2007ರಲ್ಲಿ ಪ್ರವಾದಿ ಮೊಹಮ್ಮದರ ಮುಖವನ್ನು ನಾಯಿಯ ದೇಹದೊಂದಿಗೆ ಚಿತ್ರಿಸಿ, ತೀವ್ರ ವಿವಾದ ಸೃಷ್ಟಿಸಿದ್ದ ಸ್ವೀಡಿಶ್ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್ ಭಾನುವಾರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವೀಡನ್ ದೇಶದ ಮಾರ್ಕರಿಡ್‌ನ ದಕ್ಷಿಣ ಪಟ್ಟಣದಲ್ಲಿ ಕಾರು ಅಪಘಾತವಾಗಿ ಕಾರ್ಟೂನಿಸ್ಟ್ ಮೃತಪಟ್ಟಿದ್ದಾಗಿ ಮಾಹಿತಿ ನೀಡಿದ್ದಾರೆ.
75ವರ್ಷದ ವಿಲ್ಕ್ಸ್ 2007ರಿಂದ ಈಚೆಗೆ ಪೊಲೀಸ್ ರಕ್ಷಣೆಯಲ್ಲೇ ಇದ್ದರು. ಅವರು ಪ್ರವಾದಿ ಮೊಹಮ್ಮದರ ವಿವಾದಾತ್ಮಕ ಚಿತ್ರ ರಚನೆ ಮಾಡಿ, ಅದು ಪ್ರಕಟವಾದಾಗಿನಿಂದಲೂ ಜೀವ ಅಪಾಯದಲ್ಲೇ ಇತ್ತು. ಅನೇಕ ಕಡೆಗಳಿಂದ ಜೀವ ತೆಗೆಯುವುದಾಗಿ ಬೆದರಿಕೆಗಳು ಬಂದಿದ್ದವು. ಭಾನುವಾರವೂ ಕೂಡ ಅವರು ಪೊಲೀಸ್ ವಾಹನದಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರಿದ್ದ ಕಾರಿಗೆ ಟ್ರಕ್ವೊಂದು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರ್ಟೂನಿಸ್ಟ್ ಜತೆ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ವಿಲ್ಕ್ಸ್ ಸಾವಿನ ಬಗ್ಗೆ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಸ್ವೀಡಿಶ್ ಪೊಲೀಸರು, ನಿಜಕ್ಕೂ ಇದು ದುರಂತ. ಈ ಪ್ರಕರಣವನ್ನು ಸುಲಭಕ್ಕೆ ಬಿಡುವುದಿಲ್ಲ. ನಾವು ತನಿಖೆ ನಡೆಸುತ್ತೇವೆ. ಸದ್ಯದ ಮಟ್ಟಿಗೆ ಈ ಅಪಘಾತದಲ್ಲಿ ಬೇರೆ ಯಾರದ್ದೋ ಕೈವಾಡವಿದೆ ಎಂದು ಹೇಳಲು ಯಾವುದೇ ಸಾಕ್ಷಿಗಳೂ ಇಲ್ಲ ಎಂದಿದ್ದಾರೆ.
ಇನ್ನು ಪ್ರವಾದಿ ಮೊಹಮ್ಮದರ ಚಿತ್ರ ಬಿಡಿಸುವುದು, ಅವರ ವಿರುದ್ಧ ಏನೇ ಮಾತನಾಡಿದರೂ ಅದನ್ನು ಇಸ್ಲಾಂನಲ್ಲಿ ಬಹುಪಾಲು ಜನರು ಸಹಿಸುವುದಿಲ್ಲ. ಅಂಥವ ಹತ್ಯೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಅಂಥದ್ದರಲ್ಲಿ ಈ ವಿಲ್ಕ್ಸ್ ಪ್ರವಾದಿಯವರನ್ನು ಕೆಟ್ಟದಾಗಿ ಚಿತ್ರಿಸಿದ್ದರು. ಅಂದಿನಿಂದಲೂ ಹಲವರು ವಿಲ್ಕ್ಸ್ರನ್ನು ಟಾರ್ಗೆಟ್ ಮಾಡಿದ್ದರು. ಅವರನ್ನು ಪತ್ತೆ ಹಚ್ಚಿದವರಿಗೆ, ಹತ್ಯೆ ಮಾಡಿದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು. 2015ರಲ್ಲಿ ವಿಲ್ಕ್ಸ್ ಕೋಪನ್ ಹ್ಯಾಗನ್ನಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭ ನಡೆದ ಬೆನ್ನಲ್ಲೇ ಅದರಲ್ಲಿ ಪಾಲ್ಗೊಂಡವರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ವಿಲ್ಕ್ಸ್ ಮನೆ ಮೇಲೆ ಬಾಂಬ್ ದಾಳಿ ಕೂಡ ಆಗಿತ್ತು. ಆದರೆ 2007ರಿಂದಲೂ ಇಲ್ಲಿಯವರೆಗೂ ಅವರು ಪೊಲೀಸ್ ಭದ್ರತೆಯಲ್ಲೇ ಇದ್ದು, ಜೀವ ಕಾಪಾಡಿಕೊಂಡಿದ್ದರು.
ಇದನ್ನೂ ಓದಿ: ನಟ ರಕ್ಷಿತ್ ಶೆಟ್ಟಿ ಕಡೆಯಿಂದ ಮಹತ್ವದ ಘೋಷಣೆ; ಅಭಿಮಾನಿಗಳಿಗೆ ಇದು ಖುಷಿ ಸುದ್ದಿ