Salman Rushdie: ವೇದಿಕೆ ಹತ್ತಿ ಸಲ್ಮಾನ್​ ರಶ್ದಿಯ ಕುತ್ತಿಗೆಗೆ ಇರಿದ ಆರೋಪಿ; ಅಲ್ಲಿ ಆಗಿದ್ದೇನು?

| Updated By: ಸುಷ್ಮಾ ಚಕ್ರೆ

Updated on: Aug 13, 2022 | 12:07 PM

ನಿನ್ನೆ ಬೆಳಗ್ಗೆ 11 ಗಂಟೆಗೆ ಸಲ್ಮಾನ್ ರಶ್ದಿಯನ್ನು ಪರಿಚಯಿಸುತ್ತಿದ್ದಾಗ ಆರೋಪಿ ಹದಿ ಮತರ್ ಕಪ್ಪು ಬಟ್ಟೆಯನ್ನು ಧರಿಸಿ ವೇದಿಕೆಯ ಮೇಲೆ ಹಾರಿ ಸಲ್ಮಾನ್ ರಶ್ದಿಗೆ ಹಲವು ಬಾರಿ ಇರಿದಿದ್ದಾನೆ.

Salman Rushdie: ವೇದಿಕೆ ಹತ್ತಿ ಸಲ್ಮಾನ್​ ರಶ್ದಿಯ ಕುತ್ತಿಗೆಗೆ ಇರಿದ ಆರೋಪಿ; ಅಲ್ಲಿ ಆಗಿದ್ದೇನು?
ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆದ ದೃಶ್ಯ
Follow us on

ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ (New York) ನಗರದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿ (Salman Rushdie) ಅವರನ್ನು 24 ವರ್ಷದ ಹದಿ ಮತರ್ ಎಂಬಾತ ಕ್ರೂರವಾಗಿ ಇರಿದಿದ್ದ. ಈ ಘಟನೆಯ ವಿಡಿಯೋಗಳಲ್ಲಿ ಸಲ್ಮಾನ್ ರಶ್ದಿ ಚಾಕು ಇರಿತದಿಂದ ವೇದಿಕೆಯ ಮೇಲೆ ಹೇಗೆ ಕೆಳಗೆ ಬಿದ್ದರು ಎಂಬುದನ್ನು ನೋಡಬಹುದು. ಅದಾದ ನಂತರ ಅವರನ್ನು ಹೆಲಿಕಾಪ್ಟರ್​​ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಸಲ್ಮಾನ್ ರಶ್ದಿ ಅವರ ಹೊಟ್ಟೆಗೆ ಗಂಭೀರವಾದ ಗಾಯವಾಗಿದ್ದು, ಯಕೃತ್ತಿಗೆ ಹಾನಿಯಾಗಿದೆ ಎಂದು ಸಲ್ಮಾನ್ ರಶ್ದಿಯ ಏಜೆಂಟ್ ಹೇಳಿದ್ದಾರೆ. ಅಲ್ಲದೆ, ಈ ದಾಳಿಯಿಂದ ಸಲ್ಮಾನ್ ರಶ್ದಿ ಒಂದು ಕಣ್ಣು ಕಳೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ದಾಳಿ ನಡೆದಿದ್ದು ಹೇಗೆಂಬ ಮಾಹಿತಿ ಇಲ್ಲಿದೆ:
ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಯಕ್ರಮ ಆರಂಭವಾಗುವ ವೇಳೆ ದಾಳಿ ನಡೆದಿದೆ. ಸಲ್ಮಾನ್ ರಶ್ದಿಯನ್ನು ಪರಿಚಯಿಸುತ್ತಿದ್ದಾಗ ಆರೋಪಿ ಹದಿ ಮತರ್ ಕಪ್ಪು ಬಟ್ಟೆಯನ್ನು ಧರಿಸಿ ವೇದಿಕೆಯ ಮೇಲೆ ಹಾರಿ ಸಲ್ಮಾನ್ ರಶ್ದಿಗೆ ಹಲವು ಬಾರಿ ಇರಿದಿದ್ದಾನೆ. ಆ ವೇಳೆ ಇದ್ದಕ್ಕಿದ್ದಂತೆ ನಡೆದ ದಾಳಿಯಿಂದ ಅಲ್ಲಿದ್ದವರು ಆಘಾತಕ್ಕೊಳಗಾಗಿದ್ದಾರೆ. ಅನೇಕ ಬಾರಿ ಇರಿದಿದ್ದರಿಂದ ಸಲ್ಮಾನ್ ರಶ್ದಿ ಅವರಿಗೆ ತೀವ್ರ ಗಾಯಗಳಾಗಿವೆ. ಇದಾದ ನಂತರ ಸಲ್ಮಾನ್ ರಶ್ದಿ ಕೆಳಗೆ ಬಿದ್ದರು. ಅವರ ಕುತ್ತಿಗೆಯ ಬಲಭಾಗದಲ್ಲಿ ಇರಿಯಲಾಗಿದ್ದು, ತಕ್ಷಣ ರಕ್ತದ ಮಡುವಿನಲ್ಲಿ ಬಿದ್ದರು. ಅವರಿನ್ನೂ ಉಸಿರಾಡುತ್ತಿದ್ದಾರೆ ಎಂದು ಅಲ್ಲಿದ್ದವರು ಹೇಳಿದ್ದರಿಂದ ತುರ್ತು ಚಿಕಿತ್ಸೆ ನೀಡಲಾಯಿತು. ಬಳಿಕ ಹೆಲಿಕಾಪ್ಟರ್​​ನಲ್ಲಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತು.

ಇದನ್ನೂ ಓದಿ: Salman Rushdie: ಚಾಕುವಿನಿಂದ ಇರಿತಕ್ಕೊಳಗಾದ ಲೇಖಕ ಸಲ್ಮಾನ್ ರಶ್ದಿಗೆ ವೆಂಟಿಲೇಟರ್​​ನಲ್ಲಿ ಚಿಕಿತ್ಸೆ; ಒಂದು ಕಣ್ಣಿಗೆ ತೀವ್ರ ಹಾನಿ

ಸಾಹಿತ್ಯದ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕರಿಗೆ ಮೊದಲು ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ. ಸಲ್ಮಾನ್ ರಶ್ದಿ ಅವರಿಗೆ ಇರಿತವಾಗಿದೆಯಾ ಅಥವಾ ಯಾರಾದರೂ ಥಳಿಸಿದ್ದಾರಾ ಎಂಬುದು ಅವರಿಗೆ ಸ್ಪಷ್ಟವಾಗಲಿಲ್ಲ. ಸಲ್ಮಾನ್ ರಶ್ದಿಯವರ ಸಾವಿಗೆ ಕರೆ ನೀಡಿರುವ ಇರಾನ್ ಸರ್ಕಾರದ ಪರವಾದ 24 ವರ್ಷದ ಹದಿ ಮತರ್ ಎಂಬ ವ್ಯಕ್ತಿ ಈ ಕೃತ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಎಡಭಾಗದಿಂದ ಹದಿ ಮತರ್ ಇಳಿದು ಬರುತ್ತಿರುವುದನ್ನು ಕಂಡಿರುವುದಾಗಿ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ. ಸಲ್ಮಾನ್ ರಶ್ದಿಯವರ ಕೆನ್ನೆಯ ಮೇಲೆಲ್ಲ ರಕ್ತ ಹರಿಯುತ್ತಿತ್ತು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ