ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿಯೇ ಹುಟ್ಟಿದ ಶಿಶು; ಅಮ್ಮ ಪಡೆದ ವ್ಯಾಕ್ಸಿನ್​ನಿಂದ ಶಕ್ತಿ ಪಡೆದ ಅಮೆರಿಕದ ಮೊದಲ ಮಗು ಇದು..

|

Updated on: Mar 18, 2021 | 1:02 PM

ಅದಾಗ್ಯೂ ಕೂಡ ಗರ್ಭಿಣಿಯರಿಗೆ ಕೊರೊನಾ ಲಸಿಕೆ ಎಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬ ಬಗ್ಗೆ ಇನ್ನೂ ಅನೇಕ ರೀತಿಯ ಸಂಶೋಧನೆಗಳು ಆಗಬೇಕು ಎಂದು ವೈದ್ಯರಾದ ಡಾ. ಪೌಲ್ ಗಿಬ್ಲೆಟ್​ ಮತ್ತು ಡಾ. ಚಾಡ್​ ರುಡ್ನಿಕ್ ತಿಳಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿಯೇ ಹುಟ್ಟಿದ ಶಿಶು; ಅಮ್ಮ ಪಡೆದ ವ್ಯಾಕ್ಸಿನ್​ನಿಂದ ಶಕ್ತಿ ಪಡೆದ ಅಮೆರಿಕದ ಮೊದಲ ಮಗು ಇದು..
ಪ್ರಾತಿನಿಧಿಕ ಚಿತ್ರ
Follow us on

ಫ್ಲೋರಿಡಾ: ಮೊಡೆರ್ನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದ ದಕ್ಷಿಣ ಫ್ಲೋರಿಡಾದ ಗರ್ಭಿಣಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೂ ಒಂದು ಅಚ್ಚರಿಯ ಸಂಗತಿಯೆಂದರೆ, ಈ ಮಗು ದೇಹದಲ್ಲಿ ಕೊರೊನಾ ಪ್ರತಿಕಾಯಗಳನ್ನು (ಆ್ಯಂಟಿಬಾಡೀಸ್​) ಒಳಗೊಂಡೇ ಜನಿಸಿದೆ. ಯುಎಸ್​​ನಲ್ಲಿ, ಕೊರೊನಾ ಪ್ರತಿಕಾಯಗಳೊಂದಿಗೆ ಹುಟ್ಟಿದ ಮೊದಲ ಮಗು ಇದು ಎಂದು ವೈದ್ಯರು ಹೇಳಿದ್ದಾರೆ.

ಮಹಿಳೆ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. 36 ವಾರಗಳ ಗರ್ಭಿಣಿಯಾಗಿದ್ದಾಗ ಮೊದಲ ಡೋಸ್​​ ಮಾಡೆರ್ನಾ ಲಸಿಕೆ ಪಡೆದಿದ್ದರು. ಅದಾದ ಬಳಿಕ ಮೂರುವಾರಗಳಲ್ಲಿ ಇವರ ಹೆರಿಗೆಯಾಗಿ, ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವನ್ನು ತಪಾಸಣೆ ಮಾಡಿದಾಗ ಅದರ ದೇಹದಲ್ಲಿ ಐಜಿಜಿ ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ. ಇದೊಂದು ವಿಧದ ಪ್ರೋಟಿನ್​ ಆಗಿದ್ದು, ಕೊರೊನಾ ವೈರಸ್​ ವಿರುದ್ಧ ರಕ್ಷಣೆ ನೀಡುತ್ತದೆ. ಹಾಗೇ, ಈ ಪ್ರತಿಕಾಯಗಳು ದೇಹದಲ್ಲಿ ಒಂದು ತಿಂಗಳಿಂದ..ಒಂದು ವರ್ಷದವರೆಗೂ ಉಳಿಯಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಡಾ. ಪೌಲ್ ಗಿಬ್ಲೆಟ್​ ಮತ್ತು ಡಾ. ಚಾಡ್​ ರುಡ್ನಿಕ್​ ಅವರು ಅಧ್ಯಯನ ಮಾಡಿದ್ದಾರೆ. ಮಹಿಳೆಯರ ಹೆರಿಗೆ ಮಾಡಿದ ಬಳಿಕ ಮಗುವಿನ ಹೊಕ್ಕಳಬಳ್ಳಿಯನ್ನು ತಕ್ಷಣವೇ ತೆಗದುಕೊಂಡು, ರಕ್ತ ತಪಾಸಣೆ ಮಾಡಲಾಗಿತ್ತು. ಈ ವೇಳೆ SARS-CoV-2 IgG ಪ್ರತಿಕಾಯಗಳು ಮಗುವಿನ ದೇಹದಲ್ಲಿ ಇರುವುದು ಸ್ಪಷ್ಟವಾಯಿತು ಎಂದು ಅವರು ತಿಳಿಸಿದ್ದಾರೆ. ತಾಯಿ ಪಡೆದ ಲಸಿಕೆ, ಈ ಮಗುವಿಗೆ ಕೊರೊನಾ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದೂ ಹೇಳಿದ್ದಾರೆ.

ಅದಾಗ್ಯೂ ಕೂಡ ಗರ್ಭಿಣಿಯರಿಗೆ ಕೊರೊನಾ ಲಸಿಕೆ ಎಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬ ಬಗ್ಗೆ ಇನ್ನೂ ಅನೇಕ ರೀತಿಯ ಸಂಶೋಧನೆಗಳು ಆಗಬೇಕು. ಇನ್ನು ಈ ಮಗುವಿನಲ್ಲಿ ಆ್ಯಂಟಿಬಾಡಿ ಇದ್ದರೂ ಕೂಡ ಅದರ ಪ್ರಮಾಣ ಕಡಿಮೆ ಇದೆ. ಹಾಗಾಗಿ ಕಾಳಜಿಯನ್ನು ವಹಿಸಲೇಬೇಕು. ಇನ್ನು ಮಹಿಳೆಗೆ ಪ್ರಸವದ ನಂತರ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Coronavirus Case Updates: ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾರ್ಭಟ; ಒಂದು ದಿನದಲ್ಲಿ 35 ಸಾವಿರ ಕೇಸ್​ಗಳು ದಾಖಲು..ಮತ್ತೆ ಅಪಾಯದಲ್ಲಿ ಮಹಾರಾಷ್ಟ್ರ

ಬೆಂಗಳೂರಿನಲ್ಲಿ ಇಂದು 930 ಜನರಿಗೆ ಕೊರೊನಾ ದೃಢ

ಸರ್ಕಾರದ ಕೊವಿಡ್​ ಮಾರ್ಗಸೂಚಿಗೆ ಕ್ಯಾರೇ ಅನ್ನದ ಜನ: ಸಾವಿರದ ಸನಿಹಕ್ಕೆ ತಲುಪಿದ ಕೊರೊನಾ ಕೇಸ್​!