2 ವರ್ಷದಿಂದ ವೇತನ ಸಿಕ್ಕಿಲ್ಲ ಎಂದು 104 ಆರೋಗ್ಯವಾಣಿ ಸಿಬ್ಬಂದಿಗಳಿಂದ ಪ್ರತಿಭಟನೆ, ಆರೋಗ್ಯ ಇಲಾಖೆ ಆಯುಕ್ತ ಹೇಳಿದ್ದೇನು?
ಕಳೆದ ಎರಡು ವರ್ಷಗಳಿಂದ ಸಿಬ್ಬಂದಿಗೆ ಸರಿಯಾದ ವೇತನ ಭತ್ಯೆ, ಕೋವಿಡ್ ಸಾಂಕ್ರಾಮಿಕ ವೇತನ ಭತ್ಯೆ, ಸರಿಯಾದ ಸಮಯಕ್ಕೆ ಕೊಡದ ಕಾರಣ ಇಂದು 104 ಆರೋಗ್ಯವಾಣಿಯ ಸಿಬ್ಬಂದಿ ಸ್ವಪ್ರೇರಣೆಯಿಂದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬೆಂಗಳೂರು: ಮಾಡಿರುವ ಕೆಲಸಕ್ಕೆ ಸಂಬಳ ಕೇಳಿದ ಸಿಬ್ಬಂದಿಗೆ ಅಧಿಕಾರಿಗಳು ಆವಾಜ್ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 104 ಸಹಾಯವಾಣಿಯಲ್ಲಿ ಕೆಲಸ ಮಾಡ್ತಿರೋ ಸಿಬ್ಬಂದಿ ತಾನು ಮಾಡಿದ ಕೆಲಸಕ್ಕೆ ಸಂಬಳ ಕೇಳಿದಕ್ಕೆ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಾಜ್ ಹಾಕಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಇನ್ನು ಕಳೆದ ಎರಡು ವರ್ಷಗಳಿಂದ ಸಿಬ್ಬಂದಿಗೆ ಸರಿಯಾದ ವೇತನ ಭತ್ಯೆ, ಕೋವಿಡ್ ಸಾಂಕ್ರಾಮಿಕ ವೇತನ ಭತ್ಯೆ, ಸರಿಯಾದ ಸಮಯಕ್ಕೆ ಕೊಡದ ಕಾರಣ ಇಂದು 104 ಆರೋಗ್ಯವಾಣಿಯ ಸಿಬ್ಬಂದಿ ಸ್ವಪ್ರೇರಣೆಯಿಂದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸಿಬ್ಬಂದಿಯಿಂದ ಪ್ರತಿಭಟನೆ ಆರೋಗ್ಯ ಇಲಾಖೆಯಡಿ ಬರುವ ಬೆಂಗಳೂರಿನ 104 ಸಹಾಯವಾಣಿ ಕೇಂದ್ರದಲ್ಲಿ ಸುಮಾರು 150ಕ್ಕಿಂತ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೆಲಸದ ಅವಧಿಗೂ ಮೀರಿ ಹೆಚ್ಚಿನ ಅವಧಿ ಕೆಲಸ ಮಾಡಿದ್ದಾರೆ. ಅಲ್ಲದೆ ವಾರದ ರಜೆಯನ್ನೂ ತೆಗೆದುಕೊಳ್ಳದೇ ದುಡಿದಿದ್ದಾರೆ. ಈ ವೇಳೆ ವೀಕಾಫ್, ಓವರ್‌ಟೈಂ ಕೆಲಸ ಮಾಡುವವರಿಗೆ ಇನ್ಸೆಂಟಿವ್ ಕೊಡುವ ಭರವಸೆ ನೀಡಿ ಅಧಿಕಾರಿಗಳು ಚನ್ನಾಗಿ ದುಡಿಸಿಕೊಂಡಿದ್ದಾರೆ. ಆದ್ರೆ ಈಗ 2 ತಿಂಗಳಿಂದ ಸಂಬಳ ನೀಡುತ್ತಿಲ್ಲವೆಂದು ಸಿಬ್ಬಂದಿ ಆರೋಪ ಮಾಡಿದ್ದಾರೆ.
ಕಷ್ಟಪಟ್ಟು ರಜೆಯನ್ನೂ ಪಡೆಯದೆ ಹೆಚ್ಚಿನ ಸಮಯ ಕೆಲಸ ಮಾಡಿದ ಸಿಬ್ಬಂದಿ ಎರಡು ವರ್ಷಗಳಿಂದ ಸಂಬಳ ಪಡೆದಿಲ್ಲವಂತೆ. ಹೀಗಾಗಿ ಈ ಬಗ್ಗೆ ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆದುಹಾಕ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ಸಿಬ್ಬಂದಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ನೋಂದಣಿ ಅಧಿಕಾರಿ, ಆರೋಗ್ಯ ಸಲಹಾ ಅಧಿಕಾರಿ, ಆಪ್ತಸಮಾಲೋಚನ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಿಬ್ಬಂದಿ ಆರೋಪ ಮಾಡಿದ್ದಾರೆ.
ಪ್ರತಿ ತಿಂಗಳು ವೇತನದ ಕುರಿತ ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಅವರು ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ. ಹಾಗೇಯೇ ಕಳೆದ ಎರಡು ವರ್ಷಗಳಿಂದ ಇನ್ಸೆಂಟಿವ್ ಆಗ್ಲಿ ಅಪ್ರೈಜಲ್ ಆಗ್ಲಿ ನೀಡಿಲ್ಲ. ಸಿಬ್ಬಂದಿ ಕೆಲಸ ನಿರ್ವಹಿಸುತ್ತಿರುವುದು ಕೋವಿಡ್ ಆಸ್ಪತ್ರೆಯ ಆವರಣದಲ್ಲಿ ಇದರ ಜೊತೆಗೆ ಗರ್ಭಿಣಿ ಮಹಿಳೆಯರು ಕೂಡ ಈ ಒಂದು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯ ಸಿಬ್ಬಂದಿಗಳು 104 ಆರೋಗ್ಯವಾಣಿಯ ಕರೆಗಳಲ್ಲದೆ 14410, ನ್ಯಾಷನಲ್ ಹೆಲ್ಪ್ ಲೈನ್ 1075, 108 ಔಟ್ ಬಾಂಡ್ ಕರೆಗಳು, MCTS, NDD, RCH ಈ ಎಲ್ಲಾ ಯೋಚನೆಯ ಕರೆಗಳನ್ನು ಸ್ವತಃ ಸಿಬ್ಬಂದಿ ನಿರ್ವಹಿಸುತ್ತಿದ್ದೆವೆ.
ನಮ್ಮಲ್ಲಿರುವ ಕಡಿಮೆ ಉದ್ಯೋಗಿಗಳ ಸಹಾಯದಿಂದ ಕೆಲಸ ನಿರ್ವಹಿದ್ದೇವೆ. ನಮ್ಮಲ್ಲಿರುವ ಮಾಹಿತಿ ಪ್ರಕಾರ 14410 ಕೋವಿಡ್ ಕೇರ್ ಸಹಾಯವಾಣಿಯನ್ನು ಪುನರಾರಂಬಿಸಲು 220 ಸಿಬ್ಬಂದಿಗಳೊಂದಿಗೆ ಪ್ರತಿ ತಿಂಗಳಿಗೆ 93,34,400 ಲಕ್ಷ ರೂಪಾಯಿಗಳಂತೆ ಆರು ತಿಂಗಳಿಗೆ 5.6 ಕೋಟಿ ಟೆಂಡರ್ ಅನ್ನು ಕರೆದಿದ್ದು ನಮ್ಮಲ್ಲಿರುವ (104) ಸಿಬ್ಬಂದಿಗಳನ್ನು ಬಳಸಿಕೊಂಡಿದ್ದಾರೆ. ಈ ಯೋಜನೆ ಟೆಂಡರ್ ಅನುದಾನವನ್ನು ಮತ್ತು ಮೇಲೆ ನಮೂದಿಸಿರುವ ಮೇಲಿನ ಎಲ್ಲಾ ಯೋಜನೆಗಳ ಅನುದಾನವನ್ನು ನಮಗೆ ಕೊಟ್ಟಿರುವುದಿಲ್ಲ. ಯಾವುದೇ ಹೊಸ ಸಿಬ್ಬಂದಿಗಳು ಇಲ್ಲದೆ ಈ ಎಲ್ಲ ಯೋಜನೆಗಳನ್ನು 104 ಸಿಬ್ಬಂದಿಗಳು ನಾವೇ ಮಾಡಿದ್ದೇವೆ. ನಮ್ಮ ಬೇಡಿಕೆಗಳನ್ನು ನಾವು ಕೇಳಿದ್ದಕ್ಕೆ ನಮ್ಮ ರಾಜ್ಯದ ಮುಖ್ಯಸ್ಥರಾದ ಶ್ರೀ ಮೊಹಮ್ಮದ್ ಯಾಕುಬ್ ಬೇಜವಾಬ್ದಾರಿ ತನದ ಕಾರಣವನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಯನ್ನು ಸಹ ಒದಗಿಸಲಾಗಿದೆ.
ಕಾರಣ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕಾಗಿ ಮಾನ್ಯ ಆರೋಗ್ಯ ಸಚಿವರಾದ ಡಾ. K ಸುಧಾಕರ್ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಲ್ಲಿ ನಮ್ಮ ಎಲ್ಲಾ ಸಹೋದ್ಯೋಗಿಗಳು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದು ಸಿಬ್ಬಂದಿ ಹಂಚಿದ್ದಾರೆ.
ಅಯುಕ್ತ ತ್ರಿಲೋಕ ಚಂದ್ರ ಸ್ಪಷ್ಟನೆ ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಮಿಷನರ್ ತ್ರಿಲೋಕ ಚಂದ್ರ, 104 ಸಂಬಂಧಪಟ್ಟಂತೆ ಬೆಂಗಳೂರಿನ ಮತ್ತು ಹುಬ್ಬಳ್ಳಿಯಲ್ಲಿ ಎರಡು ಕಾಲ್ ಸೆಂಟರ್ ಇದೆ. ಹುಬ್ಬಳ್ಳಿದ್ದು ಸ್ಟೇಟ್ ಬಜೆಟ್ನಲ್ಲಿ ಹಣ ರಿಲೀಸ್ ಆಗಿತ್ತು. ಹಾಗೆ ಬೆಂಗಳೂರಿನಲ್ಲಿ ಕೆಲಸ ಮಾಡ್ತಿರುವ NHM ಸಿಬ್ಬಂದಿಗೆ ಸಂಬಳ ರಿಲೀಸ್ ಆಗುತ್ತೇ. ಅವರಿಗೆ ಇರುವ ತೊಂದರೆಗಳನ್ನು ಬಗೆ ಹರಿಸ್ತಿವಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್ ಆರೋಗ್ಯದಲ್ಲಿ ಚೇತರಿಕೆ