ದೊಡ್ಡ ಬೆಲೆ ತೆರಬೇಕಾಗುತ್ತೆ, ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಬೆದರಿಕೆ ಹಾಕಿದ ಟ್ರಂಪ್

ವೆನೆಜುವೆಲಾದಲ್ಲಿ ಅಧಿಕಾರ ಬದಲಾವಣೆಯ ನಂತರ, ಪರಿಸ್ಥಿತಿ ಹೆಚ್ಚು ಉದ್ವಿಗ್ನಗೊಳ್ಳುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ, ಅವರು ಅಮೆರಿಕದ ಮಾತನ್ನು ಪಾಲಿಸದಿದ್ದರೆ, ಅವರು ಮಡುರೊಗಿಂತ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ದೊಡ್ಡ ಬೆಲೆ ತೆರಬೇಕಾಗುತ್ತೆ, ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಬೆದರಿಕೆ ಹಾಕಿದ ಟ್ರಂಪ್
ಟ್ರಂಪ್-ಡೆಲ್ಸಿ

Updated on: Jan 05, 2026 | 7:42 AM

ವಾಷಿಂಗ್ಟನ್, ಜನವರಿ 05: ಒಂದೆಡೆ ಯುದ್ಧಕ್ಕೆ ಮುಂದಾಗಿರುವ ದೇಶಗಳಿಗೆ ಶಾಂತಿ ಪಾಠ ಮಾಡುತ್ತಾ, ಮತ್ತೊಂದೆಡೆ ಖುದ್ದು ತಾನೇ ಡಾನ್ ರೀತಿಯ ವರ್ತನೆಯನ್ನು ಟ್ರಂಪ್ ತೋರುತ್ತಿದ್ದಾರೆ. ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೆಲ್ಸಿ ರೊಡ್ರಿಗಸ್ ಅವರಿಗೂ ಬೆದರಿಕೆ ಹಾಕಿದ್ದಾರೆ.

ಅಷ್ಟೇ ಅಲ್ಲದೆ ಟ್ರಂಪ್ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋಗೆ ಎಚ್ಚರಿಕೆ ಸಂದೇಶ ರವಾನಿಸಿರುವುದು ಲ್ಯಾಟಿನ್ ಅಮೆರಿಕಾದ್ಯಂತ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಮೆರಿಕದ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕಾದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದ್ದು ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಪೆಟ್ರೋ ತೀವ್ರವಾಗಿ ಖಂಡಿಸಿದ್ದರು.

‘ಅಮೆರಿಕದ ಕಾರ್ಯಾಚರಣೆಯ ಬೆನ್ನಲ್ಲೇ ಸರ್ಕಾರ ರಾಷ್ಟ್ರೀಯ ಭದ್ರತಾ ಸಭೆಯನ್ನು ನಡೆಸಿದ್ದು, ವೆನೆಝುವೆಲಾದಿಂದ ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರು ದೇಶದೊಳಗೆ ನುಗ್ಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಲಂಬಿಯಾ–ವೆನೆಝುವೆಲಾ ಗಡಿಯುದ್ದಕ್ಕೂ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ಓದಿ: ತಾಕತ್ತಿದ್ರೆ ಬಂದು ಹಿಡಿ ಎಂದು ಟ್ರಂಪ್​ಗೆ ಸವಾಲೆಸೆದಿದ್ದ ವೆನಿಜುವೆಲಾ ಅಧ್ಯಕ್ಷ; ಸದ್ದಿಲ್ಲದೆ ಬಂಧಿಸಿ ಕರೆದೊಯ್ದ ಅಮೆರಿಕ ಸೇನೆ

ಅಮೆರಿಕ ಸೇನಾಪಡೆಯ ವಿಶೇಷ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಂಡು ಜೈಲಿಗೆ ಹಾಕಿದ ನಂತರ, ಮಧ್ಯಂತರ ನಾಯಕಿ ಡೆಲ್ಸಿ ರೊಡ್ರಿಗಸ್ ಅವರಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿರುವ ಡೆಲ್ಸಿ ರೊಡ್ರಿಗಸ್ ಅಮೆರಿಕದೊಂದಿಗೆ ಸಹಕರಿಸದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಿ ಅಟ್ಲಾಂಟಿಕ್‌ಗೆ ನೀಡಿದ ಸಂದರ್ಶನದಲ್ಲಿಮಾತನಾಡಿದ ಟ್ರಂಪ್, ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಸರಿಯಾದದ್ದನ್ನು ಮಾಡದಿದ್ದರೆ, ಅವಳು ಮಡುರೊಗಿಂತ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ, ಬಹುಶಃ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಹೇಳಿದರು.

ಟ್ರಂಪ್ ಬೇಡಿಕೆ ಏನು?
ವೆನೆಜುವೆಲಾದ ಅಗಾಧವಾದ ಕಚ್ಚಾ ತೈಲ ನಿಕ್ಷೇಪಗಳಲ್ಲಿ ಅಮೆರಿಕ ಹೂಡಿಕೆಗೆ ಪ್ರವೇಶವನ್ನು ತೆರೆಯುವುದು ಸೇರಿದಂತೆ ವಾಷಿಂಗ್ಟನ್‌ನ ಗುರಿಗಳನ್ನು ಪೂರೈಸುವವರೆಗೆ ಮಡುರೊ ಅವರ ಸರ್ಕಾರದ ಜೊತೆ ಕೆಲಸ ಮಾಡಲು ಸಿದ್ಧ ಎಂದು ಟ್ರಂಪ್ ಆಡಳಿತ ಹೇಳುತ್ತದೆ. ವೆನೆಜುವೆಲಾದ ಸುಪ್ರೀಂ ಕೋರ್ಟ್ ಮತ್ತು ಮಿಲಿಟರಿ ಅಧಿಕಾರಿಗಳು ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ದೃಢಪಡಿಸಿದ ನಂತರ ಟ್ರಂಪ್ ಅವರ ಎಚ್ಚರಿಕೆ ಬಂದಿದೆ.

ಕೊಲಂಬಿಯಾದಲ್ಲಿ ನಡೆಯುತ್ತಿರುವ ಕೊಕೇನ್ ಉತ್ಪಾದನೆ ಮತ್ತು ಅಲ್ಲಿಂದ ಅಮೆರಿಕಕ್ಕೆ ಹರಿಯುತ್ತಿರುವ ಮಾದಕ ದ್ರವ್ಯಗಳ ಬಗ್ಗೆ ಟ್ರಂಪ್ ಕೆಂಡಾಮಂಡಲವಾಗಿದ್ದಾರೆ. ಕೊಲಂಬಿಯಾದ ಡ್ರಗ್ ಫ್ಯಾಕ್ಟರಿಗಳಿಂದ ಅಮೆರಿಕಕ್ಕೆ ವಿಷ ಹರಿದು ಬರುತ್ತಿದೆ ಎಂದು ಹೇಳಿದ್ದರು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ರೊಡ್ರಿಗಸ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅವರು ಅಮೆರಿಕದ ಷರತ್ತುಗಳ ಮೇಲೆ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರು. ನಂತರ ಟ್ರಂಪ್ ಅವರು ವೆನೆಜುವೆಲಾದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ರೊಡ್ರಿಗಸ್ ಅಮೆರಿಕದ ಸಲಹೆಯನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಹೇಳಿಕೊಂಡಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ