Gotabaya Rajapaksa Resigns: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ

ರಾಜೀನಾಮೆಯನ್ನು ಶ್ರೀಲಂಕಾದ ಸ್ಪೀಕರ್ ಅಂಗೀಕರಿಸಿದ್ದು, ಜುಲೈ 22ರಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Gotabaya Rajapaksa Resigns: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ
ಗೊಟಬಯ ರಾಜಪಕ್ಸ
Image Credit source: Zee News
Edited By:

Updated on: Jul 15, 2022 | 9:59 AM

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಿಂದ (Sri Lanka Economic Crisis) ಓಡಿಹೋಗಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapakse) ಶುಕ್ರವಾರ (ಜುಲೈ 15) ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಾಪ ಅಬೇವರ್ಧೆನಾ ಅಂಗೀಕರಿಸಿದ್ದು, ಜುಲೈ 22ರಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪ್ರಸ್ತುತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಹೊಣೆ ವಹಿಸಿಕೊಂಡಿದ್ದಾರೆ. ಆದರೆ ಇವರೂ ಸಹ ಪ್ರಧಾನಿ ಗಾದಿಯಿಂದ ಕೆಳಗೆ ಇಳಿಯಬೇಕೆಂದು ಜನರು ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀಲಂಕಾ ಸಂಸತ್ತಿನ ಮಹತ್ವದ ಅಧಿವೇಶನ ನಾಳೆ ನಡೆಯಲಿದೆ.

ಇದನ್ನೂ ಓದಿ: Gotabaya Rajapaksa Profile: ಆಗ ಹೀರೊ ಈಗ ವಿಲನ್; ಶ್ರೀಲಂಕಾ ಬಿಕ್ಕಟ್ಟಿನ ಖಳನಾಯಕ ಗೊಟಬಯ ರಾಜಪಕ್ಸ

ಜನರ ಪ್ರತಿಭಟನೆಗೆ ಹೆದರಿ ತರಾತುರಿಯಲ್ಲಿ ಶ್ರೀಲಂಕಾದಿಂದ ಮಾಲ್ಡೀವ್ಸ್​ಗೆ ಓಡಿ ಹೋಗಿದ್ದ ಗೊಟಬಯ ರಾಜಪಕ್ಸ ಇದೀಗ ಸಿಂಗಾಪುರಕ್ಕೆ ಹಾರಿದ್ದಾರೆ. ಅಲ್ಲಿಂದ ಜೆದ್ದಾ, ನಂತರ ಸೌದಿ ಅರೇಬಿಯಾಕ್ಕೆ ಹೋಗುವುದು ಅವರ ಉದ್ದೇಶ ಎಂದು ಹಲವು ಸುದ್ದಿಮಾಧ್ಯಮಗಳು ವರದಿ ಮಾಡಿವೆ. ಜನರ ಆಕ್ರೋಶದಿಂದ ತಮ್ಮ ಸಂಪತ್ತು ರಕ್ಷಿಸಿಕೊಳ್ಳಲು ಅಧಿಕಾರವನ್ನು ಗುರಾಣಿಯಂತೆ ಗೊಟಬಯ ಬಳಸಿಕೊಳ್ಳುತ್ತಿದ್ದರು. ಅಧ್ಯಕ್ಷ ಗಾದಿಯಲ್ಲಿ ಇರುವವರೆಗೆ ಅವರಿಗೆ ಬಂಧನದಿಂದ ವಿನಾಯ್ತಿಯೂ ಸೇರಿದಂತೆ ಹಲವು ಸವಲತ್ತಗಳು ದೊರೆಯುತ್ತಿದ್ದವು. ಅದೇ ಕಾರಣಕ್ಕೆ ಅವರು ಸ್ವದೇಶದಿಂದ ಬಹುದೂರ ಹೋದ ನಂತರ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರು.

ಅಧ್ಯಕ್ಷ ಸ್ಥಾನಕ್ಕೆ ಬುಧವಾರ (ಜುಲೈ 13) ರಾಜೀನಾಮೆ ಕೊಡುವುದಾಗಿ ಹೇಳಿದ್ದ ಗೊಟಬಯ ನಂತರ ಮಾತಿಗೆ ತಪ್ಪಿದ್ದರು. ಇದು ಅಲ್ಲಿನ ಜನರನ್ನು ಮತ್ತಷ್ಟು ಕೆರಳಿಸಿತ್ತು. ಗೊಟಬಯ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಪೀಕರ್ ಮಹಿಂದಾ ಯಾಪ ಅಬೇವರ್ಧೆನಾ ಆದಷ್ಟು ಬೇಗ ರಾಜೀನಾಮೆ ಸಲ್ಲಿಸಿ ಇಲ್ಲವೇ ನಾವು ನಿಮ್ಮನ್ನು ಹುದ್ದೆಯಿಂದ ಕಿತ್ತು ಹಾಕುವ ಆಯ್ಕೆ ಪರಿಗಣಿಸುತ್ತೇವೆ ಎಂದು ಎಚ್ಚರಿಸಿದ್ದರು.

Published On - 9:39 am, Fri, 15 July 22