ಮಿನ್ನಿಸೋಟಾ (ಅಮೆರಿಕ): ಹದಿನಾಲ್ಕು-ವರ್ಷ-ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದ ಶಿಕ್ಷಕನೊಬ್ಬ (teacher) ಸೆರೆಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸತ್ತಿದ್ದಾನೆ. ಸೆಪ್ಟೆಂಬರ್ 26 ರಂದು ಮಿನ್ನಿಸೋಟಾದ (Minnesota) ಸೆಂಟ್ ಲೂಯಿಸ್ ಕೌಂಟಿ ಸೆರೆಮನೆಯ ಸಿಬ್ಬಂದಿಯು 30-ವರ್ಷ-ವಯಸ್ಸಿನ ಸಬ್ಸ್ಟಿಟ್ಯೂಟ್ ಶಿಕ್ಷಕ ಬ್ರೆಂಡನ್ ಹೊಲ್ಬ್ರೂಕ್ (Brandon Holbrook) ತನ್ನ ಸೆಲ್ ನಲ್ಲಿ ಕರೆಗೆ ಪ್ರತಿಕ್ರಿಯಿಸದೆ, ನಿಶ್ಚಲನಾಗಿ ಅಂಗಾತವಾಗಿ ಬಿದ್ದಿರುವುದನ್ನು ಕಂಡಿದ್ದಾರೆ.
ಬ್ರೆಂಡನ್ ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿರಬಹುದೆಂದು ಶಂಕಿಸಿದ ಜೈಲು ಅಧಿಕಾರಿಗಳು ಕೂಡಲೇ ಅವನ ದೇಹದ ಮೇಲೆ ಒಂದು ತುರ್ತು ಸಿಪಿಆರ್ ನಡೆಸಿ ನಾರ್ಕನ್ ಅನ್ನು ಅವನ ದೇಹದೊಳಗೆ ಅಡ್ಮಿನಿಸ್ಟರ್ ಮಾಡಿದ್ದಾರೆ. ನಾರ್ಕನ್ ಅನ್ನೋದು ಡ್ರಗ್ಸ್ ಓವರ್ ಡೋಸ್ ಪರಿಣಾಮವನ್ನು ಕೂಡಲೇ ಕಡಿಮೆ ಮಾಡುವ ವಸ್ತುವಾಗಿದೆ.
ಬ್ರೆಂಡನ್ ಹೇಗೆ ಸತ್ತ ಅನ್ನುವ ಬಗ್ಗೆ ಪೊಲೀಸರಲ್ಲಿ ಸ್ಪಷ್ಟತೆ ಇಲ್ಲ. ಮಾದಕ ವಸ್ತುಗಳ ಓವರ್ ಡೋಸ್ ಅವನ ಪ್ರಾಣ ತೆಗೆಯಿತೇ ಅಥವಾ ಬೇರೊಂದು ರೀತಿಯಲ್ಲಿ ಸಾವನ್ನು ಕಂಡುಕೊಂಡನೇ ಅಂತ ಅವರಿಗೆ ಗೊತ್ತಾಗುತ್ತಿಲ್ಲ. ಯಾಕೆಂದರೆ ಅವನ ದೇಹದ ಮೇಲೆ ಯಾವುದೇ ಗಾಯದ ಕುರುಹು ಕಂಡಿಲ್ಲ.
ಮಧ್ಯಾಹ್ನ 3:15 ಗಂಟೆಗೆ ಜೈಲು ಆಧಿಕಾರಿಗಳು ಅವನ ಸೆಲ್ ಗೆ ಹೋದಾಗ ಬ್ರೆಂಡನ್ ಆರೋಗ್ಯದಿಂದ ಮತ್ತು ನಾರ್ಮಲ್ ಆಗಿದ್ದನಂತೆ. ಆದರೆ ಕೇವಲ ಅರ್ಧತಾಸಿನ ನಂತರ ಅವನು ಪ್ರಜ್ಞೆ ತಪ್ಪಿ ಬಿದ್ದಿದ್ದ. ಕೂಡಲೇ ಅವನನ್ನು ಸೆಂಟ್ ಲೂಯಿಸ್ ಸೆರೆಮನೆಯಿಂದ ಬಾರ್ನೆಸ್-ಜ್ಯೂಯಿಷ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಾಲಾಗಿದೆ. ಆದರೆ ಒಂದು ಗಂಟೆಯ ನಂತರ ಅವನು ಸತ್ತಿರುವನೆಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
ಸಾವಿನ ಕಾರಣವನ್ನು ಪತ್ತೆಮಾಡಲು ತನಿಖೆಯನ್ನು ಅರಂಭಿಸಲಾಗಿದೆ. ಪೊಲೀಸರು ಹೇಳುವ ಪ್ರಕಾರ ಅವನ ಸಾವು ಡ್ರಗ್ಸ್ ಓವರ್ ಡೋಸ್ ನಿಂದ ಸಂಭವಿಸಿಲ್ಲ ಮತ್ತು ಅವನ ದೇಹದ ಮೇಲೆ ಗಾಯದ ಗುರುತುಗಳಿಲ್ಲ.
ಬ್ರೆಂಡನ್ ಮರಣೋತ್ತರ ಪರೀಕ್ಷೆ ವರದಿ ಆದಷ್ಟು ಬೇಗ ಪೊಲೀಸರ ಕೈ ಸೇರುವ ನಿರೀಕ್ಷೆಯಿದೆ. ಹದಿನಾಲ್ಕು ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಮೂರು ಬಾರಿ ಅತ್ಯಾಚಾರ ನಡೆಸಿ ಆರೋಪವನ್ನು ಬ್ರೆಂಡನ್ ಹೊತ್ತಿದ್ದ. ಅವನ ಬಂಧನದ ನಂತರ ಇನ್ನೂ ಇಬ್ಬರು ಸಂತ್ರಸ್ತೆಯರು ಅವನು ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದ ಅಂತ ದೂರು ನೀಡಲು ಮುಂದೆ ಬಂದಿದ್ದಾರೆ.
ಪ್ರೌಢ ಶಾಲೆಯೊಂದರ ಮಾಜಿ ಶಿಕ್ಷಕನಾಗಿದ್ದ ಬ್ರೆಂಡನ್ ತನ್ನ ಹಳೆಯ ವಿದ್ಯಾರ್ಥಿನಿಯರಿಗೆ ಆನ್ಲೈನ್ ಪಾಠ ಮಾಡುತ್ತಿದ್ದ ಮತ್ತು ಸೋಷಿಯಲ್ ಮಿಡಿಯಾನಲ್ಲಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದ. ಪೊಲೀಸರ ಪ್ರಕಾರ ಅವನ ಮೂರು ಸಲ ಸಂತ್ರಸ್ತೆಯ ಮನೆಗೆ ಹೋಗಿದ್ದ ಮತ್ತು ಪ್ರತಿಬಾರಿ ಅವಳ ಮೇಲೆ ಆತ್ಯಾಚಾರ ನಡೆಸಿದ್ದ.
ಇನ್ನೆರಡು ವಾರಗಳಲ್ಲಿ ಅವನ ವಿಚಾರಣೆ ಶುರುವಾಗಬೇಕಿತ್ತು. ಎರಡನೇ ಡಿಗ್ರಿ ರೇಪ್ ನ ಮೂರು ಆರೋಪ ಮತ್ತು ಗುದಸಂಭೋಗದ 6 ಆರೋಪಗಳ ವಿಚಾರಣೆಗೆ ಅವನು ಒಳಗಾಗಲಿದ್ದ.
ಜೈಲಿನ ಎಂಟನೇ ಮಹಡಿಯಲ್ಲಿ ಕ್ವಾರಂಟೀನ್ ನಲ್ಲಿದ್ದ ಬ್ರೆಂಡನ್ ಕೋವಿಡ್ ಟೆಸ್ಟ್ ನ ಎರಡನೇ ನೆಗೆಟಿವ್ ವರದಿಗಾಗಿ ಕಾಯುತ್ತಿದ್ದ ಎಂದು ಕೌಂಟಿ ಎಕ್ಸಿಕ್ಯೂಟಿವ್ ಸ್ಯಾಮ್ ಪೇಜ್ ನ ಬಾತ್ಮೀದಾರ ಡಗ್ ಮೂರ್ ಹೇಳಿದ್ದಾರೆ. ವರದಿ ಸಿಕ್ಕ ಬಳಿಕ ಅವನನ್ನು ಬೇರೆ ಕೈದಿಗಳೊಂದಿಗೆ ಇರಿಸಲಾಗುತ್ತಿತ್ತು.
‘ಹಾಲ್‌ಬ್ರೂಕ್ ಕೇವಲ ಒಂದು ದಿನದ ಹಿಂದೆ ಮಾನಸಿಕ ಆರೋಗ್ಯ ಕಾರ್ಯಕರ್ತನನ್ನು ಭೇಟಿಯಾಗಿದ್ದ, ಮತ್ತು ಅವನ ಮಾನಸಿಕ ಸ್ಥಿತಿ ಸರಿಯಾಗಿತ್ತು,’ ಡಗ್ ಹೇಳಿದ್ದಾರೆ.
‘ತನ್ನ ಸೆಲ್‌ನಲ್ಲಿ ಅವರು ಗಾಯಗೊಂಡಿರಬಹುದಾದ ಸಾಧ್ಯತೆಯನ್ನು ಸೂಚಿಸುವ ಯಾವುದೇ ಕುರುಹು ಸಿಕ್ಕಿಲ್ಲ.’ ಎಂದು ಹೇಳಿರುವ ಡಗ್, ‘ಅವನಿಗೆ ಏನಾಯಿತೆಂದೇ ನಮಗೆ ಗೊತ್ತಾಗುತ್ತಿಲ್ಲ,’ ಎಂದಿದ್ದಾರೆ.
ಅವರ ವಕೀಲರಾದ ಸ್ಕಾಟ್ ರೋಸೆನ್‌ಬ್ಲಮ್ ಅವರು ಕೆಲವೇ ದಿನಗಳ ಹಿಂದೆ ತಮ್ಮ ಕಕ್ಷಿದಾರರೊಂದಿಗೆ ಮಾತನಾಡಿದ್ದರು ಮತ್ತು ಅವನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಹತಾಷ ಮನಸ್ಥಿತಿ ಕಾಣಲಿಲ್ಲ ಅಂತ ಹೇಳಿರುವರಾದರೂ ಅವನ ಸಾವು ಮಾತ್ರ ‘ಅತ್ಯಂತ ಅಸಹಜ’ ಎಂದು ಹೇಳಿದ್ದಾರೆ.
‘ನಾನು ಅವರೊಂದಿಗೆ ಮಾತನಾಡುತ್ತಿದ್ದೆವು ಮತ್ತು ಅವರು ಅತ್ಯಂತ ತಾರ್ಕಿಕ ಮತ್ತು ಸಮಂಜಸ, ಸುಸಂಬದ್ಧವಾಗಿ ಮಾತಾಡುತ್ತಿದ್ದರು ಮತ್ತು ಮಾತುಕತೆಯಲ್ಲಿ ಸಕ್ರಿಯನಾಗಿ ಭಾಗಿಯಾಗುತ್ತಿದ್ದರು,’ ಎಂದು ರೋಸೆನ್‌ಬ್ಲಮ್ ಹೇಳಿದ್ದಾರೆ.
ಕುಟುಂಬದ ಸದಸ್ಯರೊಂದಿಗೂ ಅವರು ಸಹಜ ಮತ್ತು ಲವಲವಿಕೆಯಿಂದ ಮಾತಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಬ್ರೆಂಡನ್ ಕುಟುಂಬದ ಸದಸ್ಯರೊಂದಿಗೆ ಮಾತಾಡಲು, ಮೇಲ್ ಕಳಿಸಲಿ ಐಪ್ಯಾಡ್ ಬಳಸುತ್ತಿದ್ದ. ಪೊಲೀಸರು ಅದರ ಪರಿಶೀಲನೆ ನಡೆಸಲಿದ್ದಾರೆ.