ಕೀವ್: ಉಕ್ರೇನ್ನ ಕ್ರೆಮೆನ್ಚುಕ್ನಲ್ಲಿರುವ ಶಾಪಿಂಗ್ ಮಾಲ್ ಒಂದರ ಮೇಲೆ ರಷ್ಯಾ ಕ್ಷಿಪಣಿ ದಾಳಿ (Russia Missile Attack) ನಡೆಸಿದೆ. ದಾಳಿ ನಡೆದಾಗ ಮಾಲ್ನಲ್ಲಿ ಸುಮಾರು 1,000 ಮಂದಿ ಇದ್ದರು. ಬಾಂಬ್ ಸ್ಫೋಟಿಸಿದಾಗ ಸುಮಾರು 16 ಮಂದಿ ಸ್ಥಳದಲ್ಲಿಯೇ ಮೃತಪಟ್ಟರು, ನೂರಾರು ಮಂದಿಗೆ ಗಾಯಗಳಾಗಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukraine President Volodymyr Zelensky ಹೇಳಿದ್ದಾರೆ. ಶಾಪಿಂಗ್ ಮಾಲ್ ಮೇಲೆ ನಡೆಸಿರುವ ದಾಳಿಯನ್ನು ವಿಶ್ವ ಸಮುದಾಯ ತೀವ್ರವಾಗಿ ಖಂಡಿಸಿದೆ.
‘ಮುಗ್ಧ ನಾಗರಿಕರ ಮೇಲೆ ಮನಬಂದಂತೆ ದಾಳಿ ನಡೆಸುವುದು ಯುದ್ಧಾಪರಾಧವಾಗುತ್ತದೆ. ರಷ್ಯಾದ ಈ ದಾಳಿಗೆ ಕ್ಷಮೆಗೆ ಅರ್ಹವಾದುದಲ್ಲ’ ಎಂದು ಜಿ7 ದೇಶಗಳ ಒಕ್ಕೂಟ ಕಟುವಾಗಿ ಟೀಕಿಸಿದೆ. ಪೂರ್ವ ಉಕ್ರೇನ್ನ ಲುಹಾನ್ಸ್ಕ್ ಪ್ರಾಂತ್ಯದ ಲಿಸಿಚನ್ಸ್ಕ್ ಎನ್ನುವಲ್ಲಿಯೂ ನೀರು ಹಿಡಿಯುತ್ತಿದ್ದ ಜನರ ಮೇಲೆ ರಷ್ಯಾ ಪಡೆಗಳು ಗುಂಡು ಹಾರಿಸಿದ್ದ 8 ಮಂದಿ ಮೃತಪಟ್ಟಿದ್ದಾರೆ. ಖಾರ್ಕಿವ್ ನಗರದಲ್ಲಿ ರಷ್ಯಾ ಪಡೆಗಳ ಶೆಲ್ ದಾಳಿಗೆ ಐವರು ಮೃತಪಟ್ಟಿದ್ದಾರೆ. ಮಕ್ಕಳು ಸೇರಿದಂತೆ 22 ಮಂದಿ ಗಾಯಗೊಂಡಿದ್ದಾರೆ.
ಉಕ್ರೇನ್ಗೆ ಹೊಸದಾಗಿ ಹಲವು ನೆರವು ಮತ್ತು ಯುದ್ಧೋಪಕರಣಗಳನ್ನು ಒದಗಿಸುವುದಾಗಿ ಅಮೆರಿಕ ಘೋಷಿಸಿದೆ. ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನೀಡಲಾಗುವುದು ಎಂದು ಅಮೆರಿಕ ಭರವಸೆ ನೀಡಿದೆ. ಸಂಭಾವ್ಯ ಸಂಘರ್ಷಕ್ಕೆ ನ್ಯಾಟೊ ಸಹ ಸಿದ್ಧತೆ ಆರಂಭಿಸಿದ್ದು, ಕ್ಷಿಪ್ರ ಕಾರ್ಯಪಡೆಗೆ ಸನ್ನದ್ಧ ಸ್ಥಿತಿಯಲ್ಲಿರುವ ಸೈನಿಕರ ಸಂಖ್ಯೆಯನ್ನು 3 ಲಕ್ಷಕ್ಕೆ ಹೆಚ್ಚಿಸಿದೆ.
ಗೆಲುವು ಮರೀಚಿಕೆ
ಉಕ್ರೇನ್ನ ಪೂರ್ವ ಭಾಗದ ಬಹುತೇಕ ಪ್ರದೇಶಗಳನ್ನು ರಷ್ಯಾ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆಯಾದರೂ, ಉಕ್ರೇನ್ ಸೇನಾಪಡೆಗಳು ಹೋರಾಟ ನಿಲ್ಲಿಸಿಲ್ಲ. ಹಲವು ಪ್ರದೇಶಗಳ ನಿಯಂತ್ರಣ ಎರಡೂ ಸೇನೆಗಳ ನಡುವೆ ಕೈಬದಲಿಯಾಗುತ್ತಿದೆ. ಯುದ್ಧದಿಂದಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಚಳಿಗಾಲದ ಒಳಗೆ ಯುದ್ಧ ಅಂತ್ಯಗೊಳ್ಳದಿದ್ದರೆ ಜನಜೀವನ ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ.
Published On - 8:58 am, Tue, 28 June 22