ದೇಶಕ್ಕೆ ಮರಳಲು ಶೇಖ್ ಹಸೀನಾ ಸಿದ್ಧತೆ, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ; ಹಸ್ತಾಂತರಕ್ಕೆ ಪಟ್ಟು ಹಿಡಿದ ಬಾಂಗ್ಲಾದೇಶ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಈ ವರ್ಷ ಡಿಸೆಂಬರ್‌ನಲ್ಲಿ ತಮ್ಮ ದೇಶಕ್ಕೆ ಮರಳುವ ಉದ್ದೇಶದಿಂದ ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇನ್ನೊಂದೆಡೆ ಶೇಖ್ ಹಸೀನಾ ಅವರನ್ನು ಭಾರತದಿಂದ ತಕ್ಷಣವೇ ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರ ತನ್ನ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ. ಬಾಂಗ್ಲಾದೇಶದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆ ಮತ್ತು ರಾಜಕೀಯ ದಂಗೆಯ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ತಮ್ಮ ದೇಶಕ್ಕೆ ವಾಪಾಸ್ ತೆರಳಲು ನಿರ್ಧರಿಸಿರುವುದು ದಕ್ಷಿಣ ಏಷ್ಯಾದ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ದೇಶಕ್ಕೆ ಮರಳಲು ಶೇಖ್ ಹಸೀನಾ ಸಿದ್ಧತೆ, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ; ಹಸ್ತಾಂತರಕ್ಕೆ ಪಟ್ಟು ಹಿಡಿದ ಬಾಂಗ್ಲಾದೇಶ
ಶೇಖ್ ಹಸೀನಾ
Image Credit source: Getty Images

Updated on: Nov 09, 2026 | 3:57 PM

ನವದೆಹಲಿ ನವೆಂಬರ್ 9: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮುಂದಿನ ತಿಂಗಳು (ಡಿಸೆಂಬರ್‌ನಲ್ಲಿ) ತಮ್ಮ ದೇಶಕ್ಕೆ ಮರಳುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಹೊಸ ಬಾಂಗ್ಲಾದೇಶಿ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ಒದಗಿಸುವಂತೆ ಕೋರಿದ್ದಾರೆ ಎಂದು ಅವರ ಪಕ್ಷವಾದ ಅವಾಮಿ ಲೀಗ್ ತಿಳಿಸಿದೆ. ಬಾಂಗ್ಲಾದೇಶ ಸರ್ಕಾರವು ಶೇಖ್ ಹಸೀನಾ ಬಳಿಯಿದ್ದ ಹಳೆಯ ದಾಖಲೆಗಳನ್ನು ರದ್ದುಗೊಳಿಸಿದ್ದರಿಂದ, ಶೇಖ್ ಹಸೀನಾ ಅವರು ಲಂಡನ್ ಮೂಲದ ಮ್ಯಾಟ್ರಿಕ್ಸ್ ಚೇಂಬರ್ಸ್‌ನ ತಮ್ಮ ಕಾನೂನು ಪ್ರತಿನಿಧಿಗಳ ಮೂಲಕ ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಅನ್ನು ಸಂಪರ್ಕಿಸಿ ತುರ್ತಾಗಿ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ:

Loading...

ಶೇಖ್ ಹಸೀನಾ ಅವರ ಹಳೆಯ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಬಾಂಗ್ಲಾದೇಶ ಸರ್ಕಾರ ರದ್ದುಗೊಳಿಸಿತ್ತು. ಹೀಗಾಗಿ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಹಿಂತಿರುಗಲು ಮತ್ತು ಕಾನೂನು ಪ್ರಕ್ರಿಯೆಗಳನ್ನು ಎದುರಿಸಲು ಅವರು ನವೀಕರಿಸಿದ ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಡಿಸೆಂಬರ್ ಒಳಗೆ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಗಡಿಪಾರಿನ ಷರತ್ತಿಗೆ ಶೇಖ್ ಹಸೀನಾ ತಿರುಗೇಟು, ಬಾಂಗ್ಲಾ ರಾಜಕೀಯದಲ್ಲಿ ಸಂಚಲನ

ಹಸ್ತಾಂತರಕ್ಕೆ ಬಾಂಗ್ಲಾದೇಶ ಪಟ್ಟು:

ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಪ್ರತಿಭಟನಾಕಾರರ ಮೇಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶೇಖ್ ಹಸೀನಾ ಅವರ ವಿರುದ್ಧ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಬಂಧನ ವಾರಂಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಪರಾಧಿಗಳ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಶೇಖ್ ಹಸೀನಾ ಅವರನ್ನು ತಕ್ಷಣವೇ ತಮಗೆ ಒಪ್ಪಿಸಬೇಕೆಂದು ಬಾಂಗ್ಲಾ ಸರ್ಕಾರ ಭಾರತಕ್ಕೆ ಒತ್ತಾಯಿಸುತ್ತಿದೆ.

ಬಾಂಗ್ಲಾದೇಶದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಹುಮಾಯೂನ್ ಕಬೀರ್ ಮಾತನಾಡಿ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಪರಾಧಿಗಳ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಶೇಖ್ ಹಸೀನಾ ಅವರನ್ನು ತಮಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. “ಶೇಖ್ ಹಸೀನಾ ಒಬ್ಬ ಭಯೋತ್ಪಾದಕಿ ಹಾಗೂ ತಲೆಮರೆಸಿಕೊಂಡಿರುವ ಆರೋಪಿ. ಆಕೆಯನ್ನು ನಮಗೆ ಹಸ್ತಾಂತರಿಸಬೇಕು. ಈ ಪ್ರಕ್ರಿಯೆಗೆ ಯಾವುದೇ ಪಾಸ್‌ಪೋರ್ಟ್ ಅಥವಾ ಪ್ರಯಾಣಿಕ ದಾಖಲೆಗಳ ಅಗತ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಶೇಖ್ ಹಸೀನಾ ಪಲಾಯನದ ವಿಡಿಯೋ ಹಂಚಿಕೊಂಡಿದ್ದ ಬಾಂಗ್ಲಾದೇಶ ವಾಯುಪಡೆಯ ಮಾಜಿ ಅಧಿಕಾರಿ ನಿಗೂಢ ಸಾವು

ಶೇಖ್ ಹಸೀನಾ ಅವರ ಬಾಂಗ್ಲಾದೇಶಿ ಪೌರತ್ವ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಅಡಿಯಲ್ಲಿ ದಾಖಲೆಗಳನ್ನು ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ 2 ವರ್ಷಗಳಿಗೂ ಹೆಚ್ಚು ಕಾಲ ಆಶ್ರಯ ಪಡೆದಿರುವ ಹಸೀನಾ, ಡಿಸೆಂಬರ್‌ನಲ್ಲಿ ದೇಶಕ್ಕೆ ಮರಳಿ ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗಳನ್ನು ಎದುರಿಸಲು ನಿರ್ಧರಿಸಿದ್ದಾರೆ. ಶೇಖ್ ಹಸೀನಾ ಅವರ ಮರಳುವಿಕೆಯು ರಾಷ್ಟ್ರೀಯ ಗುರುತು ಹಾಗೂ ಅವರ ಮೂಲಭೂತ ಹಕ್ಕಾಗಿದೆ ಎಂದು ಅವಾಮಿ ಲೀಗ್ ಪ್ರತಿಪಾದಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us