ನವದೆಹಲಿ: 66 ಮಿಲಿಯನ್ ವರ್ಷಗಳ ಹಿಂದೆ ಸಂಪೂರ್ಣವಾಗಿ ಸಂರಕ್ಷಿಸಿಡಲಾಗಿದ್ದ ಬೃಹತ್ ಡೈನೋಸಾರ್ನ ಭ್ರೂಣವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಜಗತ್ತಿನ ಇತಿಹಾಸದಲ್ಲೇ ಇದುವರೆಗೆ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಇದಾಗಿದೆ ಎನ್ನಲಾಗಿದೆ. ದಕ್ಷಿಣ ಚೀನಾದ ಗಂಝೋದಲ್ಲಿ ಈ ಡೈನೋಸಾರ್ ಭ್ರೂಣವನ್ನು ಪತ್ತೆಹಚ್ಚಲಾಗಿದ್ದು, ಮಣ್ಣಿನಡಿ ಹೂತು ಸಂರಕ್ಷಿಸಿಡಲಾಗಿದ್ದ ಡೈನೋಸಾರ್ ಭ್ರೂಣವನ್ನು ಹೊರಗೆ ತೆಗೆಯಲಾಗಿದೆ.
ಈ ಡೈನೋಸಾರ್ ಭ್ರೂಣ ಕನಿಷ್ಠ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಕೋಳಿ ಮೊಟ್ಟೆಯ ರೂಪದಲ್ಲಿಯೇ ಇರುವ ಮೊಟ್ಟೆಯೊಳಗೆ ಈ ಭ್ರೂಣವಿದೆ. ಇದು ಹಲ್ಲಿಲ್ಲದ ಥೆರೋಪಾಡ್ ಡೈನೋಸಾರ್ ಅಥವಾ ಓವಿರಾಪ್ಟೊರೊಸಾರ್ ಎನ್ನಲಾಗಿದ್ದು, ಇದಕ್ಕೆ ಬೇಬಿ ಯಿಂಗ್ಲಿಯಾಂಗ್ ಎಂದು ಹೆಸರಿಸಲಾಗಿದೆ.
“ಇತಿಹಾಸದಲ್ಲಿ ಇದುವರೆಗೆ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಇದಾಗಿದೆ” ಎಂದು ಸಂಶೋಧಕ ಡಾ. ಫಿಯಾನ್ ವೈಸಮ್ ಮಾ ಹೇಳಿದ್ದಾರೆ. ಈ ಭ್ರೂಣದ ಸಂಶೋಧನೆಯು ಡೈನೋಸಾರ್‌ಗಳು ಮತ್ತು ಆಧುನಿಕ ಪಕ್ಷಿಗಳ ನಡುವಿನ ಸಂಬಂಧದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಸಂಶೋಧಕರಿಗೆ ನೀಡಿದೆ. ಪಳೆಯುಳಿಕೆಯು ಭ್ರೂಣವು “ಟಕಿಂಗ್” ಎಂದು ಕರೆಯಲ್ಪಡುವ ಸುರುಳಿಯ ಸ್ಥಿತಿಯಲ್ಲಿದೆ. ಇದು ಮೊಟ್ಟೆಯೊಡೆಯುವ ಸ್ವಲ್ಪ ಸಮಯದ ಮೊದಲು ಪಕ್ಷಿಗಳಲ್ಲಿ ಕಂಡುಬರುವ ನಡವಳಿಕೆಯಾಗಿದೆ. ಇನ್ನೇನು ಮೊಟ್ಟೆಯೊಡೆದು ಡೈನೋಸಾರ್ನ ಮರಿ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಆ ಮೊಟ್ಟೆಯನ್ನು ಸಂರಕ್ಷಿಸಿಡಲಾಗಿದೆ.
ಈ ಬೇಬಿ ಯಿಂಗ್ಲಿಯಾಂಗ್ ತಲೆಯಿಂದ ಬಾಲದವರೆಗೆ 10.6 ಇಂಚು (27cm) ಉದ್ದವಿದೆ. ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂನಲ್ಲಿ 6.7 ಇಂಚು ಉದ್ದದ ಮೊಟ್ಟೆಯೊಳಗೆ ಈ ಭ್ರೂಣವನ್ನು ಇಡಲಾಗಿದೆ. ಈ ಮೊಟ್ಟೆಯನ್ನು ಮೊದಲು 2000ರಲ್ಲಿ ಹೊರಗೆ ತೆಗೆಯಲಾಯಿತು. ಆದರೆ 10 ವರ್ಷಗಳ ಕಾಲ ಶೇಖರಣೆಯಲ್ಲಿ ಇರಿಸಲಾಯಿತು. ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾದಾಗ ಮತ್ತು ಹಳೆಯ ಪಳೆಯುಳಿಕೆಗಳನ್ನು ವಿಂಗಡಿಸುವಾಗ ಸಂಶೋಧಕರು ಈ ಮೊಟ್ಟೆಯನ್ನು ಗಮನಿಸಿದರು. ಆ ಮೊಟ್ಟೆಯೊಳಗೆ ಭ್ರೂಣವಿದೆ ಎಂಬುದು ನಂತರ ಅವರಿಗೆ ಗೊತ್ತಾಯಿತು.
ಇದನ್ನೂ ಓದಿ: Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!
Shocking Video: ತನಗೆ ಮತ ಹಾಕದ ಯುವಕರಿಗೆ ಬಸ್ಕಿ ಹೊಡೆಸಿ, ಎಂಜಲು ನೆಕ್ಕಿಸಿದ ರಾಜಕಾರಣಿ; ಶಾಕಿಂಗ್ ವಿಡಿಯೋ ಇಲ್ಲಿದೆ