Russia Ukraine War: ಉಕ್ರೇನ್ ರೈತರ ಮನೆಗಳಲ್ಲಿ ಗೋಧಿ ಲೂಟಿ, ಕೃಷಿಗೆ ರೈತರ ನಿರಾಸಕ್ತಿ, ಹಸಿವಿನ ಭೀತಿಯಲ್ಲಿ ಜಗತ್ತು
ಹಳ್ಳಿಗಳಲ್ಲಿ ರೈತರು ಗೋಧಿ ಶೇಖರಿಸಿರುವ ಗೋದಾಮುಗಳನ್ನು ಲೂಟಿ ಮಾಡಲು ರಷ್ಯಾ ಸೈನಿಕರು ಮುಂದಾಗಿದ್ದಾರೆ.
‘ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿಟ್ಟುಳುವುದವ ಬಿಡುವುದೇ ಇಲ್ಲ’ ಎನ್ನುವ ಪ್ರಸಿದ್ಧ ಸಾಲೊಂದು ಕುವೆಂಪು ವಿರಚಿತ ರೈತ ಗೀತೆಯಲ್ಲಿದೆ. ರಾಜ್ಯಗಳು ಉಳಿದರೂ, ಅಳಿದರೂ ರೈತರು ಮಾತ್ರ ತಮ್ಮ ಕಾಯಕ ಮುಂದುವರಿಸಲೇ ಬೇಕು. ಯುದ್ಧಕ್ಕೆಂದು ಶಸ್ತ್ರ ಹಿಡಿದ ಸೈನಿಕರ ಹೊಟ್ಟೆ ತುಂಬುವುದೂ ರೈತರ ಕಾಯಕದಿಂದಲೆ ಎನ್ನುವ ಆಶಯ ಹೊತ್ತ ವಿಶ್ವದ ಶ್ರೇಷ್ಠ ಕೃತಿ ಅದು. ಆದರೆ ಈಗ ಉಕ್ರೇನ್ನಲ್ಲಿ ರಷ್ಯಾದ ಸೈನಿಕರು ರೈತರ ಆರ್ಥಿಕ ಶಕ್ತಿಯನ್ನೇ ಕುಗ್ಗಿಸುತ್ತಾ, ದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಬೆಳವಣಿಗೆಯು ವಿಶ್ವದ ಹಲವು ದೇಶಗಳನ್ನು ಆತಂಕಕ್ಕೆ ದೂಡಿದೆ. ಈಗ ಉಕ್ರೇನ್ನಲ್ಲಿ ಗೋಧಿ ಕೊಯ್ಲಿನ ಸಮಯ. ಸಕಾಲದಲ್ಲಿ ಕೊಯ್ಲಾಗದಿದ್ದರೆ ಜನಜೀವನ ತತ್ತರಿಸಬೇಕಾಗುತ್ತದೆ ಎಂಬ ಭೀತಿ ಎಲ್ಲೆಡೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬಿಬಿಸಿ ಜಾಲತಾಣವು ರಿಯಾಲಿಟಿ ಚೆಕ್ನಲ್ಲಿ ಹಲವು ಮೂಲಗಳಿಂದ ಕಲೆಹಾಕಿದ ಮಾಹಿತಿ ಹಂಚಿಕೊಂಡಿದೆ.
ಉಕ್ರೇನ್ ಮೇಲಿನ ರಷ್ಯಾ ದಾಳಿ ಆರಂಭವಾಗಿ ಐದು ತಿಂಗಳಾದರೂ ನಿರ್ಣಾಯಕ ಜಯ ಗಳಿಸಲು ರಷ್ಯಾಕ್ಕೆ ಈವರೆಗೂ ಸಾಧ್ಯವಾಗಿಲ್ಲ. ರಷ್ಯಾ ಪಡೆಗಳನ್ನು ತನ್ನ ನೆಲದಿಂದ ಹೊರಗೆ ಹಾಕಲು ಉಕ್ರೇನ್ ಸಹ ಈವರೆಗೆ ಯಶಸ್ವಿಯಾಗಿಲ್ಲ. ಈ ನಡುವೆ ರಷ್ಯಾದ ಯುದ್ಧತಂತ್ರ ಬದಲಾಗಿದ್ದು, ಹಳ್ಳಿಗಳಲ್ಲಿ ರೈತರು ಗೋಧಿ ಶೇಖರಿಸಿರುವ ಗೋದಾಮುಗಳನ್ನು ಲೂಟಿ ಮಾಡಲು ರಷ್ಯಾ ಸೈನಿಕರು ಮುಂದಾಗಿದ್ದಾರೆ. ಉಕ್ರೇನ್ನಿಂದ ಗೋಧಿ ತರುತ್ತಿರುವ ನೂರಾರು ಟ್ರಕ್ಗಳು ಪ್ರತಿದಿನ ರಷ್ಯಾ ಪ್ರವೇಶಿಸುತ್ತಿದ್ದು, ಮುಂದಿನ ಹಂಗಾಮಿನ ಬಿತ್ತನೆ ಮತ್ತು ಇತರ ಕೃಷಿ ಚಟುವಟಿಕೆಗಳ ಬಗ್ಗೆ ಕರಾಳ ಸಂದಿಗ್ಧತೆ ಆವರಿಸಿದೆ. ದಿನದಿಂದ ದಿನಕ್ಕೆ ಉಕ್ರೇನ್ನ ರೈತರು ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ಜಾಗತಿಕ ಪ್ರಬಲ ಶಕ್ತಿಗಳು ಶೀಘ್ರ ಮಧ್ಯಪ್ರವೇಶಿಸಿ, ಸೂಕ್ತ ರೀತಿಯಲ್ಲಿ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಹಲವು ದೇಶಗಳಿಗೆ ಹಸಿವಿನ ಭೀತಿ ಎದುರಾಗಲಿದೆ.
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಉಕ್ರೇನ್ನಲ್ಲಿ ಗೋಧಿ ಬಿತ್ತನೆ ನಡೆಯುತ್ತದೆ. ಜುಲೈ-ಆಗಸ್ಟ್ನಲ್ಲಿ ಕೊಯ್ಲಾಗುವುದು ವಾಡಿಕೆ. ಹೊಲಗಳಲ್ಲಿ ಬೆಳೆದು ನಿಂತಿರುವ ಗೋಧಿ ಕೊಯ್ಲಿಗೆ ಕಾಯುತ್ತಿದೆ. ಗೋದಾಮುಗಳಲ್ಲಿ ಸಂಗ್ರಹವಾಗಿರುವ ಬೆಳೆಯನ್ನು ಮಾರಿ, ಕೃಷಿ ಚಟುವಟಿಕೆಗಳಿಗೆ ಹಣ ಹೊಂದಿಸುವುದು ಅಲ್ಲಿನ ರೈತರ ವಾಡಿಕೆ. ರಷ್ಯಾ ಸೈನಿಕರು ಗೋಧಿ ಗೋದಾಮುಗಳನ್ನು ಲೂಟಿ ಮಾಡುತ್ತಿರುವುದರಿಂದ ಅಲ್ಲಿನ ರೈತರಿಗೆ ಮುಂದಿನ ಕೃಷಿ ಹಂಗಾಮಿಗೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಯುದ್ಧದಿಂದಾಗಿ ಕಳೆದ ವರ್ಷ ಬಿತ್ತನೆಯಾಗಿದ್ದ ಗೋಧಿ ವಾಡಿಕೆಯಂತೆ ಜಗತ್ತಿನ ಹಲವು ದೇಶಗಳನ್ನು ತಲುಪಲು ಸಾಧ್ಯವಾಗಿಲ್ಲ. ಇದರಿಂದಾಗಿ ಗೋಧಿಯ ಆಮದನ್ನೇ ಆಹಾರದ ಮುಖ್ಯವಾಗಿ ಹೊಂದಿರುವ ಈಜಿಪ್ಟ್ ಸೇರಿದಂತೆ ಹಲವು ದೇಶಗಳಲ್ಲಿ ಹಾಹಾಕಾರ ಉಂಟಾಗಿದೆ. ರಷ್ಯಾ ಸೇನೆಯ ಈಗಿನ ನಡೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.