ಕೈವ್: ರಷ್ಯಾ ಖಂಡಿತವಾಗಿಯೂ ರಷ್ಯಾ (Russia) ದೇಶದ ಮೇಲೆ ಹೊಸ ಕ್ಷಿಪಣಿ ದಾಳಿಯನ್ನು(Air Strike) ನಡೆಸಲಿದೆ. ಆದರೆ, ಅದನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelenskiy) ಹೇಳಿದ್ದಾರೆ. ರಷ್ಯಾ ಮತ್ತೆ ತನ್ನ ದಾಳಿಯನ್ನು ಮುಂದುವರೆಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ರಕ್ಷಣಾ ಪಡೆಗಳು ಮತ್ತು ಸಾರ್ವಜನಿಕರು ಸಿದ್ಧರಾಗಿರಬೇಕು ಎಂದು ಉಕ್ರೇನ್ ಅಧ್ಯಕ್ಷ ಎಚ್ಚರಿಸಿದ್ದಾರೆ.
“ರಷ್ಯಾದ ಭಯೋತ್ಪಾದಕರು ಹೊಸ ದಾಳಿಗಳನ್ನು ಯೋಜಿಸುತ್ತಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ರಷ್ಯಾದವರ ಬಳಿ ಕ್ಷಿಪಣಿಗಳು ಇರುವವರೆಗೂ ಅವರು ಶಾಂತರಾಗುವುದಿಲ್ಲ. ನಮ್ಮ ರಕ್ಷಣಾ ಪಡೆಗಳು ಸಜ್ಜಾಗುತ್ತಿವೆ. ಇಡೀ ದೇಶವೇ ಸಜ್ಜಾಗುತ್ತಿದೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ಸಿಡಿತಲೆರಹಿತ ಪರಮಾಣು ಕ್ಷಿಪಣಿ ಪ್ರಯೋಗಿಸುತ್ತಿರುವ ರಷ್ಯಾ; ಕಾರಣ ಇಲ್ಲಿದೆ
ಕಳೆದ 2 ವಾರಗಳ ಹಿಂದೆ ರಷ್ಯಾದ ಪಡೆಗಳು ಉಕ್ರೇನ್‌ನ ಖೆರ್ಸನ್ ನಗರವನ್ನು ಬಿಟ್ಟು ಹಿಂದೆ ಸರಿದಿತ್ತು. ಇದರಿಂದ ಉಕ್ರೇನ್ಗೆ ದೊಡ್ಡ ಜಯ ಉಂಟಾಗಿತ್ತು. ಇದಾದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ‘ಖೆರ್ಸನ್ ಪ್ರಜೆಗಳು ನಮ್ಮವರು’ ಎಂದು ಹೇಳಿದ್ದರು. ಇದರಿಂದ ರಷ್ಯಾಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೆ, 3 ದಿನದ ಹಿಂದೆ ಮತ್ತೆ ಉಕ್ರೇನ್ ನಗರದ ಖೆರ್ಸನ್ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದ್ದು, 15 ಜನರು ಸಾವನ್ನಪ್ಪಿದ್ದರು.
ಉಕ್ರೇನ್ ದೇಶಾದ್ಯಂತ ಇತ್ತೀಚಿನ ವಾರಗಳಲ್ಲಿ ರಷ್ಯಾದ ವೈಮಾನಿಕ ದಾಳಿಗಳು ಉಕ್ರೇನ್‌ನ ಶಕ್ತಿಯ ಮೂಲಸೌಕರ್ಯಕ್ಕೆ ಭಾರೀ ಪೆಟ್ಟು ಕೊಟ್ಟಿತ್ತು. ಚಳಿಗಾಲದ ಸಮೀಪಿಸುತ್ತಿರುವುದರಿಂದ ಉಕ್ರೇನ್ನಲ್ಲಿ ಆರೋಗ್ಯ ಬಿಕ್ಕಟ್ಟು ಕೂಡ ಎದುರಾಗಿದೆ. ಇತ್ತೀಚೆಗಷ್ಟೇ ಉಕ್ರೇನಿಯನ್ ಪಡೆಗಳು ಪುನಃ ವಶಪಡಿಸಿಕೊಂಡ ಪೂರ್ವದ ಪ್ರಮುಖ ನಗರವಾದ ಖೆರ್ಸನ್‌ನಲ್ಲಿ ರಷ್ಯಾದ ಅತ್ಯಂತ ಭೀಕರ ಬಾಂಬ್ ದಾಳಿ ಅಪ್ಪಳಿಸಿತ್ತು.
ಇದನ್ನೂ ಓದಿ: Russia-Ukraine War: ಉಕ್ರೇನ್‌ನ ಖೆರ್ಸನ್ ಮೇಲೆ ರಷ್ಯಾದಿಂದ ಶೆಲ್ ದಾಳಿ; 15 ಜನರ ಸಾವು
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಆರಂಭವಾಗಿ 278 ದಿನಗಳಾಗಿವೆ. ಸದ್ಯದಲ್ಲೇ ರಷ್ಯಾ ತನ್ನ ಗುರಿ ಸಾಧಿಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧದಲ್ಲಿ ಮಡಿದ ಯೋಧರ ಕುಟುಂಬದವರಿಗೆ ಕೆಲ ದಿನಗಳ ಹಿಂದಷ್ಟೇ ಭರವಸೆ ನೀಡಿದ್ದರು. ನಾವು ನಮ್ಮ ಗುರಿಯನ್ನು ಸಾಧಿಸಬೇಕು ಮತ್ತು ಅಂತಿಮವಾಗಿ ನಾವು ಅದನ್ನು ಸಾಧಿಸುತ್ತೇವೆ. ನಾನು ವೈಯಕ್ತಿಕವಾಗಿ ಮತ್ತು ದೇಶದ ಇಡೀ ನಾಯಕತ್ವ ವಹಿಸಿರುವ ನೆಲೆಯಲ್ಲಿ ನಿಮ್ಮ ನೋವಿನಲ್ಲಿ ಭಾಗಿಯಾಗಿದ್ದೇನೆ ಎಂದು ಪುಟಿನ್ ಹೇಳಿದ್ದರು. ಇದರ ಬೆನ್ನಲ್ಲೇ ರಷ್ಯಾ ಪಡೆಗಳು ಶಸ್ತ್ರಾಸ್ತ್ರ ಅಥವಾ ಸಿಡಿತಲೆರಹಿತ ಹಳೆಯ ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಷ್ಯಾ ದಾಳಿಗಳ ಪರಿಣಾಮವಾಗಿ ಉಕ್ರೇನ್‌ನ ಸುಮಾರು 60 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಕಡಿತ ಎದುರಿಸುತ್ತಿವೆ. ರಷ್ಯಾದ ದಾಳಿಗಳಿಂದ ಉಕ್ರೇನ್‌ನ ಇಂಧನ ಕ್ಷೇತ್ರದ ಮೇಲೆ ಭಾರಿ ಹೊಡೆತವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Published On - 8:22 am, Mon, 28 November 22