
ನವದೆಹಲಿ, ಏಪ್ರಿಲ್ 19: ಕೆನಡಾದಲ್ಲಿ (Canda) ನಡೆದ ಗುಂಡಿನ ದಾಳಿಯೊಂದರಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ (Indian Student) ಮೃತಪಟ್ಟಿದ್ದಾರೆ. ಅಪರಿಚಿತರ ನಡುವೆ ನಡೆದ ಗುಂಡಿನ ದಾಳಿಯ ವೇಳೆ ಅಕಸ್ಮಾತಾಗಿ ಗುಂಡು ತಗುಲಿ, ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧಾವಾ (Harsimrat Randhawa) ಅನ್ಯಾಯವಾಗಿ ಮೃತಪಟ್ಟಿದ್ದಾರೆ. ಒಂಟೋರಿಯೋದ ಹ್ಯಾಮಿಲ್ಟನ್ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದ ಹರ್ಸಿಮ್ರತ್ ರಾಂಧಾವಾ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಭಾರತೀಯ ವಿದ್ಯಾರ್ಥಿನಿಯ ಸಾವಿನಿಂದ ಬಹಳ ದುಃಖವಾಗಿದೆ ಎಂದು ಟೊರೆಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದೆ.
ಸ್ಥಳಿಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಗುಂಡಿನ ದಾಳಿ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿನಿ ಅಮಾಯಕಳಾಗಿದ್ದಾಳೆ. ಎರಡು ವಾಹನಗಳ ಸವಾರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಸಾವಿನ ಮತ್ತು ಗುಂಡಿನ ದಾಳಿಯ ಸಂಬಂಧ ತನಿಖೆ ನಡೆಸಲಾಗುತ್ತಿದೆ.
ನಾವು ವಿಧ್ಯಾರ್ಥಿನಿಯ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಈ ಕಷ್ಟದ ಸಮಯದಲ್ಲಿ ಅವರ ಜೊತೆಗೆ ನಾವಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಹ್ಯಾಮಿಲ್ಟನ್ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರಸ್ತೆ ಬಳಿ ಬುಧವಾರ ಸಂಜೆ 7.30 ರ ಸುಮಾರಿಗೆ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಯಿತು. ತಕ್ಷಣವೇ ಸ್ಥಳಕ್ಕೆ ತೆರಳಿದ್ದೆವು. ಅಲ್ಲಿ ಭಾರತೀಯ ವಿದ್ಯಾರ್ಥಿನಿ ಗಾಯಗೊಂಡಿರುವುದು ಕಂಡುಬಂತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಮಾನ ಹೈಜಾಕ್ ಮಾಡಲು ಹೋಗಿ ಪ್ರಯಾಣಿಕನ ಗುಂಡೇಟಿಗೆ ಬಲಿಯಾದ ದಾಳಿಕೋರ
ಘಟನಾ ಸ್ಥಳದಿಂದ ದೊರೆತ ಸಿಸಿಟಿವಿ ವಿಡಿಯೋ ಪ್ರಕಾರ, ಕಪ್ಪು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಬಿಳಿ ಕಾರೊಂದರಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಆಗ ನಡೆದ ಗುಂಡಿನ ಚಿಕಮಕಿಯಲ್ಲಿ ಸಮೀಪದ ಕೆಲವು ಮನೆಗಳ ಕಿಟಕಿಗಳಿಗೆ ಕೂಡ ಗುಂಡು ತಗುಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್, ಬೇರೆ ಯಾರಿಗೂ ಏನು ಗಾಯಗಳು ಅಥವಾ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ