Video: ಪತ್ರಕರ್ತನ ಮೊಬೈಲ್​ ಕದ್ದು ಮಳ್ಳಾದ ಕಳ್ಳ; ಕದ್ದ ಮರುಕ್ಷಣವೇ ಅವನಿಗೇ ಗೊತ್ತಿಲ್ಲದೆ 20 ಸಾವಿರ ಜನರಿಗೆ ಮುಖ ತೋರಿಸಿದ !

| Updated By: Lakshmi Hegde

Updated on: Oct 21, 2021 | 4:53 PM

ಮೊಬೈಲ್​ ಕದ್ದಿದ್ದು ಗಂಭೀರ ವಿಚಾರವಾದರೂ ಇದೀಗ ಫನ್ನಿ ವಿಡಿಯೋವಾಗಿ ಮಾರ್ಪಟ್ಟಿದೆ. ನೆಟ್ಟಿಗರೊಬ್ಬರು ಶೇರ್​ ಮಾಡಿಕೊಂಡ ವಿಡಿಯೋಕ್ಕೆ 6.2 ಮಿಲಿಯನ್​ಗಳಷ್ಟು ವೀವ್ಸ್​ ಬಂದಿದೆ. ಸಾವಿರಾರು ಜನ ಕಮೆಂಟ್​ ಮಾಡಿದ್ದಾರೆ. 

Video: ಪತ್ರಕರ್ತನ ಮೊಬೈಲ್​ ಕದ್ದು ಮಳ್ಳಾದ ಕಳ್ಳ; ಕದ್ದ ಮರುಕ್ಷಣವೇ ಅವನಿಗೇ ಗೊತ್ತಿಲ್ಲದೆ 20 ಸಾವಿರ ಜನರಿಗೆ ಮುಖ ತೋರಿಸಿದ !
ಮೊಬೈಲ್​ ಕದ್ದ ಕಳ್ಳ
Follow us on

ಕಳ್ಳನೊಬ್ಬ ಪತ್ರಕರ್ತನ ಮೊಬೈಲ್​ ಕದ್ದು ಬೇಸ್ತುಬಿದ್ದ ಘಟನೆ ನಡೆದಿದೆ. ಕದ್ದ ಮರುಕ್ಷಣವೇ ಆ ಕಳ್ಳನ ಮುಖ ಎಲ್ಲರಿಗೂ ಕಂಡಿದೆ. ಇದೀಗ ಆತನ ಬಂಧನವೂ ಆಗಿದೆ. ಅಂದಹಾಗೆ ಘಟನೆ ನಡೆದದ್ದು ಈಜಿಪ್ಟ್​​ನ ರಾಜಧಾನಿ ಕೈರೋದಲ್ಲಿ. ಇಲ್ಲಿ ಪತ್ರಕರ್ತನೊಬ್ಬ ತನ್ನ ಮೊಬೈಲ್​​​ನಲ್ಲಿ ವಿಡಿಯೋ ಮಾಡುತ್ತ, ಭೂಕಂಪದ ವರದಿ ಮಾಡುತ್ತಿದ್ದ. ಕೈರೋದ ರಸ್ತೆಗಳಲ್ಲಿ ಭೂಕಂಪದಿಂದಾದ ಹಾನಿಯ ಚಿತ್ರದ ವರದಿಯನ್ನು ಲೈವ್​ ವಿಡಿಯೋ ಮಾಡುತ್ತಿದ್ದಾಗ ಬೈಕ್​​ನಲ್ಲಿ ಬಂದ ಕಳ್ಳನೊಬ್ಬ ಆತನ ಮೊಬೈಲ್​ ಕಿತ್ತುಕೊಂಡು ಹೋದ. ಈ ವೇಳೆ ಪತ್ರಕರ್ತನ ವಿಡಿಯೋವನ್ನು ಸುಮಾರು 20 ಸಾವಿರ ಮಂದಿ ವೀಕ್ಷಿಸುತ್ತಿದ್ದರು. ಅಷ್ಟೂ ಜನಕ್ಕೆ ಕಳ್ಳ ತನ್ನ ಮುಖದರ್ಶನ ಮಾಡಿಸಿದ್ದಾನೆ. ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.  

ಈಜಿಪ್ಟ್​​ನ ಕೈರೋ ಸೇರಿ ವಿವಿಧೆಡೆ ಮಂಗಳವಾರ ಮುಂಜಾನೆ ಭೂಕಂಪನವಾಗಿತ್ತು. ಅದರ ಚಿತ್ರಣವನ್ನು ವರದಿ ಮಾಡಲು ಪತ್ರಕರ್ತ ಮೊಬೈಲ್​​ನಲ್ಲಿ ಫೇಸ್​​ಬುಕ್​ ಲೈವ್​ ವಿಡಿಯೋ ಮಾಡುತ್ತಿದ್ದ. ಬೈಕ್​​ನಲ್ಲಿ ಬಂದ ಕಳ್ಳ ಆ ಮೊಬೈಲ್​​ನ್ನು ಪತ್ರಕರ್ತನ ಕೈಯಿಂದ ಕಿತ್ತುಕೊಳ್ಳುವಾಗ ಕೆಲ ಕಾಲ ಅಡಚಣೆಯುಂಟಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೇ, ಹಿಂದಿನಿಂದ ಪತ್ರಕರ್ತನ ಧ್ವನಿಯೂ ಇದರಲ್ಲಿ ಕೇಳುತ್ತಿರುತ್ತದೆ. ಮೊಬೈಲ್​ ಕಿತ್ತುಕೊಂಡು ಆತ ತನ್ನ ಬೈಕ್​​ನ ಮುಂದೆ ಅದನ್ನಿಟ್ಟುಕೊಂಡು ಅಲ್ಲಿಂದ ಹೊರಟಿದ್ದಾನೆ.  ಆದರೆ ಆ ಮೊಬೈಲ್​ ಕ್ಯಾಮರಾ ಸೆಲ್ಫಿಯಾಗಿ ತಿರುಗಿರುವ ಕಾರಣ ಆ ಕಳ್ಳನ ಮುಖ ಎಲ್ಲರಿಗೂ ಕಂಡಿದೆ. ಆತ ಸಿಗರೇಟ್​ ಬಾಯಲ್ಲಿಟ್ಟುಕೊಂಡು ಹೋಗುತ್ತಿದ್ದಾನೆ. ತನ್ನನ್ನು ಯಾರಾದರು ಹಿಂಬಾಲಿಸುತ್ತಿದ್ದಾರಾ ಎಂದು ಹಿಂದಿರುಗಿ ನೋಡುವುದು ಕೂಡ  ವಿಡಿಯೋದಲ್ಲಿ ಕಾಣಿಸುತ್ತಿದೆ. ಆ ಕಳ್ಳನಿಗೆ ಮಾತ್ರ ಇದ್ಯಾವುದರ ಅರಿವೂ ಇಲ್ಲ. ಮೊಬೈಲ್​​ವೊಂದು ಸಿಕ್ಕ ಖುಷಿಯಲ್ಲಿ ಬೈಕ್​​ನಲ್ಲಿ ಸ್ಪೀಡ್​ ಆಗಿ ಹೋಗುವುದು ವಿಡಿಯೋದಲ್ಲಿ ನೋಡಬಹುದು.

ಮೊಬೈಲ್​ ಕದ್ದಿದ್ದು ಗಂಭೀರ ವಿಚಾರವಾದರೂ ಇದೀಗ ಫನ್ನಿ ವಿಡಿಯೋವಾಗಿ ಮಾರ್ಪಟ್ಟಿದೆ. ನೆಟ್ಟಿಗರೊಬ್ಬರು ಶೇರ್​ ಮಾಡಿಕೊಂಡ ವಿಡಿಯೋಕ್ಕೆ 6.2 ಮಿಲಿಯನ್​ಗಳಷ್ಟು ವೀವ್ಸ್​ ಬಂದಿದೆ. ಸಾವಿರಾರು ಜನ ಕಮೆಂಟ್​ ಮಾಡಿದ್ದಾರೆ.  ಈ ಕಳ್ಳನೀಗ ಬಂಧಿಸಲ್ಪಟ್ಟಿದ್ದಾನೆ ಮತ್ತು ಆತನ ಬೈಕ್​ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಬಿಎಸ್​ವೈ ಆಪ್ತನ ಸ್ಥಾನಚ್ಯುತಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ

‘ಸಲಗ ಚಿತ್ರವನ್ನು ತುಳಿಯೋಕೆ ಆಗಲ್ಲ, ಸುಮ್ಮನೆ ಸಣ್ಣತನ ತೋರಿಸಬೇಡಿ’: ದುನಿಯಾ ವಿಜಯ್​ ಎಚ್ಚರಿಕೆ

Published On - 4:51 pm, Thu, 21 October 21