ವಾಷಿಂಗ್ಟನ್: ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವೆ ತಲೆದೋರಿರುವ ಬಿಕ್ಕಟ್ಟು ಮತ್ತು ರಷ್ಯಾದ ಮಿಲಿಟರಿ ಪಡೆಗಳು ಉಕ್ರೇನ್ ಗಡಿಭಾಗದಲ್ಲಿ ಜಮಾವಣೆಗೊಂಡಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿರುರವ ವಿಷಯವಾಗಿರುವ ಜೊತೆಗೆ ಆತಂಕವನ್ನು ಸಹ ಸೃಷ್ಟಿಸಿದೆ. ಅಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗಡಿಭಾಗದಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಆರಂಭವಾಗಿದೆ ಎಂದು ಹೇಳುತ್ತಿರುವರಾದರೂ ಮುಂದಿನ ಕೆಲವೇ ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವ ಅಪಾಯ ಬಲವಾಗಿದೆ ಅಂತ ಹೇಳಿದ್ದಾರೆ. ‘ರಷ್ಯಾ ತನ್ನ ಯಾವುದೇ ಪಡೆಯನ್ನು ಉಕ್ರೇನ್ ಗಡಿಭಾಗದಿಂದ ಹಿಂದಕ್ಕೆ ಕರೆಸಿಕೊಂಡಿಲ್ಲವಾದ್ದರಿಂದ ಅದು ಆಕ್ರಮಣ ನಡೆಸುವ ಬಲವಾದ ಸಾಧ್ಯತೆ ಇದೆ. ಅಸಲು ವಿಷಯವೇನೆಂದರೆ, ಇನ್ನೂ ಹೆಚ್ಚಿನ ಪಡೆಗಳನ್ನು ರಷ್ಯಾ ಅಲ್ಲಿಗೆ ಕಳಿಸಿದೆ,’ ಎಂದು ವ್ಹೈಟ್ ಹೌಸ್ ಬಳಿ ಸುದ್ದಿಗಾರರಿಗೆ ಹೇಳಿದ ಬೈಡೆನ್, ‘ಧ್ವಜ ಕಾರ್ಯಾಚರಣೆಯ ನೆಪದಲ್ಲಿ ರಷ್ಯಾದ ಸೇನೆ ಉಕ್ರೇನ್ ಗಡಿ ದಾಟು ಒಳನುಗ್ಗುವ ಪ್ರಯತ್ನ ಮಾಡಲಿದೆ ಅಂತ ನಂಬಲು ನಮಗೆ ಕಾರಣವಿದೆ,’ ಎಂದರು.
‘ನಮಗೆ ಲಭ್ಯವಿರುವ ಪ್ರತಿಯೊಂದು ಸುಳಿವು ರಷ್ಯಾ, ಉಕ್ರೇನ್ ಒಳನುಗ್ಗಿ ಅದರ ಮೇಲೆ ಆಕ್ರಮಣ ನಡೆಸಲಿದೆ ಎಂದು ಸೂಚಿಸುತ್ತದೆ. ಮುಂದಿನ ಹಲವು ದಿನಗಳಲ್ಲಿ ಇದು ನಡೆಯಲಿದೆ ಅಂತ ನನ್ನ ಅಂತರಾತ್ಮ ಹೇಳುತ್ತಿದೆ,’ ಎಂದು ಬೈಡೆನ್ ಹೇಳಿದರು. ತಲೆದೋರಿರುವ ಬಿಕ್ಕಟ್ಟನ್ನು ರಾಜತಾಂತ್ರಿಕವಾಗಿ ಕೊನಗೊಳಿಸಲು ಯುಎಸ್ ಮಾಡಿರುವ ಪ್ರಸ್ತಾವನೆಗಳಿಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳಿಸಿರುವ ಲಿಖಿತ ಪ್ರತಿಕ್ರಿಯೆಯನ್ನು ತಾನಿನ್ನೂ ಓದಿಲ್ಲವೆಂದು ಬೈಡೆನ್ ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳ ನೀತಿಯನ್ನು ಉಕ್ರೇನ್ ಅಳವಡಿಸಿಕೊಳ್ಳುತ್ತಿರುವುದು ಮತ್ತು ನ್ಯಾಟೋ ಸೇರುವ ಅದರ ದೂರಗಾಮಿ ಉದ್ದೇಶವನ್ನು (NATO) ನಖಶಿಖಾಂತ ದ್ವೇಷಿಸುತ್ತಿರುವ ರಷ್ಯಾ ಅದನ್ನು ಕೊನೆಗಾಣಿಸಲು ಉಕ್ರೇನ್ ಗಡಿಭಾಗದಲ್ಲಿ ತನ್ನ ಸೇನಾಪಡೆಗಳನ್ನು ಜಮಾಯಿಸಿದೆ.
ರಾಜತಾಂತ್ರಿಕ ಮಾರ್ಗ ಈಗಲೂ ಸಾಧ್ಯವಿದೆ ಎಂದು ಹೇಳಿರುವ ಬೈಡೆನ್, ಈ ಮಾರ್ಗದ ರೂಪುರೇಷೆಗಳನ್ನು ಗುರುವಾರದಂದು ಯುಎಸ್ ಗೃಹ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವಾಗ ವಿವರಿಸಲಿದ್ದಾರೆ ಎಂದರು.
ಆದರೆ, ಪುಟಿನ್ ಅವರಿಗೆ ಕರೆ ಮಾಡಿ ಮಾತಾಡುವ ಉದ್ದೇಶ ತಮಗಿಲ್ಲ ಎಂದು ಬೈಡೆನ್ ಸ್ಪಷ್ಟಪಡಿಸಿದರು.
ಏತನ್ಮಧ್ಯೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನ ಗಡಿಯಲ್ಲಿ ರಷ್ಯಾದ ಬೃಹತ್ ಮಿಲಿಟರಿ ಜಮಾವಣೆಯಿಂದ ಉತ್ಪತ್ತಿಯಾಗುತ್ತಿರುವ ಅಂತರರಾಷ್ಟ್ರೀಯ ಗಮನವನ್ನು ಬಹಳ ಆನಂದಿಸುತ್ತಿದ್ದಾರೆ ಮತ್ತು ಸ್ವದೇಶದ ಜನರ ಬೆಂಬಲ ಗಳಿಸಲು ಉಕ್ರೇನ್ ಮೇಲೆ ಯುದ್ಧ ಸಾರುವ ಹುನ್ನಾರ ಮಾಡುತ್ತಿದ್ದಾರೆ ಎಂದು ಎಸ್ಟೋನಿಯಾದ ಪ್ರಧಾನಿ ಗುರುವಾರ ಹೇಳಿದ್ದಾರೆ.
ಗುರುವಾರ ರಾಯಿಟರ್ಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪ್ರಧಾನಿ ಕಾಜಾ ಕಲ್ಲಾಸ್ ಅವರು, ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದೆ ಮತ್ತು ಉಕ್ರೇನ್ ಬಳಿ 100,000 ಕ್ಕಿಂತ ಹೆಚ್ಚು ಸೈನಿಕರನ್ನು ಜಮಾವಣೆಗೊಂಡಿರುವ ಸ್ಥಿತಿಯನ್ನು ರಷ್ಯಾ ಮುಂದುವರಿಸಿದರೆ ಮಾಸ್ಕೋಗೆ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡಬಾರದು ಎಂದರು. ಇದು ಗನ್‌ಪಾಯಿಂಟ್‌ನಲ್ಲಿ ನಡೆಸಬೇಕಿರುವ ಮಾತುಕತೆಯಾಗಿದೆ ಎಂದು ಅವರು ಹೇಳಿದರು.
‘ಪಶ್ಚಿಮ ರಾಷ್ಟ್ರಗಳ ಚರ್ಚೆಯ ಕೇಂದ್ರಬಿಂದುವಾಗಿರುವುದನ್ನು ಪುಟಿನ್ ನಿಸ್ಸಂದೇಹವಾಗಿ ಆನಂದಿಸುತ್ತಿದ್ದಾರೆಂದು ನಾನು ಖಚಿತವಾಗಿ ಭಾವಿಸುತ್ತೇನೆ, ಯಾಕೆಂದರೆ ಕೆಲ ವರ್ಷಗಳ ಕಾಲ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತಿತ್ತು,’ ಎಂದು ಬಿಕ್ಕಟ್ಟನ್ನು ಚರ್ಚಿಸಲು ಬ್ರಸೆಲ್ಸ್‌ನಲ್ಲಿ ನಡೆದ ಯುರೋಪಿಯನ್ ಯೂನಿಯನ್ ನಾಯಕರ ಸಭೆಗೆ ಮೊದಲು ಕಲ್ಲಾಸ್ ಹೇಳಿದರು.
‘ಆದರೆ ಈಗ, ಹಲವಾರು ಪಾಶ್ಚಿಮಾತ್ಯ ದೇಶಗಳ ನಾಯಕರು ಅವರನ್ನು ಭೇಟಿ ಮಾಡುತ್ತಿದ್ದಾರೆ, ಪ್ರತಿಯೊಬ್ಬ ನಾಯಕ ಪುಟಿನ್ ಮನದಲ್ಲಿ ಏನಿದೆ ಅಥವಾ ಮುಂದೆ ಅವರು ಏನು ಮಾಡಲಿದ್ದಾರೆ ಅಂತ ಸತತವಾಗಿ ಯೋಚಿಸುತ್ತಿರುವುದರಿಂದ ತಾನೊಬ್ಬ ಅತ್ಯಂತ ಪ್ರಮುಖ ಮತ್ತು ಪ್ರಭಾವೀ ನಾಯಕನೆನ್ನುವ ಭಾವನೆ ಅವರಲ್ಲಿ ಮೂಡುತ್ತಿದೆ,’ ಎಂದು 2000 ರಿಂದ ರಷ್ಯಾದಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿರುವ ಪುಟಿನ್ ಬಗ್ಗೆ ಕಲ್ಲಾಸ್ ಹೇಳಿದರು.