ಮಾಸ್ಕೊ: ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಹೈಪರ್ಸಾನಿಕ್ ಕ್ಷಿಪಣಿಯೊಂದನ್ನು ರಷ್ಯಾ ನೌಕಾಪಡೆ ಸೋಮವಾರ ಅಣುಶಕ್ತಿ ಚಾಲಿತ ಜಲಾಂತರ್ಗಾಮಿಯಿಂದ ಪರೀಕ್ಷಾರ್ಥ ಉಡಾವಣೆ ಮಾಡಿದೆ. ಪರೀಕ್ಷೆಯು ಯಶಸ್ವಿಯಾಗಿದ್ದು, ನಿಗದಿಪಡಿಸಿದ್ದ ಅಣಕು ಗುರಿಯನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ. ಬರೆಂಟ್ಸ್ ಸಾಗರದಲ್ಲಿದ್ದ ಅಣಕು ಗುರಿಯನ್ನು ಸೆವೆರೊಡ್ವಿನ್ಸ್ಕ್ ಜಲಾಂತರ್ಗಾಮಿಯಿಂದ ಹಾರಿಬಿಟ್ಟ ಝಿರ್ಕೊನ್ ಕ್ಷಿಪಣಿಯು ಯಶಸ್ವಿಯಾಗಿ ತಲುಪಿತು ಎಂದು ರಷ್ಯಾ ಸರ್ಕಾರ ಹೇಳಿದೆ. ಕಳೆದ ಜುಲೈನಲ್ಲಿ ಇದೇ ಕ್ಷಿಪಣಿಯು ರಷ್ಯಾ ದಾಳಿಗೆ ಬಳಸುವ ಯುದ್ಧನೌಕೆಯಿಂದ (ಪ್ರಿಗೇಟ್) ಉಡಾಯಿಸಿ ಪರೀಕ್ಷೆ ಮಾಡಿತ್ತು. ಅದಕ್ಕೂ ಮೊದಲು ಹಲವು ಬಾರಿ ಪರೀಕ್ಷಾರ್ಥ ಉಡಾವಣೆಗಳು ನಡೆದಿದ್ದವು.
1,000 ಕಿಲೋಮೀಟರ್ಗೂ (620 ಮೈಲಿ) ಹೆಚ್ಚು ದೂರದ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವಿರುವ ಝಿರ್ಕೊನ್ ಕ್ಷಿಪಣಿಯು ಶಬ್ದದ ವೇಗಕ್ಕಿಂತಲೂ 9 ಪಟ್ಟು ಹೆಚ್ಚು ವೇಗವಾಗಿ ಚಲಿಸಬಲ್ಲದು. ರಷ್ಯಾ ಸೇನಾಪಡೆಯ ಬತ್ತಳಿಕೆಗೆ ಈ ಕ್ಷಿಪಣಿ ಸೇರಿದರೆ, ಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು. ಆದರೆ ಸೇನೆಯ ಬಳಕೆಗೆ ಈ ಕ್ಷಿಪಣಿ ಸೇರ್ಪಡೆಯಾಗಲು ಇನ್ನೂ ಕೆಲ ಪರೀಕ್ಷೆಗಳು ನಡೆಯಬೇಕಿದೆ. ಇವು ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು. ಅನಂತರವಷ್ಟೇ, ಅಂದರೆ 2022ರಲ್ಲಿ ಈ ಕ್ಷಿಪಣಿಯು ರಷ್ಯಾ ನೌಕಾಪಡೆಯ ಶಸ್ತ್ರಾಗಾರ ಸೇರಬಹುದು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವ ಹೊಸ ತಲೆಮಾರಿನ ಹಲವು ಕ್ಷಿಪಣಿಗಳ ಪೈಕಿ ಝಿರ್ಕೊನ್ ಮುಂಚೂಣಿಯಲ್ಲಿದೆ. ಮುಂದಿನ ವರ್ಷಗಳಲ್ಲಿ ರಷ್ಯಾದ ಬಹುತೇಕ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳಲ್ಲಿ ಈ ಕ್ಷಿಪಣಿ ಅಳವಡಿಸಲು ಅಲ್ಲಿನ ಸರ್ಕಾರ ಉದ್ದೇಶಿಸಿದೆ. ಉಕ್ರೇನ್ನ ಕ್ರಿಮಿಯನ್ ಪ್ರಸ್ತಭೂಮಿಯನ್ನು ರಷ್ಯಾ ವಶಪಡಿಸಿಕೊಂಡ ನಂತರ ಅಮೆರಿಕ ಸೇರಿದಂತೆ ಹಲವು ನ್ಯಾಟೊ ಸದಸ್ಯ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಈ ಬೆಳವಣಿಗೆಯ ನಂತರ ತನ್ನ ನೌಕಾಪಡೆಗೆ ಅತ್ಯಾಧುನಿಕ ಶಸ್ತ್ರಗಳನ್ನು ಸೇರಿಸಿಕೊಳ್ಳಲು ರಷ್ಯಾ ಕಾರ್ಯತಂತ್ರ ರೂಪಿಸಿದೆ.
#Footage #RussianNavy to perform the first test launch of a #Tsirkon hypersonic missile from a nuclear submarine https://t.co/ndA9YevUrz#CruiseMissiles #MissileLaunch #WeaponTrials #Submarines #RussianWeapons pic.twitter.com/CWZEAWfgYz
— Минобороны России (@mod_russia) October 4, 2021
(Russian Navy test fires new hypersonic missile Zircon from Nuclear Submarine)
ಇದನ್ನೂ ಓದಿ: ರಕ್ಷಣಾ ಕ್ಷೇತ್ರಕ್ಕೆ ಹೊಸ ಬಲ ತುಂಬಿದ ಐಎನ್ಎಸ್ ವಿಕ್ರಾಂತ್: ಸ್ವಾವಲಂಬನೆಯತ್ತ ಭಾರತೀಯ ನೌಕಾಪಡೆ ದಿಟ್ಟ ಹೆಜ್ಜೆ