ರಷ್ಯಾ ವಿರುದ್ಧ ಪ್ರತಿದಾಳಿ ನಡೆಸಿ 2,500 ಚದರ ಕಿ.ಮೀ ಪ್ರದೇಶವನ್ನು ಮರುವಶಕ್ಕೆ ಪಡೆದ ಉಕ್ರೇನ್!

| Updated By: ಸುಷ್ಮಾ ಚಕ್ರೆ

Updated on: Oct 08, 2022 | 10:34 AM

ನಮ್ಮ ಸೈನಿಕರು ನಮ್ಮ ಭೂಮಿಯಲ್ಲಿ 2,434 ಚದರ ಕಿಲೋಮೀಟರ್ ಮತ್ತು 96 ವಸಾಹತುಗಳನ್ನು ಈಗಾಗಲೇ ಮುಕ್ತಗೊಳಿಸಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾ ವಿರುದ್ಧ ಪ್ರತಿದಾಳಿ ನಡೆಸಿ 2,500 ಚದರ ಕಿ.ಮೀ ಪ್ರದೇಶವನ್ನು ಮರುವಶಕ್ಕೆ ಪಡೆದ ಉಕ್ರೇನ್!
ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್​ಸ್ಕಿ
Follow us on

ಉಕ್ರೇನ್: ರಷ್ಯಾ ಮತ್ತು ಉಕ್ರೇನ್ (Russia- Ukraine War) ನಡುವೆ ಯುದ್ಧ ಮುಂದುವರೆದಿದೆ. ರಷ್ಯಾ ವಿರುದ್ಧ ಕಳೆದ ತಿಂಗಳ ಕೊನೆಯಲ್ಲಿ ಪ್ರಾರಂಭವಾದ ಉಕ್ರೇನ್​ನ ಪ್ರತಿದಾಳಿಯಲ್ಲಿ ಉಕ್ರೇನಿಯನ್ ಸೈನಿಕರು ರಷ್ಯಾದ ಭೂಮಿಯಲ್ಲಿ ಸುಮಾರು 2,500 ಚದರ ಕಿ.ಮೀ. (965 ಚದರ ಮೈಲುಗಳು) ಅನ್ನು ಪುನಃ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಮಾಹಿತಿ ನೀಡಿದ್ದಾರೆ.

“ಈ ವಾರವೊಂದರಲ್ಲೇ ನಮ್ಮ ಸೈನಿಕರು ನಮ್ಮ ದೇಶದ ಪೂರ್ವ ಭಾಗದ 776 ಚದರ ಕಿಲೋಮೀಟರ್ ಪ್ರದೇಶವನ್ನು ಮತ್ತು ಲುಗಾನ್ಸ್ಕ್ ಪ್ರದೇಶದ 6 ಸೇರಿದಂತೆ 29 ವಸಾಹತುಗಳನ್ನು ಸ್ವತಂತ್ರಗೊಳಿಸಿದ್ದಾರೆ. ಈ ಆಕ್ರಮಣಕಾರಿ ಕಾರ್ಯಾಚರಣೆಯ ಮೂಲಕ ನಮ್ಮ ಭೂಮಿಯಲ್ಲಿ 2,434 ಚದರ ಕಿಲೋಮೀಟರ್ ಮತ್ತು 96 ವಸಾಹತುಗಳನ್ನು ಈಗಾಗಲೇ ಮುಕ್ತಗೊಳಿಸಲಾಗಿದೆ” ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಇದನ್ನೂ ಓದಿ: Nobel Peace Prize 2022: ಅಲೆಸ್ ಬಿಯಾಲಿಯಾಟ್ಸ್ಕಿ,ರಷ್ಯಾ ಮತ್ತು ಉಕ್ರೇನ್​​ನ ಮಾನವ ಹಕ್ಕುಗಳ ಸಂಸ್ಥೆಗೆ ನೊಬೆಲ್ ಪ್ರಶಸ್ತಿ

ಇತ್ತೀಚಿನ ದಿನಗಳಲ್ಲಿ ರಷ್ಯಾದ ನಿಯಂತ್ರಣದಲ್ಲಿರುವ ನಗರವಾದ ಖೆರ್ಸನ್‌ಗೆ ಸಮೀಪವಿರುವ ದಕ್ಷಿಣದಲ್ಲಿ ಮತ್ತು ಈಶಾನ್ಯ ಪ್ರಾಂತ್ಯದ ಖಾರ್ಕಿವ್‌ನಲ್ಲಿ ಭೂಮಿಯನ್ನು ಹಿಂಪಡೆಯಲು ಉಕ್ರೇನ್ 2ನೇ ದೊಡ್ಡ ಪ್ರಯತ್ನವನ್ನು ಮಾಡಿದೆ. ಆರಂಭಿಕ ಪ್ರತಿದಾಳಿಯ ಸಮಯದಲ್ಲಿ ಉಕ್ರೇನಿಯನ್ ಪಡೆಗಳು ರಷ್ಯಾದ ಪಡೆಗಳಿಂದ 6,000 ಚದರ ಕಿಲೋಮೀಟರ್​ಗಳನ್ನು ಪುನಃ ತಮ್ಮ ವಶಕ್ಕೆ ಪಡೆದವು ಎಂದು ಝೆಲೆನ್ಸ್ಕಿ ಸೆಪ್ಟೆಂಬರ್​ನಲ್ಲಿ ಹೇಳಿದ್ದರು.

ಹಲವು ತಿಂಗಳುಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಉಕ್ರೇನ್ ಮೇಲೆ ದಂಡೆತ್ತಿ ಹೋಗಿದ್ದ ರಷ್ಯಾದ ಮಿಲಿಟರಿ ಶಕ್ತಿಗೆ ಉಕ್ರೇನ್ ತತ್ತರಿಸಿಹೋಗಿತ್ತು. ಇದುವರೆಗೂ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದ ರಷ್ಯಾವನ್ನು ಇದೀಗ ಉಕ್ರೇನ್ ಹಿಮ್ಮೆಟ್ಟಿಸಿದೆ. ಯುರೋಪ್‌ ಮತ್ತು ಪಾಶ್ಚಿಮಾತ್ಯ ದೇಶಗಳ ಸಹಾಯದಿಂದ ರಷ್ಯಾವನ್ನು ಉಕ್ರೇನ್‌ ಎದುರಿಸಿದೆ. ಇದರಿಂದ ಅವಮಾನಗೊಂಡಿರುವ ರಷ್ಯಾ ಅಧ್ಯಕ್ಷ ಪುಟಿನ್‌ ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ತಮ್ಮ ಸೇನೆ ದುರ್ಬಲವಾಗುತ್ತಿರುವುದರಿಂದ ಅಣ್ವಸ್ತ್ರ ದಾಳಿ ಮೂಲಕ ಉಕ್ರೇನ್​ ಅನ್ನು ಸದೆಬಡಿಯಲು ರಷ್ಯಾ ನಿರ್ಧರಿಸಿದೆ.

ಉಕ್ರೇನ್‌ ಬಳಿ ಯಾವುದೇ ಅಣ್ವಸ್ತ್ರವಿಲ್ಲ. ಇದ್ದ ಅಣ್ವಸ್ತ್ರಗಳನ್ನು ಕೆಲವು ದಶಕದ ಹಿಂದೆಯೇ ರಷ್ಯಾಗೆ ಹಸ್ತಾಂತರಿಸಿದೆ. ಹೀಗಾಗಿ, ರಷ್ಯಾ ಒಂದುವೇಳೆ ಅಣ್ವಸ್ತ್ರ ದಾಳಿ ನಡೆಸಿದ್ದೇ ಆದಲ್ಲಿ ಉಕ್ರೇನ್ ಸಂಪೂರ್ಣವಾಗಿ ನಾಶವಾಗುವ ಆತಂಕ ಎದುರಾಗಿದೆ. ಉಕ್ರೇನ್ ಮೇಲೆ ನ್ಯೂಕ್ಲಿಯರ್ ದಾಳಿ ನಡೆಸದಂತೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾಗೆ ಸೂಚಿಸಿದ್ದರೂ ಪುಟಿನ್ ತಮ್ಮ ನಿರ್ಧಾರ ಬದಲಿಸುವಂತೆ ಕಾಣುತ್ತಿಲ್ಲ. ಉಕ್ರೇನ್‌ ವಿರುದ್ಧದ ಯುದ್ಧವನ್ನು ರಷ್ಯಾ ತೀವ್ರಗೊಳಿಸಿದ ನಂತರವೂ ಉಕ್ರೇನ್‌ ಸೇನೆ ಹಿಂದೆ ಸರಿಯದೆ ಮುನ್ನಡೆ ಪಡೆಯುತ್ತಿದೆ. ರಷ್ಯಾದ ಹಿಡಿತದಲ್ಲಿದ್ದ ಲೈಮನ್‌ ಪ್ರದೇಶವನ್ನು ಉಕ್ರೇನ್‌ ಸೈನ್ಯ ಮತ್ತೆ ಗೆದ್ದುಕೊಂಡಿದೆ. ಇದರಿಂದ ರಷ್ಯಾಗೆ ಭಾರೀ ಹಿನ್ನಡೆಯಾಗಿದೆ.

ಇದನ್ನೂ ಓದಿ: Explainer: ಉಕ್ರೇನ್ ಮೇಲೆ ಹಿಡಿತ ಸಾಧಿಸುವ ಪುಟಿನ್ ಕನಸು ಕೈ ಜಾರುತ್ತಿದೆಯಾ?; ರಷ್ಯಾದ ಮುಂದಿನ ಹೆಜ್ಜೆಯೇನು?

ಉಕ್ರೇನ್ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ, ನಮ್ಮ ದೇಶದ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ನಡೆಸಿದರೆ ಜಗತ್ತಿನ ಎಲ್ಲ ದೇಶಗಳ ದ್ವೇಷ ಕಟ್ಟಿಕೊಳ್ಲಬೇಕಾಗುತ್ತದೆ ಎಂದು ಪುಟಿನ್​ಗೆ ಗೊತ್ತಿದೆ. ಹೀಗಾಗಿ, ಉಕ್ರೇನ್ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ನಡೆಸಿದರೆ ರಷ್ಯಾ ಅಧ್ಯಕ್ಷ ಪುಟಿನ್ ಬದುಕುಳಿಯಲು ಸಾಧ್ಯವಿಲ್ಲ. ರಷ್ಯಾ ಆಕ್ರಮಿಸಿಕೊಂಡಿರುವ ಉಕ್ರೇನ್​ನ ಪ್ರದೇಶಗಳನ್ನು ಹಿಂಪಡೆಯಲು ನಾವು ನಮ್ಮ ಎಲ್ಲ ಪ್ರಯತ್ನಗಳನ್ನೂ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ