ಮತಪೆಟ್ಟಿಗೆಯಿಂದ ವ್ಯತ್ಯಾಸ ತರಬೇಕೇ ವಿನಃ ಬಂದೂಕಿನಿಂದಲ್ಲ; ಟ್ರಂಪ್ ಹತ್ಯೆ ಪ್ರಯತ್ನದ ಬಳಿಕ ಜೋ ಬಿಡೆನ್ ಮನವಿ
ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಪ್ರಯತ್ನದ ನಂತರ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ದೇಶದ ಜನರನ್ನು ಶಾಂತಿಯಿಂದಿರಲು ಕೋರಿರುವ ಅವರು ಬುಲೆಟ್‌ಗಳ ಮೂಲಕ ನಾವು ಯಾವುದೇ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಚುನಾವಣೆಯ ಮತಪೆಟ್ಟಿಗೆಯಲ್ಲಿ ಮಾತ್ರ ನಾವು ವ್ಯತ್ಯಾಸಗಳನ್ನು ತಂದು ಸಮಸ್ಯೆ ಪರಿಹರಿಸಲು ಸಾಧ್ಯ ಎಂಬುದನ್ನು ಮರೆಯಬೇಡಿ ಎಂದು ಅಮೆರಿಕನ್ನರ ಬಳಿ ಮನವಿ ಮಾಡಿದ್ದಾರೆ.
ವಾಷಿಂಗ್ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಡೊನಾಲ್ಡ್ ಟ್ರಂಪ್ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ 20 ವರ್ಷದ ಶೂಟರ್ ಒಬ್ಬ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಅದೇ ಸಮಯಕ್ಕೆ ಟ್ರಂಪ್ ತಮ್ಮ ತಲೆಯನ್ನು ಬೇರೆ ಕಡೆಗೆ ತಿರುಗಿಸಿದ್ದರಿಂದ ಆ ಗುಂಡು ಅವರ ಬಲ ಕಿವಿಯನ್ನು ಸೀಳಿತ್ತು. ಇಲ್ಲವಾದರೆ ಆ ಗುಂಡು ನೇರವಾಗಿ ಟ್ರಂಪ್ ಹಣೆಯನ್ನು ಸೀಳುತ್ತಿತ್ತು.
ಗುಂಡಿನ ಸದ್ದಿಗೆ ಟ್ರಂಪ್ ಕೂಡಲೇ ವೇದಿಕೆಯ ಮೇಲೆ ಬಿದ್ದಿದ್ದಾರೆ. ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಿ ರಕ್ಷಿಸಿದ್ದಾರೆ. ಟ್ರಂಪ್ ಮುಖ ಹಾಗೂ ಕಿವಿಯಲ್ಲಿ ರಕ್ತ ಸುರಿಯುತ್ತಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾದ ಶಂಕಿತ ಬಂದೂಕುಧಾರಿ ಯಾವ ಕಾರಣಕ್ಕೆ ಈ ಹತ್ಯೆ ಪ್ರಯತ್ನ ಮಾಡಿದ್ದಾನೆ ಎಂಬುದು ಅಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾನುವಾರ ವೈಟ್ಹೌಸ್ನಿಂದ ಜನರನ್ನುದ್ದೇಶಿಸಿ ಮಾತನಾಡಿರುವ ಅಪರೂಪದ ಘಟನೆ ನಡೆದಿದೆ. ರಾಜಕೀಯ ಉದ್ವೇಗವನ್ನು ಜನರು ಕಡಿಮೆ ಮಾಡಿಕೊಂಡು, ಶಾಂತಿಯುತವಾಗಿ ಇರುವ ಸಮಯವಿದು ಎಂದಿರುವ ಬಿಡೆನ್ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಗಾಯಗೊಂಡಿದ್ದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತ ಡೊನಾಲ್ಡ್ ಟ್ರಂಪ್ ಮೇಲೆ ಮಾರಣಾಂತಿಕ ದಾಳಿ, ಪ್ರಧಾನಿ ಮೋದಿ ಖಂಡನೆ
ನಾವು ಮತಪೆಟ್ಟಿಗೆಯ ಮೂಲಕ ವ್ಯತ್ಯಾಸ ಕಂಡುಕೊಳ್ಳಬೇಕೇ ಹೊರತು ಬಂದೂಕಿನಿಂದಲ್ಲ. ಟ್ರಂಪ್ ನನ್ನ ಶತ್ರುವಲ್ಲ. ಅವರು ನನ್ನ ಸಹೋದ್ಯೋಗಿ ಮತ್ತು ಪ್ರತಿಸ್ಪರ್ಧಿಯಷ್ಟೇ ಎಂದಿರುವ ಬಿಡೆನ್ ಎಲ್ಲರೂ ಏಕತೆಯನ್ನು ಮರೆಯಬಾರದು ಎಂದು ಕರೆನೀಡಿದ್ದಾರೆ. ಟ್ರಂಪ್ ಅವರ ಶೂಟೌಟ್ “ನಮ್ಮೆಲ್ಲರನ್ನೂ ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳುವಂತೆ ಕರೆ ನೀಡುತ್ತದೆ” ಎಂದು ಬಿಡೆನ್ ಹೇಳಿದ್ದಾರೆ. ಅದೃಷ್ಟವಶಾತ್ ಟ್ರಂಪ್ ಅವರಿಗೆ ಗಂಭೀರವಾಗಿ ಗಾಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ಹಿಂಸಾಚಾರವನ್ನು ಸಾಮಾನ್ಯೀಕರಿಸಲು ನಾವು ಬಿಡುವುದಿಲ್ಲ. ಈ ದೇಶದಲ್ಲಿ ರಾಜಕೀಯ ವಾಕ್ಚಾತುರ್ಯವು ತುಂಬಾ ಬಿಸಿಯಾಗಿದೆ. ಅದನ್ನು ತಣ್ಣಗಾಗಿಸುವ ಸಮಯ ಬಂದಿದೆ. ರಾಜಕೀಯ ಉದ್ವೇಗವನ್ನು ಶಾಂತಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಜಕೀಯವು ಎಂದಿಗೂ ಅಕ್ಷರಶಃ ಯುದ್ಧಭೂಮಿಯಾಗಬಾರದು. ದೇವರು ಕೊಲ್ಲುವ ಅಧಿಕಾರವನ್ನು ಯಾರಿಗೂ ನೀಡಿಲ್ಲ ಎಂದು ಎಂದು ಬಿಡೆನ್ ಹೇಳಿದ್ದಾರೆ.
ಇದನ್ನೂ ಓದಿ: ದಾಳಿಕೋರ ಇರುವ ಮಾಹಿತಿ ಮೊದಲೇ ಸಿಕ್ಕಿದ್ದರೂ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದ್ದು ಹೇಗೆ?
“ಅಮೆರಿಕದಲ್ಲಿ ನಾವು ಮತಪೆಟ್ಟಿಗೆಯಲ್ಲಿ ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತೇವೆಯೇ ಹೊರತು ಬುಲೆಟ್‌ಗಳೊಂದಿಗೆ ಅಲ್ಲ ಎಂದು ಬಿಡೆನ್ ಸುಮಾರು ಏಳು ನಿಮಿಷಗಳ ಭಾಷಣದಲ್ಲಿ ಹೇಳಿದ್ದಾರೆ. ಪ್ರಮುಖ ಸುದ್ದಿ ನೆಟ್‌ವರ್ಕ್‌ಗಳು ಮತ್ತು ಸಂಪ್ರದಾಯವಾದಿ ಚಾನೆಲ್ ಫಾಕ್ಸ್ ನ್ಯೂಸ್‌ನಿಂದ ಈ ಭಾಷಣ ನೇರ ಪ್ರಸಾರವಾಯಿತು.
ಈ ಬಾರಿ ನವೆಂಬರ್ 5ರ ಚುನಾವಣೆಗೆ ಇನ್ನೂ 4 ತಿಂಗಳು ಬಾಕಿಯಿದೆ. ಈಗಾಗಲೇ ಮತ್ತೆ ಜೋ ಬಿಡೆನ್ ಅಧಿಕಾರಕ್ಕೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಉಮೇದುವಾರಿಕೆಯನ್ನು ಅಂತಿಮಗೊಳಿಸಿರುವ 78 ವರ್ಷದ ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಜಾಗತಿಕ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:24 am, Mon, 15 July 24