ಕೈರೋ: ಈಜಿಪ್ಟ್ನ ಸೂಯೆಜ್ ಕಾಲುವೆಯಲ್ಲಿ ದಡಕ್ಕೆ ಅಪ್ಪಳಿಸಿ ನಿಂತಿರುವ ದೈತ್ಯ ಸರಕು ಸಾಗಣೆ ಹಡಗು ಎವರ್ ಗಿವನ್ ಅನ್ನು ಮತ್ತೆ ಸಂಚಾರ ಯೋಗ್ಯವಾಗುವಂತೆ ಮಾಡುವ ಸವಾಲಿನ ಕೆಲಸಕ್ಕೆ ಈಜಿಪ್ಟ್ ಸರ್ಕಾರ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಎರಡೂ ದಡಕ್ಕೆ ತಾಗಿಕೊಂಡು ನಿಂತಿರುವ ಎವರ್ ಗಿವನ್ ಹಡಗನ್ನು ಕದಲಿಸಿ ಅದರ ಮಾರ್ಗದಲ್ಲಿ ಸಾಗುವಂತೆ ಮಾಡಿ, ಇತರ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನ ಭಾನುವಾರವೂ ಮುಂದುವರಿಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫಾತಾಹ್ ಅಲ್ ಸಿಸ್ಸಿ ಭಾನುವಾರ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಎವರ್ ಗಿವನ್ ಹಡಗಿನಲ್ಲಿರುವ ಕಂಟೇನರ್ಗಳನ್ನು ಕೆಳಗಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಸೂಯೆಜ್ ಕಾಲುವೆ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಒಸಮಾ ರಬೀ ಹೇಳಿದ್ದಾರೆ.
ಹಡಗಿನ ಅಡಿಯಲ್ಲಿರುವ ಮರಳು ತೆರವುಗೊಳಿಸಲು ಡ್ರೆಡ್ಜರ್ಗಳು (ಹೂಳೆತ್ತುವ ಯಂತ್ರಗಳು) ಯತ್ನಿಸುತ್ತಿವೆ. ಕಾಲುವೆ ಪ್ರಾಧಿಕಾರದ ಬಳಿಯಿರುವ ಟಗ್ ಬೋಟ್ಗಳ (ದೈತ್ಯ ಹಡಗನ್ನು ಎಳೆಯಬಲ್ಲ ದೋಣಿ) ಜೊತೆಗೆ ಹಾಲೆಂಡ್ ಮತ್ತು ಇಟಲಿಯ ಇನ್ನೆರೆಡು ಟಗ್ ಬೋಟ್ಗಳು ಭಾನುವಾರ ಸೂಯೆಜ್ ಕಾಲುವೆಗೆ ಬಂದವು. ಎವರ್ಗಿವನ್ ಹಡಗನ್ನು ಸಂಚಾರಯೋಗ್ಯ ಸ್ಥಿತಿಗೆ ತರುವ ಪ್ರಯತ್ನಕ್ಕೆ ಹವಾಮಾನದ ಅಡಚಣೆಯೂ ದೊಡ್ಡ ತಲೆನೋವಾಗಿದೆ. ಅಲೆಗಳು ಮತ್ತು ಗಾಳಿ ಮನುಷ್ಯಪ್ರಯತ್ನಕ್ಕೆ ಪೂರಕವಾಗಿಲ್ಲ ಎಂದು ಪ್ರಾಧಿಕಾರ ಟ್ವೀಟ್ನಲ್ಲಿ ತಿಳಿಸಿದೆ.
ಸರಕುಸಾಗಣೆ ಹಡಗಿನಲ್ಲಿರುವ ಕಂಟೇನರ್ಗಳನ್ನು ಕೆಳಗಿಳಿಸುವ ಪ್ರಯತ್ನಕ್ಕೂ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಡಗಿನಿಂದ ತುರ್ತಾಗಿ ಕಂಟೇನರ್ಗಳನ್ನು ಕೆಳಗಿಳಿಸಲು ಬೇಕಾದ ವಿಶೇಷ ಉಪಕರಣಗಳ ಖರೀದಿಗೂ ಈಜಿಪ್ಟ್ ಅಧ್ಯಕ್ಷರು ಒಪ್ಪಿಗೆ ಎನೀಡಿದ್ದಾರೆ. ಕಾಲುವೆಯಲ್ಲಿ ಸಿಲುಕಿರುವ ಎವರ್ಗಿವನ್ ಅಲ್ಲಿಂದ ಕದಲುವಂತೆ ಮಾಡುವ ಪ್ರಯತ್ನಕ್ಕೆ ಶನಿವಾರ ರಾತ್ರಿ ತುಸು ಫಲ ಸಿಕ್ಕಿದೆ. ಹಡಗಿನ ಅಡಿಯಲ್ಲಿರುವ ಹೂಳನ್ನು ತೆರವುಗೊಳಿಸಲು ಸತತ ಪ್ರಯತ್ನ ಸಾಗಿದೆ. ಕಾಲುವೆಯಲ್ಲಿ ಹಡಗು ಸಿಲುಕಿಕೊಳ್ಳಲು ವಾತಾವರಣವೇ ಕಾರಣ. ಎಂಜಿನ್ ಅಥವಾ ಮನುಷ್ಯ ತಪ್ಪುಗಳು ಅಲ್ಲ ಎಂದು ಹಡಗಿನ ಸಿಬ್ಬಂದಿ ಮತ್ತು ನಿರ್ವಹಣೆಯ ಹೊತ್ತಿರುವ ಬರ್ನ್ಹಾರ್ಡ್ ಶಟಲ್ ಶಿಪ್ಮ್ಯಾನೇಜ್ಮೆಂಟ್ ಕಂಪನಿಯ ಟೆಕ್ನಿಕಲ್ ಮ್ಯಾನೇಜರ್ ಹೇಳಿದ್ದಾರೆ.
ಇದನ್ನೂ ಓದಿ: ಸೂಯೆಜ್ ಕಾಲುವೆಯಲ್ಲಿ 1312 ಅಡಿ ಉದ್ದದ ಹಡಗಿನಿಂದ ಟ್ರಾಫಿಕ್ ಜಾಮ್; ದಿನಕ್ಕೆ 70 ಸಾವಿರ ಕೋಟಿ ರೂ. ನಷ್ಟ
ಕದಲಿತು ಹಡಗು- ಕಾಲುವೆಯಲ್ಲಿ ಸಂಭ್ರಮಾಚರಣೆ
14 ಟಗ್ ಬೋಟ್ಗಳ ಸತತ ಪ್ರಯತ್ನದಿಂದ ಎವರ್ಗಿವನ್ ಹಡಗು ಶನಿವಾರ ರಾತ್ರಿ ತುಸುವೇ ಕದಲಿದೆ. ಇದು ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆಯಲ್ಲಿದ್ದ 14 ಟಗ್ಬೋಟ್ಗಳು ಒಂದೇ ಸಮ ಹಾರ್ನ್ ಮೊಳಗಿಸಿ ಸಂಭ್ರಮಿಸಿವೆ. ಸಂಭ್ರಮಾಚರಣೆಯ ವಿಡಿಯೊ ಇದೀಗ ವೈರಲ್ ಆಗಿದೆ.
#EverGiven has moved 2 inches
all tugBoats happy
Hoooorray #suezcanel pic.twitter.com/srHDtuXB8m— ܡܐܪܝܘ ???? (@MarioLeb79) March 27, 2021
ಏನೇನು ಸಿಕ್ಕಿಹಾಕಿಕೊಂಡಿದೆ?
ಸೂಯೆಜ್ ಕಾಲುವೆಯಲ್ಲಿ ಈಗ ಸಿಕ್ಕಿಹಾಕಿಕೊಂಡಿರುವುದು ಒಟ್ಟು 1.2 ಕೋಟಿ ಟನ್ ಸರಕು. 1 ಟನ್ ಅಂದರೆ ಸಾವಿರ ಕಿಜಿ. ಅಂಥ ಸಾವಿರ ಕೆಜಿಯನ್ನು 1.2 ಕೋಟಿಯಿಂದ ಗುಣಿಸಿದರೆ ಎಷ್ಟು ಮೊತ್ತ ಬರುತ್ತದೋ ಅಷ್ಟು ಸರಕು ಸಿಕ್ಕಿಹಾಕಿಕೊಂಡಿದೆ. ಅದರಲ್ಲಿ ಶೇ 34.1ರಷ್ಟು ಕಂಟೇನರ್ಗಳು, ಶೇ 24.6 ಕಚ್ಚಾ ತೈಲ, ಶೇ 6.4ರಷ್ಟು ಸ್ವಚ್ಛ ಪೆಟ್ರೋಲಿಯಂ ಉತ್ಪನ್ನಗಳು, ಧಾನ್ಯಗಳು ಶೇ 6.1, ಕಲ್ಲಿದ್ದಲು ಶೇ 6, ಎಲ್ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಶೇ 3.1, ಎಲ್ಎನ್ಜಿ (ಲಿಕ್ವಿಡ್ ನ್ಯಾಚುರಲ್ ಗ್ಯಾಸ್) ಶೇ 2.9, ಕಬ್ಬಿಣ ಶೇ 6.7, ಗೊಬ್ಬರ ಶೇ 5.2, ಇತರ ಶೇ 2.7 ಮತ್ತು ವಾಹನಗಳು ಶೇ 2.2ರಷ್ಟಿದೆ.
ತಜ್ಞರ ನೆರವು ಪಡೆದುಕೊಂದು ಎವರ್ ಗಿವನ್ ಸುತ್ತ ಇರುವ ಮರಳು ಹಾಗೂ ಮಣ್ಣು ತೆಗೆಯಲಾಗುತ್ತಿದೆ. ಇತ್ತ ಈ ಘಟನೆ ನಡೆದ ನಂತರದಿಂದ ಸೂಯೆಜ್ ಬಳಿ 200ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕಿವೆ. ಇನ್ನು ಐದು ದಿನದೊಳಗೆ ಮತ್ತೆ 137 ಸೇರ್ಪಡೆ ಆಗಲಿವೆ ಎನ್ನಲಾಗುತ್ತಿದೆ. ಈಗಾಗಲೇ ಶಿಪ್ಪಿಂಗ್ ಕಂಪೆನಿಗಳು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಾಟ ಆರಂಭಿಸಿವೆ. ಆದರೂ ಈ ಮಾರ್ಗವು ಏಷ್ಯಾ ಹಾಗೂ ಯುರೋಪ್ ಮಧ್ಯದ ಪ್ರಯಾಣಕ್ಕೆ ಸರಾಸರಿಯಾಗಿ ಕನಿಷ್ಠ 7 ದಿನಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: Suez Canal Blockage: ಎವರ್ ಗಿವನ್ ಕಂಟೇನರ್ ಹಡಗು ಬಿಡಿಸಲು ಅಮೆರಿಕ ನೆರವು; ವಿಶ್ವ ವಾಣಿಜ್ಯ ಚಟುವಟಿಕೆ ಅಯೋಮಯ
Published On - 10:29 pm, Sun, 28 March 21