ಪ್ರವಾಹದ ಬೆನ್ನಲ್ಲೇ ಟಿಬೆಟ್‌ನಲ್ಲಿ 5.0 ತೀವ್ರತೆಯ ಭೂಕಂಪ: ನಡುಗಿದ ನೇಪಾಳ ಗಡಿ, ಹೆಚ್ಚಿದ ಆತಂಕ

ಹಿಮಾಲಯ ಪ್ರದೇಶವು ಪ್ರವಾಹದ ಭೀತಿಯಿಂದ ತತ್ತರಿಸಿರುವಾಗಲೇ, ನೇಪಾಳ ಗಡಿಗೆ ಹೊಂದಿಕೊಂಡ ಟಿಬೆಟ್‌ನಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಹಿಮನದಿ ಕುಸಿತದಿಂದ ಉಂಟಾದ ಪ್ರವಾಹದಿಂದ ಈಗಾಗಲೇ ಜನಜೀವನ ಅಸ್ತವ್ಯಸ್ತವಾಗಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಈಗ ಭೂಕಂಪದಿಂದ ಭೂಕುಸಿತ ಮತ್ತು ಮತ್ತಷ್ಟು ಪ್ರವಾಹದ ಅಪಾಯ ಹೆಚ್ಚಿದ್ದು, ಕೆಳಭಾಗದ ಭಾರತದ ಪ್ರದೇಶಗಳಿಗೂ ನದಿ ಪಾತ್ರಗಳಲ್ಲಿ ಪ್ರವಾಹ ಹರಿದುಬರುವ ಆತಂಕ ಸೃಷ್ಟಿಯಾಗಿದೆ.

ಪ್ರವಾಹದ ಬೆನ್ನಲ್ಲೇ ಟಿಬೆಟ್‌ನಲ್ಲಿ 5.0 ತೀವ್ರತೆಯ ಭೂಕಂಪ: ನಡುಗಿದ ನೇಪಾಳ ಗಡಿ, ಹೆಚ್ಚಿದ ಆತಂಕ
ಪ್ರವಾಹ
Image Credit source: BBC

Updated on: Sep 03, 2026 | 3:20 PM

ಕಠ್ಮಂಡು, ಸೆಪ್ಟೆಂಬರ್ 03: ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಹಿಮಾಲಯನ್ ವಲಯದಲ್ಲಿ ಇದೀಗ ಭೂಕಂಪವೂ ಸಂಭವಿಸಿ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ನೇಪಾಳ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನ ಗಡಿ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಮಿಯ ೧೪ ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದ್ದು, ಸದ್ಯಕ್ಕೆ ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.

ನೇಪಾಳ ಪ್ರವಾಹ: ಸಾವಿನ ಸಂಖ್ಯೆ ಮತ್ತು ನಾಪತ್ತೆಯಾದವರ ವಿವರ

ಆಗಸ್ಟ್ 26 ರಂದು ಟಿಬೆಟ್-ನೇಪಾಳ ಗಡಿಯಲ್ಲಿ ಸಂಭವಿಸಿದ ಹಿಮಪಾತ ಮತ್ತು ಹಿಮನದಿ ಕುಸಿತದಿಂದ ಎದ್ದ ಭೀಕರ ಜಲಪ್ರಳಯದಲ್ಲಿ ಮಡಿದವರ ಸಂಖ್ಯೆ 1,252 ಕ್ಕೆ ಏರಿಕೆಯಾಗಿದೆ. ಚಿತ್ವಾನ್‌ನಲ್ಲಿ ಅತಿ ಹೆಚ್ಚು 355 ಮೃತದೇಹಗಳು ಲಭ್ಯವಾಗಿವೆ. ನವಲ್ಪರಾಸಿ ಪೂರ್ವದಲ್ಲಿ 218, ನವಲ್ಪರಾಸಿ ಪಶ್ಚಿಮದಲ್ಲಿ 208, ನುವಾಕೋಟ್‌ನಲ್ಲಿ 177, ರಸುವಾದಲ್ಲಿ 127, ಗೂರ್ಖಾದಲ್ಲಿ 69, ಧಾಡಿಂಗ್‌ನಲ್ಲಿ 60 ಮತ್ತು ತನಾಹುದಲ್ಲಿ 38 ಶವಗಳನ್ನು ರಕ್ಷಣಾ ಪಡೆಗಳು ಹೊರತೆಗೆದಿವೆ.

ಭಾರತದಿಂದ ಹಸ್ತಾಂತರ: ನವಲ್ಪರಾಸಿ ಪಶ್ಚಿಮ ಭಾಗದ ನದಿಗಳಲ್ಲಿ ಕೊಚ್ಚಿಬಂದಿದ್ದ 18 ಮೃತದೇಹಗಳನ್ನು ಭಾರತದ ಗಡಿ ಭದ್ರತಾ ಪಡೆಗಳು ಪತ್ತೆಹಚ್ಚಿ, ಗೌರವಯುತವಾಗಿ ನೇಪಾಳದ ಅಧಿಕಾರಿಗಳಿಗೆ ಹಸ್ತಾಂತರಿಸಿವೆ.

ನೇಪಾಳ ಸೇನೆಯ ನೇತೃತ್ವದಲ್ಲಿ ಸತತ ಒಂಬತ್ತನೇ ದಿನವೂ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೂ 4,827 ಕ್ಕೂ ಹೆಚ್ಚು ನಾಗರಿಕರು ಕಾಣೆಯಾಗಿದ್ದಾರೆ.

ಟಿಬೆಟ್‌ನಲ್ಲೂ ಸಾವು-ನೋವು: ಚೀನಾದ ಗಡಿ ಭಾಗವಾದ ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲೂ ಪ್ರವಾಹಕ್ಕೆ 21 ಜನರು ಮೃತಪಟ್ಟಿದ್ದು, 541ಮಂದಿ ನಾಪತ್ತೆಯಾಗಿದ್ದಾರೆ.

ಮತ್ತಷ್ಟು ಓದಿ: ನೀವು ಕೆಲಸ ಮುಂದುವರೆಸಿ, ನಾನು ನೋಡ್ತೀನಿ: ಪ್ರವಾಹದ ವೇಳೆ 265 ಕಾರ್ಮಿಕರನ್ನು ಸುರಂಗದಲ್ಲೇ ಬಿಟ್ಟು ಓಡಿಹೋದ ಚೀನಾ ಸೂಪರ್‌ವೈಸರ್

ಹೊಸ ಪ್ರವಾಹದ ಭೀತಿ ಮತ್ತು ಬದಲಾದ ಭೂಪ್ರದೇಶ

ಮತ್ತೆ ಮಳೆ, ನದಿಗಳಲ್ಲಿ ನೀರಿನ ಮಟ್ಟ ಏರಿಕೆ: ಭೋಟೆಕೋಶಿ ನದಿಯ ಮೇಲ್ಭಾಗದಲ್ಲಿ ಮಳೆ ಮುಂದುವರಿದಿರುವುದರಿಂದ ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕಠ್ಮಂಡು, ಮುಸ್ತಾಂಗ್, ಕಸ್ಕಿ, ಲಾಮ್‌ಜಂಗ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಗುಡ್ಡಗಾಡು ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರಸುವಾ ಮತ್ತು ನುವಾಕೋಟ್ ಕಣಿವೆಗಳಲ್ಲಿ ಪ್ರವಾಹವು ಸಂಪೂರ್ಣ ಬೆಟ್ಟಗುಡ್ಡಗಳ ಸ್ವರೂಪವನ್ನೇ ಬದಲಿಸಿದೆ. ನದಿ ದಂಡೆಗಳು, ಸೇತುವೆಗಳು ಮತ್ತು ಬೆಟ್ಟದ ಹೆಗ್ಗುರುತುಗಳು ನಾಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಯಲ್ಲಿರುವ ಹೆಲಿಕಾಪ್ಟರ್ ಪೈಲಟ್‌ಗಳು ಸಂಚರಿಸಲು ತೀವ್ರ ಹರಸಾಹಸ ಪಡುತ್ತಿದ್ದಾರೆ.

ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್: ಹಿಮಾಲಯ ಪ್ರದೇಶಗಳಲ್ಲಿ ತಾಪಮಾನ ಏರಿಕೆಯಿಂದಾಗಿ ಹಿಮನದಿಗಳ ಸರೋವರಗಳು ಒಡೆದು ಕ್ಷಣಾರ್ಧದಲ್ಲಿ ಭಾರಿ ಪ್ರಮಾಣದ ನೀರು ಧುಮುಕುವ ಪ್ರಕ್ರಿಯೆಯನ್ನು ‘ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್’ ಎನ್ನಲಾಗುತ್ತದೆ. ಈ ಬಾರಿ ಟಿಬೆಟ್ ಗಡಿಯಲ್ಲಿ ಸಂಭವಿಸಿರುವುದು ಇಂತಹದ್ದೇ ಮಹಾದುರಂತ.

ಭೂಕಂಪನದಿಂದ ಭೂಕುಸಿತದ ಆತಂಕ: ಪ್ರವಾಹದಿಂದ ಈಗಾಗಲೇ ಸಡಿಲಗೊಂಡಿರುವ ಬೆಟ್ಟಗುಡ್ಡಗಳ ಸಾಲಿನಲ್ಲಿ ಈಗ 5.0 ತೀವ್ರತೆಯ ಭೂಕಂಪ ಸಂಭವಿಸಿರುವುದು ನದಿ ಪಾತ್ರಗಳಲ್ಲಿ ಮತ್ತಷ್ಟು ಕೃತಕ ಅಣೆಕಟ್ಟುಗಳು ಸೃಷ್ಟಿಯಾಗಿ, ಅವು ಒಡೆದು ಕೆಳಭಾಗದ ಭಾರತದ ಉತ್ತರ ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ನದಿಗಳಿಗೂ ಪ್ರವಾಹ ಹರಿದುಬರುವ ಅಪಾಯವನ್ನು ಹೆಚ್ಚಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us