‘ಭಾರತದೊಂದಿಗೆ ಈಗ ಯಾವುದೇ ವಿವಾದವಿಲ್ಲ..ನಮಗೀಗ ಲಸಿಕೆ ಬೇಕು’ -ನೇಪಾಳ ಪ್ರಧಾನಿ ಕೆ.ಪಿ.ಓಲಿ

| Updated By: Lakshmi Hegde

Updated on: Jun 07, 2021 | 12:32 PM

ಹಳೆಯದನ್ನು ಮರೆಯಿರಿ..ಈಗ ನಮ್ಮೆರಡೂ ರಾಷ್ಟ್ರಗಳ ನಡುವಿನ ಸ್ನೇಹವನ್ನು ಗಮನದಲ್ಲಿಟ್ಟುಕೊಂಡು ನೇಪಾಳಕ್ಕೆ ಸಹಕಾರ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡುತ್ತೇನೆ ಎಂದು ನೇಪಾಳ ಪ್ರಧಾನಿ ಹೇಳಿದ್ದಾರೆ.

‘ಭಾರತದೊಂದಿಗೆ ಈಗ ಯಾವುದೇ ವಿವಾದವಿಲ್ಲ..ನಮಗೀಗ ಲಸಿಕೆ ಬೇಕು’ -ನೇಪಾಳ ಪ್ರಧಾನಿ ಕೆ.ಪಿ.ಓಲಿ
ಕೆ.ಪಿ.ಶರ್ಮಾ ಒಲಿ
Follow us on

ಭಾರತ ಮತ್ತು ನೇಪಾಳದ ನಡುವೆ ಗಡಿ ಸಂಘರ್ಷದ ವಿವಾದ ಎದ್ದಿದ್ದು ಗೊತ್ತೇ ಇದೆ. ಭಾರತದ ವಿರುದ್ಧ ಮಾತನಾಡಿದ್ದ ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಓಲಿ ವಿರುದ್ಧ ಅವರದ್ದೇ ಸಂಪುಟದ ಸಚಿವರೂ ಕೂಡ ತಿರುಗಿಬಿದ್ದಿದ್ದರು. ಭಾರತದೊಂದಿಗಿನ ಸಂಘರ್ಷ ಅಲ್ಲಿಯ ರಾಜಕೀಯದ ಮೇಲೆ ಕೂಡ ಪ್ರಭಾವ ಬೀರಿತ್ತು. ಆದರೀಗ ಭಾರತದೊಂದಿಗೆ ಇದ್ದ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ಕೆ.ಪಿ. ಓಲಿ ಘೋಷಿಸಿದ್ದಾರೆ.

ಹೌದು.. ಒಂದು ಕಾಲದಲ್ಲಿ ಭಾರತದೊಂದಿಗೆ ನಮಗೆ ಸಂಘರ್ಷ ಇತ್ತು. ತಪ್ಪು ಗ್ರಹಿಕೆಯಿಂದ ಹೀಗಾಗಿತ್ತು. ಆದರೆ ಈಗ ಅಂಥ ತಪ್ಪು ಗ್ರಹಿಕೆಗಳಿಲ್ಲ. ನಾವು ಹಿಂದಿನ ವಿವಾದಗಳಿಗೇ ಅಂಟಿಕೊಂಡು ಕುಳಿತುಕೊಳ್ಳಬಾರದು. ಭವಿಷ್ಯದ ದೃಷ್ಟಿಯಿಂದ ಸಕಾರಾತ್ಮಕ ಸಂಬಂಧವನ್ನು ಹೊಂದಬೇಕು ಎಂದು ಓಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನೇಪಾಳ-ಭಾರತ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಯಾವುದೇ ಕಷ್ಟ-ಸುಖವನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದೇವೆ. ಹಳೆಯದನ್ನು ಮರೆಯಿರಿ..ಈಗ ನಮ್ಮೆರಡೂ ರಾಷ್ಟ್ರಗಳ ನಡುವಿನ ಸ್ನೇಹವನ್ನು ಗಮನದಲ್ಲಿಟ್ಟುಕೊಂಡು ನೇಪಾಳಕ್ಕೆ ಸಹಕಾರ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡುತ್ತೇನೆ. ಹಾಗಂತ ಭಾರತ ನೇಪಾಳಕ್ಕೆ ಸಹಾಯ ಮಾಡೇ ಇಲ್ಲ ಎಂದರ್ಥವಲ್ಲ. ಸದ್ಯದ ಮಟ್ಟಿಗೆ ನೇಪಾಳಕ್ಕೆ ಕೊವಿಡ್ 19 ಲಸಿಕೆಯ ಅಗತ್ಯವಿದೆ. ಭಾರತ ಸೇರಿ ಎಲ್ಲ ನೆರೆ ರಾಷ್ಟ್ರಗಳೂ ನಮಗೆ ಸಹಕಾರ ನೀಡಲಿ ಎಂದು ಓಲಿ ಹೇಳಿದರು.

ನಮಗೆ ಕೊವಿಡ್​ ಲಸಿಕೆ ನೀಡಲು ಯಾವುದೇ ರಾಷ್ಟ್ರಗಳು ಮುಂದಾದರೂ, ಅದು ಭಾರತ, ಚೀನಾ, ಯುಎಸ್​ ಅಥವಾ ಯುಕೆಯೇ ಆಗಲಿ. ನಾವದನ್ನು ಖಂಡಿತ ಸ್ವೀಕರಿಸುತ್ತೇವೆ. ಅದರಲ್ಲಿ ಮತ್ತೆ ರಾಜಕೀಯ ಹುಡುಕುವ ಅಗತ್ಯವಿಲ್ಲ. ಚೀನಾ ನಮಗೆ 1.8 ಮಿಲಿಯನ್​ ವ್ಯಾಕ್ಸಿನ್ ನೀಡಿದ್ದರೆ, ಭಾರತ 2.1 ಮಿಲಿಯನ್​ ವ್ಯಾಕ್ಸಿನ್ ನೀಡಿದೆ. ಎರಡೂ ದೇಶಗಳಿಂದ ನಮಗೆ ಸಹಾಯ ಸಿಕ್ಕಿದೆ..ಈ ಎರಡೂ ರಾಷ್ಟ್ರಗಳಿಂದ ನಮಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳೂ ಸಿಕ್ಕಿವೆ. ನಾವು ಎರಡೂ ದೇಶಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದೂ ಓಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Nepal Political Crisis: ಕೆಪಿ ಶರ್ಮಾ ಒಲಿಗೆ ಮತ್ತೆ ಒಲಿದ ನೇಪಾಳದ ಪ್ರಧಾನಿ ಪಟ್ಟ