ಭಾರತದಲ್ಲಿ ನಿಂತು ರಷ್ಯಾದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಪಾನ್​ ಪ್ರಧಾನಿ; ಉಕ್ರೇನ್​​ಗೆ ನಮ್ಮ ಬೆಂಬಲವೆಂದ ಕಿಶಿದಾ

ಜಪಾನ್​ ಮತ್ತು ಭಾರತ ಕ್ವಾಡ್​​ ಶೃಂಗದಲ್ಲಿ ಇರುವ ರಾಷ್ಟ್ರಗಳು. ಕ್ವಾಡ್​​ನಲ್ಲಿರುವ ಜಪಾನ್​, ಆಸ್ಟ್ರೇಲಿಯಾ, ಯುಎಸ್​ಗಳು ಬಹಿರಂಗವಾಗಿಯೇ ರಷ್ಯಾವನ್ನು ವಿರೋಧಿಸಿವೆ, ತಮ್ಮ ಸಂಪೂರ್ಣ ಬೆಂಬಲ ಉಕ್ರೇನ್​​ಗೆ ಎಂದು ಹೇಳಿವೆ. ಆದರೆ ಭಾರತ ಎರಡೂ ದೇಶಗಳ ವಿರುದ್ಧವಾಗಲಿ-ಪರವಾಗಲಿ ಮಾತನಾಡುತ್ತಿಲ್ಲ

ಭಾರತದಲ್ಲಿ ನಿಂತು ರಷ್ಯಾದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಪಾನ್​ ಪ್ರಧಾನಿ; ಉಕ್ರೇನ್​​ಗೆ ನಮ್ಮ ಬೆಂಬಲವೆಂದ ಕಿಶಿದಾ
ಫುಮಿಯೊ ಕಿಶಿದಾ ಮತ್ತು ಪ್ರಧಾನಿ ಮೋದಿ
Follow us
| Updated By: Lakshmi Hegde

Updated on: Mar 20, 2022 | 12:13 PM

ಉಕ್ರೇನ್​ ಮೇಲೆ ರಷ್ಯಾ ಯುದ್ಧ (Russia-Ukraine War) ಸಾರಿ, ಅಲ್ಲಿ ಒಂದೇ ಸಮನೆ ಆಕ್ರಮಣ ಮಾಡುತ್ತಿರುವುದು ಗಂಭೀರವಾದ ವಿಚಾರವಾಗಿದೆ. ಇದು ಅಂತಾರಾಷ್ಟ್ರೀಯ ಕ್ರಮಬದ್ಧ ವ್ಯವಸ್ಥೆಯ ಬೇರನ್ನೇ ಅಲ್ಲಾಡಿಸುತ್ತಿದೆ ಎಂದು ಜಪಾನ್​ ಪ್ರಧಾನಮಂತ್ರಿ ಫುಮಿಯೊ ಕಿಶಿದಾ (Fumio Kishida) ಹೇಳಿದರು. ಶನಿವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಿಶಿದಾ ಜಂಟಿಯಾಗಿ, ಅಕ್ಕಪಕ್ಕ ನಿಂತುಕೊಂಡು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಜಪಾನ್​ ಪ್ರಧಾನಿ, ಉಕ್ರೇನ್​ ವಿಚಾರವನ್ನು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೇ, ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕ್ರಮಬದ್ಧತೆಯನ್ನು ಬದಲಿಸಲು ಯಾರೂ ಏಕಮುಖವಾಗಿ ಮುಂದಾಗಬಾರದು. ಅದರಲ್ಲೂ ಸೇನಾ ಬಲ ಪ್ರಯೋಗದ ಮೂಲಕ ಯಾವುದೇ ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಬದಲಾವಣೆ ಮಾಡುವುದು ಸ್ವಲ್ಪವೂ ಸರಿಯಲ್ಲ ಎಂದಿದ್ದಾರೆ. ಈ ಮೂಲಕ ರಷ್ಯಾ ಯಾರ ಮಾತುಗಳನ್ನೂ ಕೇಳದೆ ಒಂದೇ ಸಮ ಉಕ್ರೇನ್​ ಮೇಲೆ ಆಕ್ರಮಣ ಮಾಡುತ್ತಿರುವುದನ್ನು ವಿರೋಧಿಸಿದ್ದಾರೆ.

ಟೋಕಿಯೋ ಉಕ್ರೇನ್​ಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ.  ಉಕ್ರೇನ್​​ನಲ್ಲಿ ಉಂಟಾಗಿರುವ ಅಸ್ಥಿರತೆ, ರಷ್ಯಾ-ಉಕ್ರೇನ್​ ಬಿಕ್ಕಟ್ಟು ಶೀಘ್ರವೇ ಶಮನವಾಗಲಿ, ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತ ಮತ್ತು ಜಪಾನ್​ ರಾಷ್ಟ್ರಗಳು ಬಯಸುತ್ತವೆ. ಹಾಗೇ, ಇಂಡೋ-ಪೆಸಿಫಿಕ್​ ರಾಷ್ಟ್ರಗಳ ಸುರಕ್ಷತೆ, ಮುಕ್ತತೆಯೂ ನಮ್ಮ ಆದ್ಯತೆ ಎಂದು ಕಿಶಿದಾ ಹೇಳಿದ್ದಾರೆ.  ಪ್ರಧಾನಿ ಮೋದಿ ಮಾತನಾಡಿ, ಜಪಾನ್​ ಭಾರತದಲ್ಲಿ ಅತಿ ದೊಡ್ಡ ಹೂಡಿಕೆದಾರ ದೇಶಗಳಲ್ಲಿ ಒಂದು. ಮುಂಬೈ-ಅಹ್ಮದಾದಾಬ್​ ಹೈಸ್ಪೀಡ್​ ರೈಲು ಕಾರಿಡಾರ್​ ಯೋಜನೆಯಲ್ಲಿ ಭಾರತ-ಜಪಾನ್​ ಒಂದು ತಂಡ-ಒಂದು ಯೋಜನೆಯಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಮುಂದಿನ ಐದುವರ್ಷಗಳಲ್ಲಿ ಜಪಾನ್​  3.2 ಲಕ್ಷ  ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದೂ ತಿಳಿಸಿದ್ದಾರೆ.

ಜಪಾನ್​ ಮತ್ತು ಭಾರತ ಕ್ವಾಡ್​​ ಶೃಂಗದಲ್ಲಿ ಇರುವ ರಾಷ್ಟ್ರಗಳು. ಕ್ವಾಡ್​​ನಲ್ಲಿರುವ ಜಪಾನ್​, ಆಸ್ಟ್ರೇಲಿಯಾ, ಯುಎಸ್​ಗಳು ಬಹಿರಂಗವಾಗಿಯೇ ರಷ್ಯಾವನ್ನು ವಿರೋಧಿಸಿವೆ, ತಮ್ಮ ಸಂಪೂರ್ಣ ಬೆಂಬಲ ಉಕ್ರೇನ್​​ಗೆ ಎಂದು ಹೇಳಿವೆ. ಆದರೆ ಭಾರತ ಎರಡೂ ದೇಶಗಳ ವಿರುದ್ಧವಾಗಲಿ-ಪರವಾಗಲಿ ಮಾತನಾಡುತ್ತಿಲ್ಲ. ಭಾರತಕ್ಕೆ ರಷ್ಯ ಉತ್ತಮ ಸ್ನೇಹಿತ. ಹೀಗಾಗಿ ಅದು ರಷ್ಯಾ-ಉಕ್ರೇನ್​ ಯುದ್ಧದ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತಿದೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕಾಗಿ ಬಂದಾಗಲೆಲ್ಲ ದೂರವೇ ಉಳಿದುಕೊಂಡಿದೆ. ಇಂಡೋ-ಜಪಾನ್​ ವಾರ್ಷಿಕ ಶೃಂಗಕ್ಕಾಗಿ ಮಾರ್ಚ್​ 19ರಂದು ದೆಹಲಿಗೆ ಬಂದಿರುವ ಜಪಾನ್​ ಪ್ರಧಾನಿ ಕಿಶಿದಾ ಇಂದು ವಾಪಸ್​ ತೆರಳಲಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್​​ ₹3.2 ಲಕ್ಷ ಕೋಟಿ ಹೂಡಿಕೆ ಮಾಡಲಿದೆ: ಪ್ರಧಾನಿ ಮೋದಿ