನು ಸಂಪರ್ಣ ನಾಶಪಡಿಸಿ. ಎಂದಿಗೂ ನಮ್ಮ ರಾಜಧಾನಿ ಕೀವ್ ನಗರವನ್ನು ರಷ್ಯಾಕ್ಕೆ ಒಪ್ಪಿಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸ್ಪಷ್ಟಪಡಿಸಿದ್ದಾರೆ.
ರಾಜಧಾನಿ ಮೇಲೆ ತೀವ್ರ ದಾಳಿ: ಕೀವ್ ನಗರದ ಹೊಸಿಲಲ್ಲಿರುವ ರಷ್ಯಾ ಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ. ನಗರದ ಕಟ್ಟಡಗಳ ಮೇಲೆ ಕ್ಷಿಪಣಿಗಳು ಅಪ್ಪಳಿಸುತ್ತಿವೆ. ವಾಣಿಜ್ಯ ಸಂಕೀರ್ಣ (ಮಾಲ್) ಒಂದನ್ನು ಕ್ಷಿಪಣಿ ದಾಳಿಯಲ್ಲಿ ಧ್ವಂಸ ಮಾಡಲಾಗಿದೆ. ಈ ಕಟ್ಟಡದಲ್ಲಿ ಯುದ್ಧೋಪಕರಣಗಳನ್ನು ಸಂಗ್ರಹಿಸಿ ಇರಿಸಲಾಗಿತ್ತು ಎಂದು ರಷ್ಯಾ ಆರೋಪಿಸಿದೆ.
ದಿಗ್ಬಂಧನದಲ್ಲಿ ಮಾರಿಯುಪೋಲ್: ದಕ್ಷಿಣ ಉಕ್ರೇನ್ನ ಬಂದರು ನಗರಿ ಮಾರಿಯುಪೋಲ್ ಮೇಲೆ ರಷ್ಯಾ ದಾಳಿಯನ್ನು ತೀವ್ರಗೊಳಿಸಿದೆ. ನೀರು, ವಿದ್ಯುತ್ ಇಲ್ಲದ ಸಂಕಷ್ಟ ಸ್ಥಿತಿಯಲ್ಲಿರುವ ಅಲ್ಲಿನ ನಾಗರಿಕರಿಗೆ ಇದೀಗ ಆಹಾರದ ಕೊರತೆ ಎದುರಾಗಿದೆ. ನಗರವನ್ನು ದಿಗ್ಬಂಧನದಲ್ಲಿ ಇರಿಸುವ ರಷ್ಯಾದ ಕ್ರಮವನ್ನು ಐರೋಪ್ಯ ಒಕ್ಕೂಟವು ‘ಯುದ್ಧಾಪರಾಧ’ ಎಂದು ಘೋಷಿಸಿದೆ. ಉಕ್ರೇನ್ ದೇಶವನ್ನು ಅಂಕೆಯಲ್ಲಿ ಇಡಬೇಕು ಎನ್ನುವ ರಷ್ಯಾದ ಉದ್ದೇಶ ಈಡೇರಬೇಕಾದರೆ ಮಾರಿಯುಪೋಲ್ ನಗರವನ್ನು ವಶಪಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಇದು ಕ್ರಿಮಿಯಾದಲ್ಲಿರುವ ರಷ್ಯಾದ ಪಡೆಗಳು ಮತ್ತು ಸೇನಾ ನೆಲೆಗಳಿಂದ ಉಕ್ರೇನ್ನಲ್ಲಿರುವ ಸೈನಿಕರಿಗೆ ಯುದ್ಧೋಪಕರಣಗಳು ಮತ್ತು ಇತರ ಅತ್ಯಗತ್ಯ ವಸ್ತುಗಳನ್ನು ಪೂರೈಸಲು ನೆರವಾಗುತ್ತದೆ.
ಮಾತುಕತೆ ವಿಫಲ: ರಷ್ಯಾ ಮತ್ತು ಉಕ್ರೆನ್ ನಡುವೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಲವು ಸುತ್ತುಗಳ ಶಾಂತಿ ಮಾತುಕತೆಗಳು ನಡೆದಿವೆ. ಆದರೆ ಈವರೆಗೆ ಯಾವುದೇ ಫಲಿತಾಂಶ ಬಂದಿಲ್ಲ. ರಷ್ಯಾ ಅಧ್ಯಕ್ಷರು ನನ್ನೊಂದಿಗೆ ನೇರ ಮಾತುಕತೆಗೆ ಮುಂದಾಗಬೇಕು. ಅದು ಈ ಹೊತ್ತಿನ ತುರ್ತು ಎಂದು ಝೆಲೆನ್‌ಸ್ಕಿ ಹೇಳುತ್ತಿದ್ದಾರೆ. ಅಧ್ಯಕ್ಷರ ಮಟ್ಟದಲ್ಲಿ ನೇರ ಮಾತುಕತೆ ನಡೆಯದೇ ಯುದ್ಧ ನಿಲ್ಲುವುದಿಲ್ಲ ಎಂದು ಝೆಲೆನ್‌ಸ್ಕಿ ಎಚ್ಚರಿಸಿದ್ದಾರೆ.