ಸೋಮಾಲಿಯಾದಲ್ಲಿ ಐಸಿಸ್ ನಾಯಕ ಬಿಲಾಲ್ ಸೇರಿ ಒಟ್ಟು 10 ಮಂದಿ ಭಯೋತ್ಪಾದಕರನ್ನು ಅಮೆರಿಕ ಮಿಲಿಟರಿ ಹೊಡೆದುರುಳಿಸಿದೆ. ಈ ಕುರಿತು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಬಿಲಾಲ್ ಈ ಸಂಘಟನೆಯ ಪ್ರಮುಖ ಹಣಕಾಸು ಸಹಾಯಕನಾಗಿದ್ದ. ಅಧಿಕಾರಿಗಳ ಪ್ರಕಾರ ಬಿಲಾಲ್-ಅಲ್ ಸುದಾನಿ ಆಫ್ರಿಕಾದ್ಯಂತ ಐಸಿಸ್ ಅನ್ನು ವಿಸ್ತರಿಸಲು ಹಾಗೂ ಇತರೆ ಚಟುವಟಿಕೆಗಳನ್ನು ರೂಪಿಸಲು ತಯಾರಿ ನಡೆಸಿದ್ದ. ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಈ ಕುರಿತು ಹೇಳಿಕೆ ನೀಡಿದ್ದು, ಈ ಕ್ರಮವು ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳಿಗೂ ಸುರಕ್ಷತೆಯ ಭಾವ ಮೂಡುತ್ತದೆ ಎಂದಿದ್ದಾರೆ.
ವರ್ಷಗಳ ಕಾಲ ಯುಎಸ್ ಗುಪ್ತಚರ ಅಧಿಕಾರಿಗಳಿಗೆ ರಾಡಾರ್‌ನಲ್ಲಿರುವ ಅಲ್-ಸುದಾನಿ, ಆಫ್ರಿಕಾದಲ್ಲಿ ಐಎಸ್ ಕಾರ್ಯಾಚರಣೆಗಳಿಗೆ ಮತ್ತು ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್‌ಐಎಸ್-ಕೆ ಭಯೋತ್ಪಾದಕ ಶಾಖೆಗೆ ಧನಸಹಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿಸಿದ್ದಾರೆ.
ಅಲ್-ಸುದಾನಿ ಮತ್ತೊಬ್ಬ ಐಎಸ್ ಆಪರೇಟಿವ್ ಅಬ್ದೆಲ್ಲಾ ಹುಸೇನ್ ಅಬಾಡಿಗ್ಗಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ, ಅವರು ದಕ್ಷಿಣ ಆಫ್ರಿಕಾದಲ್ಲಿ ಯುವಕರನ್ನು ನೇಮಿಸಿ ಶಸ್ತ್ರಾಸ್ತ್ರ ತರಬೇತಿ ಶಿಬಿರಕ್ಕೆ ಕಳುಹಿಸಿದ್ದರು.
ಮತ್ತಷ್ಟು ಓದಿ: Iran Terror Attack: ಇರಾನ್ನ ಷಿಯಾ ಯಾತ್ರಾ ಸ್ಥಳದಲ್ಲಿ ಉಗ್ರರಿಂದ ಗುಂಡಿನ ದಾಳಿ; 15 ಮಂದಿ ಸಾವು
ದಕ್ಷಿಣ ಆಫ್ರಿಕಾದ ಎರಡು ಮಸೀದಿಗಳನ್ನು ನಿಯಂತ್ರಿಸುತ್ತಿದ್ದ ಅಬಾಡಿಗ್ಗ ತನ್ನ ಅಧಿಕಾರ ಬಳಸಿಕೊಂಡು ಮಸೀದಿಗಳ ಸದಸ್ಯರಿಂದ ಹಣ ಸುಲಿಗೆ ಮಾಡುತ್ತಿದ್ದ. ಕಾರ್ಯಾಚರಣೆಯಲ್ಲಿ ಯಾವುದೇ ನಾಗರಿಕರು ಗಾಯಗೊಂಡಿಲ್ಲ ಅಥವಾ ಸಾವನ್ನಪ್ಪಿಲ್ಲ ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.
ಸೊಮಾಲಿಯಾ ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನ ಹಿರಿಯ ನಾಯಕರೊಬ್ಬರು ಹತರಾಗಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಜನವರಿ 25 ರಂದು, ಅಧ್ಯಕ್ಷರ ಆದೇಶದ ಮೇರೆಗೆ, ಯುಎಸ್ ಮಿಲಿಟರಿ ಉತ್ತರ ಸೊಮಾಲಿಯಾದಲ್ಲಿ ಕಾರ್ಯಾಚರಣೆ ನಡೆಸಿತು. ಇದರಲ್ಲಿ ಹಲವಾರು ಐಸಿಸ್ ಸದಸ್ಯರು ಕೊಲ್ಲಲ್ಪಟ್ಟರು ಎಂದು ಅವರು ಹೇಳಿದರು.
Published On - 8:26 am, Fri, 27 January 23