ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಉಗ್ರನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿಕ್ಕಿ ಹತ್ಯೆ
ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನನ್ನು ಅಪರಿಚಿತ ಬಂದೂಕುದಾರಿಗಳು ಮಸೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದೆ. ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಈತನಾಗಿದ್ದನು. ಈ ವರ್ಷ ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ಉನ್ನತ ಭಯೋತ್ಪಾದಕ ಕಮಾಂಡರ್ನ ನಾಲ್ಕನೇ ಹತ್ಯೆ ಇದಾಗಿದೆ.
ಜಮ್ಮು, ಸೆ.9: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (POK) ಮಸೀದಿಯೊಳಗೆ ಶುಕ್ರವಾರ ಅಪರಿಚಿತ ಬಂದೂಕುದಾರಿಗಳು ಭಯೋತ್ಪಾದಕ ದಾಳಿ ಪ್ರಕರಣ ಸಂಬಂಧ ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಷೇಧಿತ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿರುವ ರಿಯಾಜ್ ಅಹ್ಮದ್ ಅಲಿಯಾಸ್ ಅಬು ಖಾಸಿಮ್ ಹತ್ಯೆಯಾದ ಉಗ್ರ.
ರಾವಲ್ಕೋಟ್ ಪ್ರದೇಶದ ಅಲ್-ಖುದುಸ್ ಮಸೀದಿಯೊಳಗೆ ಮುಂಜಾನೆಯ ಪ್ರಾರ್ಥನೆಯ ಸಮಯದಲ್ಲಿ ಅಹ್ಮದ್ನನ್ನು ಅಪರಿಚಿತ ಬಂದೂಕುದಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವರದಿಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಹೇಳಿದ್ದಾರೆ.
ಅಹ್ಮದ್ ಹೆಚ್ಚಾಗಿ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಬೇಸ್ ಕ್ಯಾಂಪ್ನಿಂದ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಇತ್ತೀಚೆಗೆ ರಾವಲಕೋಟ್ಗೆ ಸ್ಥಳಾಂತರಗೊಂಡಿದ್ದನು. ಈತ ಲಷ್ಕರ್-ಎ-ತೊಯ್ಬಾದ ಮುಖ್ಯ ಕಮಾಂಡರ್ ಸಜ್ಜಾದ್ ಜಾತ್ನ ನಿಕಟವರ್ತಿಯಾಗಿದ್ದು, ಸಂಘಟನೆಯ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ಉನ್ನತ ಭಯೋತ್ಪಾದಕ ಕಮಾಂಡರ್ನ ನಾಲ್ಕನೇ ಹತ್ಯೆ ಇದಾಗಿದೆ. ರಿಯಾಜ್ ಅಹ್ಮದ್ ಜನವರಿ 1 ರಂದು ಧಂಗ್ರಿ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ.
ಇದನ್ನೂ ಓದಿ: ಪಾಕಿಸ್ತಾನದ ಇಬ್ಬರು ಉಗ್ರರು ತಾಜ್ ಹೋಟೆಲ್ನ್ನು ಸ್ಪೋಟಿಸಲಿದ್ದಾರೆ, ಮುಂಬೈ ಪೊಲೀಸರಿಗೆ ಬಂತು ಹೀಗೊಂದು ಬೆದರಿಕೆ ಕರೆ
ರಾಜೌರಿ ಜಿಲ್ಲೆಯ ಧಂಗ್ರಿ ಗ್ರಾಮದಲ್ಲಿ ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದರು ಮತ್ತು 13 ಜನರು ಗಾಯಗೊಂಡಿದ್ದಾರೆ. ಮರುದಿನ ಬೆಳಿಗ್ಗೆ ಸ್ಫೋಟಗೊಂಡ ಸುಧಾರಿತ ಸ್ಫೋಟಕ ಸಾಧನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.
ಮೂಲತಃ ಜಮ್ಮು ಪ್ರದೇಶದವನಾದ ಅಹ್ಮದ್ 1999ರಲ್ಲಿ ಗಡಿಯಾಚೆಗೆ ನುಸುಳಿದ್ದ. ಅವಳಿ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ಭಯೋತ್ಪಾದನೆಯ ಪುನರುಜ್ಜೀವನದ ಹಿಂದಿನ ಮಾಸ್ಟರ್ ಮೈಂಡ್ ಎಂದು ಈತನನ್ನು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ನಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ನ ಕಮಾಂಡರ್ನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಇಮ್ತಿಯಾಜ್ ಆಲಂ 15 ವರ್ಷಗಳಿಂದ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ.
ಕಾಶ್ಮೀರದಲ್ಲಿ ಅಲ್-ಖೈದಾದ ಶಾಖೆಯಾದ ಅನ್ಸಾರ್ ಗಜ್ವತ್-ಉಲ್-ಹಿಂದ್ನ ಮುಖ್ಯ ಕಮಾಂಡರ್ ಝಾಕಿರ್ ಮೂಸಾನನ್ನು 2019 ರ ಮೇ ತಿಂಗಳಲ್ಲಿ ಕೊಲ್ಲುವಂತೆ ಮಾಡಿದ ಆರೋಪ ಈತನ ಮೇಲಿತ್ತು. ಫೆಬ್ರವರಿಯಲ್ಲಿ, ಅಪರಿಚಿತ ಬಂದೂಕುದಾರಿಗಳು ಬಂದರು ನಗರ ಕರಾಚಿಯಲ್ಲಿ ಅಲ್-ಬದರ್ ಮುಜಾಹಿದ್ದೀನ್ ಮಾಜಿ ಕಮಾಂಡರ್ ಸೈಯದ್ ಖಾಲಿದ್ ರಾಜಾನನ್ನು ಗುಂಡಿಕ್ಕಿ ಕೊಂದಿದ್ದರು.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ