ಮೊಗಾದಿಶು: ಸೊಮಾಲಿಯಾ (Somalia) ರಾಜಧಾನಿ ಮೊಗಾದಿಶುನಲ್ಲಿ ಶುಕ್ರವಾರ ಗುಂಡಿನ ಚಕಮಕಿ ಮತ್ತು ಬಾಂಬ್ ಸ್ಫೋಟಗಳ ಸುರಿಮಳೆ ನಡೆದಿದೆ. ಮುಂಬೈನ ತಾಜ್ ಹೋಟೆಲ್ನಲ್ಲಿ (Mumbai Taj Hotel) ಉಗ್ರರು ಯಾವ ರೀತಿಯ ಹೋಟೆಲನ್ನು ವಶಕ್ಕೆ ಪಡೆದು, ಹತ್ಯಾಕಾಂಡ ನಡೆಸಿದ್ದರೋ ಅದೇ ರೀತಿಯಲ್ಲಿ ಸೊಮಾಲಿಯಾದ ಹಯಾತ್ ಹೋಟೆಲ್ (Hayat Hotel) ಮೇಲೆ ದಾಳಿ ನಡೆದಿದೆ. ಅಲ್ಖೈದಾ ಜೊತೆಗೆ ಲಿಂಕ್ ಆಗಿರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಸಾಕಷ್ಟು ಸಾವು- ನೋವುಗಳು ವರದಿಯಾಗಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಶುಕ್ರವಾರ ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದ ಹಲವಾರು ಸಾವು-ನೋವುಗಳು ವರದಿಯಾಗಿವೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹಯಾತ್ ಹೋಟೆಲ್ ಮೇಲಿನ ದಾಳಿಯು ಭದ್ರತಾ ಪಡೆಗಳು ಮತ್ತು ಜಿಹಾದಿ ಗುಂಪಿನ ಬಂದೂಕುಧಾರಿಗಳ ನಡುವೆ ಭಾರೀ ಗುಂಡಿನ ಚಕಮಕಿಯನ್ನು ಉಂಟುಮಾಡಿತು. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿ ಅಬ್ದುಕದಿರ್ ಹಸನ್ ತಿಳಿಸಿದ್ದಾರೆ. ಬಂದೂಕುಧಾರಿಗಳು ಹೋಟೆಲ್‌ಗೆ ಬಲವಂತವಾಗಿ ನುಗ್ಗುವ ಕೆಲವೇ ನಿಮಿಷಗಳ ಮೊದಲು ಭಾರೀ ಸ್ಫೋಟ ಕೂಡ ಸಂಭವಿಸಿತ್ತು ಎನ್ನಲಾಗಿದೆ.
ಇದನ್ನೂ ಓದಿ: Bomb Threat: ಬ್ಯಾಗ್ನಲ್ಲಿ ಬಾಂಬ್ ಇದೆ ಎಂದ ಇಂಡಿಗೋ ಪ್ರಯಾಣಿಕ; ಆಮೇಲೇನಾಯ್ತು?
ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರಿಂದ ಅಲ್-ಶಬಾಬ್ ಭಯೋತ್ಪಾದಕರು ಮೊಗಾದಿಶುವಿನ ಹಯಾತ್ ಹೋಟೆಲ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಅಲ್-ಶಬಾಬ್ ಸಂಘಟನೆ ಕಳೆದ 10 ವರ್ಷಗಳಿಂದ ಸೊಮಾಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಈ ವರ್ಷದ ಮೇನಲ್ಲಿ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅಧಿಕಾರ ವಹಿಸಿಕೊಂಡ ನಂತರ ಸೊಮಾಲಿಯಲ್ಲಿ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ.
ಮೊದಲ ಸ್ಫೋಟ ಉಂಟಾದ ಕೆಲವು ನಿಮಿಷಗಳ ನಂತರ ಹೋಟೆಲ್ ಹೊರಗೆ ಎರಡನೇ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೊದಲ ಸ್ಫೋಟದ ನಂತರ ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಕರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿ ಗಾಯಗೊಂಡಿದ್ದು, ಕೆಲವರು ಸಾವನ್ನಪ್ಪಿರುವ ಕುರಿತೂ ವರದಿಯಾಗಿವೆ. ಆದರೆ, ಸಾವು-ನೋವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇದನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದ ಅನಂತ್ನಾಗ್ನಲ್ಲಿ ಎನ್ಕೌಂಟರ್; ಹಿಜ್ಬ್ ಕಮಾಂಡರ್ ಹತ್ಯೆ
“ಹೋಟೆಲ್ನ ಪ್ರದೇಶವನ್ನು ಸುತ್ತುವರಿಯಲಾಗಿದೆ. ಭದ್ರತಾ ಪಡೆಗಳು ಮತ್ತು ಬಂದೂಕುಧಾರಿಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ” ಎಂದು ಒಬ್ಬ ಪ್ರತ್ಯಕ್ಷದರ್ಶಿ ಮೊಹಮದ್ ಸಲಾದ್ ಹೇಳಿದ್ದಾರೆ. ಸುಮಾರು 15 ವರ್ಷಗಳಿಂದ ಸೊಮಾಲಿಯಾದ ದುರ್ಬಲವಾದ ಕೇಂದ್ರ ಸರ್ಕಾರದ ವಿರುದ್ಧ ಮಾರಣಾಂತಿಕ ದಂಗೆಯನ್ನು ನಡೆಸುತ್ತಿರುವ ಅಲ್-ಖೈದಾ ಲಿಂಕ್ಡ್ ಜಿಹಾದಿಸ್ಟ್ ಗುಂಪು ಈ ದಾಳಿಯನ್ನು ತಾವೇ ಮಾಡಿರುವುದಾಗಿ ಘೋಷಿಸಿಕೊಂಡಿದೆ.