ಚೀನಾದಲ್ಲಿ ಏನಾಗ್ತಿದೆ? ವಾಣಿಜ್ಯ ಇಲಾಖೆ ಸೂಚನೆಯಿಂದ ಭಯಗೊಂಡಿದ್ದಾರೆ ಅಲ್ಲಿನ ಜನರು !

| Updated By: Lakshmi Hegde

Updated on: Nov 02, 2021 | 6:08 PM

ವಾಣಿಜ್ಯ ಸಚಿವಾಲಯದ ಸೂಚನೆ ಕೇಳಿ ಜನರು ಹೆದರಿದ ಬೆನ್ನಲ್ಲೇ ಚೀನಾದ ಕಮ್ಯೂನಿಷ್ಟ್​ ಪಾರ್ಟಿ ಬೆಂಬಲಿತ ಪತ್ರಿಕೆಯೊಂದು ಈ ಬಗ್ಗೆ ಲೇಖನ ಬರೆದಿದೆ.  ಜನರು ವಿಪರೀತ ಯೋಚನೆ ಮಾಡಬೇಡಿ ಎಂದಿದೆ.

ಚೀನಾದಲ್ಲಿ ಏನಾಗ್ತಿದೆ? ವಾಣಿಜ್ಯ ಇಲಾಖೆ ಸೂಚನೆಯಿಂದ ಭಯಗೊಂಡಿದ್ದಾರೆ ಅಲ್ಲಿನ ಜನರು !
ಸಾಂಕೇತಿಕ ಚಿತ್ರ
Follow us on

ಚೀನಾದ ಕೆಲವು ನಗರಗಳಲ್ಲಿ ಈಗಾಗಲೇ ಕೊವಿಡ್​ 19 ಸೋಂಕಿನ ಸಂಖ್ಯೆ ಹೆಚ್ಚಾಗಿದ್ದು, ಲಾಕ್​ಡೌನ್​ ಮಾಡಲಾಗಿದೆ. ಆದರೆ ಇದೀಗ ಚೀನಾ ಸರ್ಕಾರ ಅಲ್ಲಿನ ಜನರಿಗೆ ನಿರ್ದೇಶನವೊಂದನ್ನು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಊಹಾಪೋಹಗಳು ಹರಿದಾಡುತ್ತಿವೆ. ದಿನನಿತ್ಯದ ಅಗತ್ಯ ವಸ್ತುಗಳನ್ನು ಸಾಕಷ್ಟು ಸಂಗ್ರಹ ಮಾಡಿಟ್ಟುಕೊಳ್ಳಿ ಎಂದು ಜನರಿಗೆ ಸೂಚಿಸಿರುವ ಚೀನಾ ಸರ್ಕಾರ, ಆಹಾರ ಸರಬರಾಜನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಿ  ಎಂದು ಸ್ಥಳೀಯ ಆಡಳಿತಗಳಿಗೆ ನಿರ್ದೇಶನ ನೀಡಿದೆ.  

ಇದೀಗ ಚೀನಾದ ವಾಣಿಜ್ಯ ಸಚಿವಾಲಯ ಈ ನಿರ್ದೇಶನವನ್ನು ಹೊರಡಿಸಿದೆ. ಚೀನಾದಲ್ಲಿ ಅಕ್ಟೋಬರ್​​ನಲ್ಲಿ ವಿಪರೀತ ಮಳೆಯಾಗಿದ್ದು, ಇಲ್ಲಿನ ಶಾನ್​ಡಾಂಗ್​ ಪ್ರಾಂತ್ಯ ಹಾನಿಗೀಡಾಗಿದೆ. ಇದು ಚೀನಾದಲ್ಲಿಯೇ ಅತ್ಯಂತ ದೊಡ್ಡ ತರಕಾರಿ ಬೆಳೆಯುವ ಪ್ರದೇಶವಾಗಿದ್ದು, ಭಾರಿ ಮಳೆಯಿಂದ ಬಹುತೇಕ ಬೆಳೆ ನಾಶವಾಗಿದೆ.  ಈ ಮಧ್ಯೆ ಕೊವಿಡ್​ 19 ಸಾಂಕ್ರಾಮಿಕ ಕೂಡ ಹೆಚ್ಚುತ್ತಿದ್ದು, ಆಹಾರ ಪೂರೈಕೆ ಕೊರತೆಯೊಂದಿಗೆ ಬೆಲೆ ಏರಿಕೆ ಬಿಸಿಯೂ ದೇಶದ ಜನರಿಗೆ ತಟ್ಟುತ್ತಿದೆ. ದಿನನಿತ್ಯ ಅಗತ್ಯವಿರುವ ತರಕಾರಿ, ಮಾಂಸ ಸೇರಿ ಇನ್ನಿತರ ವಸ್ತುಗಳ ಬೆಲೆ, ಪೂರೈಕೆ, ಬೇಡಿಕೆಗಳ ಬಗ್ಗೆ ಸರಿಯಾಗಿ ಟ್ರ್ಯಾಕ್​ ಮಾಡುವಂತೆಯೂ ಸಚಿವಾಲಯ ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿದೆ.   ಇನ್ನು ಚೀನಾದಲ್ಲಿ ಬೀಜಿಂಗ್​ ಸೇರಿ ಒಟ್ಟು 14 ಪ್ರಾಂತ್ಯಗಳಲ್ಲಿ ಇದೀಗ ಕೊವಿಡ್​ 19 ಹೆಚ್ಚಳವಾಗಿದೆ. ಅದರಲ್ಲೂ ಕೆಲವು ನಗರಗಳಲ್ಲಿ ಈಗಾಗಲೇ ಲಾಕ್​ಡೌನ್​ ಕೂಡ ಆಗಿದೆ.  ಪ್ರಾಂತೀಯವಾಗಿಯೂ ಒಂದಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಈ ಮಧ್ಯೆ ಚೀನಾ ಸರ್ಕಾರ ಹೊರಡಿಸಿದ ಈ ಆದೇಶದ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ.

ದಿನನಿತ್ಯದ ಬಳಕೆಯ ಆಹಾರ ವಸ್ತುಗಳು ಸೇರಿ, ಅಗತ್ಯ ವಸ್ತುಗಳನ್ನೆಲ್ಲ ಸಂಗ್ರಹಿಸಿಕೊಳ್ಳಿ ಎಂದು ವಾಣಿಜ್ಯ ಸಚಿವಾಲಯ ಪೋಸ್ಟರ್​ ಮೂಲಕ ನೀಡಿದ ಸಂದೇಶ ಯಾತಕ್ಕೆ? ಚೀನಾದಲ್ಲಿ ಹೆಚ್ಚುತ್ತಿರುವ ಆಹಾರ ಪೂರೈಕೆ ಬಿಕ್ಕಟ್ಟಿನ ಕಾರಣಕ್ಕೋ ಅಥವಾ ಮತ್ತೆ ಇಡೀ ದೇಶ ಲಾಕ್​ ಆಗಲಿದೆಯೋ ಎಂದು ಅಲ್ಲಿನ ಜನರು ಚರ್ಚಿಸುತ್ತಿದ್ದಾರೆ. ಚೀನಾದ ನೆಟ್ಟಿಗರು ತಮ್ಮ ಊಹೆಗಳನ್ನು ಹೊರಹಾಕುತ್ತಿದ್ದಾರೆ.  2020ರಲ್ಲಿ ಮೊದಲ ಬಾರಿಗೆ ಕೊವಿಡ್ 19 ಬಂದಾಗ, ಲಾಕ್​ಡೌನ್​ ಆಗುವ ಸಂದರ್ಭದಲ್ಲಿಯೂ ನಮ್ಮ ಬಳಿ ಹೀಗೆ ಅಗತ್ಯ ವಸ್ತುಗಳ ಸಂಗ್ರಹ ಮಾಡಿಕೊಳ್ಳುವಂತೆ ಹೇಳಲಿಲ್ಲ. ಈಗ್ಯಾಕೆ ಹೀಗೆ ಸೂಚನೆ ಕೊಡುತ್ತಿದ್ದೀರಿ? ನಮಗೆ ಭಯವಾಗುತ್ತಿದೆ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ವಾಣಿಜ್ಯ ಸಚಿವಾಲಯದ ಸೂಚನೆ ಕೇಳಿ ಜನರು ಹೆದರಿದ ಬೆನ್ನಲ್ಲೇ ಚೀನಾದ ಕಮ್ಯೂನಿಷ್ಟ್​ ಪಾರ್ಟಿ ಬೆಂಬಲಿತ ಪತ್ರಿಕೆಯೊಂದು ಈ ಬಗ್ಗೆ ಲೇಖನ ಬರೆದಿದೆ.  ಜನರು ವಿಪರೀತ ಯೋಚನೆ ಮಾಡಿ, ಹೆದರಿಕೊಳ್ಳುವ ಅಗತ್ಯವಿಲ್ಲ. ಒಮ್ಮೆ ಕೊವಿಡ್​ 19 ಹೆಚ್ಚಾಗಿ ಲಾಕ್​ಡೌನ್​ ಮಾಡುವ ಪರಿಸ್ಥಿತಿ ಬಂದರೆ ಸಾಮಾನ್ಯ ಜನರಿಗೆ ನಿತ್ಯ ಬಳಕೆ ವಸ್ತುಗಳಿಗೆ ಕಷ್ಟವಾಗಬಾರದು ಎಂದಷ್ಟೇ ಹೀಗೆ ನಿರ್ದೇಶನ ನೀಡಲಾಗಿದೆ ಎಂದು ಪತ್ರಿಕೆ ಹೇಳಿದೆ.

ಇದನ್ನೂ ಓದಿ: ಮುಸ್ಲಿಮರಿಗೆ ಅವಹೇಳನ ಮಾಡಿದ್ದ ಬಿಜೆಪಿ ನಾಯಕನಿಗೆ ಶೋಕಾಸ್​ ನೋಟಿಸ್​ ನೀಡಿದ ಪಕ್ಷ; ಎಫ್​ಐಆರ್​ ದಾಖಲು

ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶ್​ಮುಖ್​​ಗೆ ನವೆಂಬರ್​ 6ರವರೆಗೆ ಇ ಡಿ ಕಸ್ಟಡಿ; ವಿಶೇಷ ಪಿಎಂಎಲ್​ಎ ಕೋರ್ಟ್​ ಆದೇಶ