ಮುತ್ತಿಗೆ ಹಾಕಿದ ಉಕ್ರೇನಿಯನ್ (Ukraine) ಬಂದರು ನಗರವಾದ ಮಾರಿಯುಪೋಲ್‌ನಲ್ಲಿ (Mariupol) ಸುಮಾರು 400 ಜನರು ಆಶ್ರಯ ಪಡೆದಿದ್ದ ಕಲಾ ಶಾಲೆಯೊಂದರ ಮೇಲೆ ರಷ್ಯಾದ (Russia) ಮಿಲಿಟರಿ ಬಾಂಬ್ ದಾಳಿ ನಡೆಸಿದೆ ಎಂದು ಉಕ್ರೇನ್‌ನ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಭಾನುವಾರ ತಿಳಿಸಿದೆ. ಕಟ್ಟಡ ನಾಶವಾಗಿದೆ ಮತ್ತು ಜನರು ಅವಶೇಷಗಳ ಅಡಿಯಲ್ಲಿರಬಹುದು. ಸಾವುನೋವುಗಳ ಬಗ್ಗೆ ತಕ್ಷಣದ ಮಾಹಿತಿ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮಾರಿಯುಪೋಲ್‌ನಲ್ಲಿ ನಾಗರಿಕರು ಆಶ್ರಯ ಪಡೆದಿದ್ದ ಥಿಯೇಟರ್‌ನಲ್ಲಿ ರಷ್ಯಾದ ಪಡೆಗಳು ಬಾಂಬ್ ದಾಳಿ ಮಾಡಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಬುಧವಾರದಿಂದ 130 ಜನರನ್ನು ರಕ್ಷಿಸಲಾಗಿದೆ ಆದರೆ ಇನ್ನೂ ಅನೇಕರು ಅವಶೇಷಗಳ ಅಡಿಯಲ್ಲಿ ಉಳಿದಿರಬಹುದು ಎಂದು ಹೇಳಲಾಗಿದೆ. ಅಜೋವ್ ಸಮುದ್ರದ ಆಯಕಟ್ಟಿನ ಬಂದರು ಮಾರಿಯುಪೋಲ್ ಅನ್ನು ರಷ್ಯಾದ ಪಡೆಗಳು ಸುತ್ತುವರೆದಿವೆ. ಇಂಧನ, ಆಹಾರ ಮತ್ತು ನೀರು ಸರಬರಾಜುಗಳಿಂದ ಕಡಿತಗೊಳಿಸಲಾಗಿದ್ದು ಎಡೆಬಿಡದೆ ಇಲ್ಲಿ ಬಾಂಬ್ ದಾಳಿ ನಡೆದಿದೆ. ಮಾರಿಯುಪೋಲ್ ನ ಮುತ್ತಿಗೆಯು ಇತಿಹಾಸದಲ್ಲಿ ದಾಖಲಾಗುತ್ತದೆ. ರಷ್ಯಾದ ಪಡೆಗಳು ಮಾಡಿದ ಯುದ್ಧ ಅಪರಾಧಗಳು ಇವು ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಸೇನಾ ದಾಳಿ ಭಾನುವಾರ 25ನೇ ದಿನಕ್ಕೆ ಕಾಲಿಟ್ಟಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, 400,000 ಜನರು ಎರಡು ವಾರಗಳಿಗೂ ಹೆಚ್ಚು ಕಾಲ ಮಾರಿಯುಪೋಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಭಾರೀ ಬಾಂಬ್ ಸ್ಫೋಟದಿಂದಾಗಿ ವಿದ್ಯುತ್ ಮತ್ತು ನೀರಿನ ಪೂರೈಕೆಗಳನ್ನು ಕಡಿತಗೊಳಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಮತ್ತೆ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಹಾರಿಸಿದ್ದೇವೆ: ರಷ್ಯಾ
ಭಾನುವಾರ ಉಕ್ರೇನ್‌ನಲ್ಲಿ ತನ್ನ ಹೊಸ ಕಿಂಜಾಲ್ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ರಷ್ಯಾ ಭಾನುವಾರ ಹೇಳಿದೆ. ಇದು ಉಕ್ರೇನ್ ದೇಶದ ದಕ್ಷಿಣದಲ್ಲಿರುವ ಇಂಧನ ಸಂಗ್ರಹಣಾ ತಾಣವನ್ನು ನಾಶಪಡಿಸಿದೆ. ಉತ್ತರ ಉಕ್ರೇನ್‌ನ ಓವ್ರುಚ್ ಪಟ್ಟಣದಲ್ಲಿ ಸಮುದ್ರ ಆಧಾರಿತ ಕ್ಷಿಪಣಿಗಳೊಂದಿಗೆ ತರಬೇತಿ ಕೇಂದ್ರವನ್ನು ಗುರಿಯಾಗಿಸಿಕೊಂಡಾಗ ಉಕ್ರೇನಿಯನ್ ವಿಶೇಷ ಪಡೆಗಳ 100 ಕ್ಕೂ ಹೆಚ್ಚು ಸದಸ್ಯರು ಮತ್ತು “ವಿದೇಶಿ ಕೂಲಿ ಸೈನಿಕರನ್ನು” ಕೊಂದಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
“ಹೈಪರ್ ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ ಕಿನ್ಜಾಲ್ ವಾಯುಯಾನ ಕ್ಷಿಪಣಿ ವ್ಯವಸ್ಥೆಗಳು ಮೈಕೊಲೈವ್ ಪ್ರದೇಶದ ಕೊಸ್ಟ್ಯಾಂಟಿನಿವ್ಕಾ ವಸಾಹತು ಬಳಿ ಉಕ್ರೇನಿಯನ್ ಸಶಸ್ತ್ರ ಪಡೆಗಳ ಇಂಧನ ಮತ್ತು ಲೂಬ್ರಿಕಂಟ್ಸ್ ನ ದೊಡ್ಡ ಸಂಗ್ರಹಣಾ ತಾಣವನ್ನು ನಾಶಪಡಿಸಿದವು” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅದೇ ವೇಳೆ ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರದಲ್ಲಿನ ಹಡಗುಗಳಿಂದ ಕ್ರೂಸ್ ಕ್ಷಿಪಣಿಗಳೊಂದಿಗೆ ರಷ್ಯಾ ಭಾನುವಾರ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇತ್ತ ಉಕ್ರೇನಿಯನ್ ಪಡೆಗಳು ಕಠಿಣ ಪ್ರತಿರೋಧವನ್ನು ಹೆಚ್ಚಿಸಿವೆ. ಪಶ್ಚಿಮವು ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ಪ್ರಯತ್ನದಲ್ಲಿ ರಷ್ಯಾದ ಮೇಲೆ ವ್ಯಾಪಕವಾದ ನಿರ್ಬಂಧಗಳನ್ನು ವಿಧಿಸಿದೆ.
ಸಮರ ಕಾನೂನಿನಡಿಯಲ್ಲಿ “ಏಕೀಕೃತ ಮಾಹಿತಿ ನೀತಿ” ಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಎಲ್ಲಾ ರಾಷ್ಟ್ರೀಯ ಟಿವಿ ಚಾನೆಲ್‌ಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ ಎಂದು ಅವರ ಕಚೇರಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಭಾರತದಲ್ಲಿ ನಿಂತು ರಷ್ಯಾದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಪಾನ್ ಪ್ರಧಾನಿ; ಉಕ್ರೇನ್ಗೆ ನಮ್ಮ ಬೆಂಬಲವೆಂದ ಕಿಶಿದಾ
Published On - 4:22 pm, Sun, 20 March 22