ಪ್ರಿಯಕರನ ಜತೆ ಓಡಿ ಹೋಗಲು 3 ಮಕ್ಕಳಿಗೆ ಹಣ್ಣಿನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಕತ್ತು ಹಿಸುಕಿ ಕೊಂದ ಮಹಿಳೆ
ಪಾಕಿಸ್ತಾನದಲ್ಲಿ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರ ಮದುವೆಯಾಗಲು ತಮ್ಮ ಮೂವರು ಚಿಕ್ಕ ಮಕ್ಕಳನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ. ಲಾಹೋರ್ ಬಳಿಯ ಸರೈ ಅಲಮ್‌ಗಿರ್‌ನಲ್ಲಿ ಈ ಘಟನೆ ನಡೆದಿದೆ. ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ನಂತರ ಕತ್ತು ಹಿಸುಕಿ ಕೊಲ್ಲಲಾಗಿದೆ. ಮಕ್ಕಳು ಜೀವಂತವಾಗಿದ್ದರೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಭಾವಿಸಿ ಈ ಭೀಕರ ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಲಾಹೋರ್, ಜನವರಿ 04: ವಿವಾಹಿತ ಮಹಿಳೆಗೆ ಬೇರೆ ಪುರುಷನೊಟ್ಟಿಗೆ ಅಕ್ರಮ ಸಂಬಂಧವಿತ್ತು, ಆತನ ಜತೆಯೇ ಇರಲಿ ಆಕೆ ಬಯಸಿದ್ದಳು. ಹಾಗಾಗಿ ಮೂವರು ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಸಾಯಿಸಿರುವ ಘಟನೆ ಪಾಕಿಸ್ತಾನ(Pakistan)ದಲ್ಲಿ ನಡೆದಿದೆ. ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಮದುವೆಯಾಗಲು ತನ್ನ ಮೂವರು ಚಿಕ್ಕ ಮಕ್ಕಳನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ. ಲಾಹೋರ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಗುಜರಾತ್ ಜಿಲ್ಲೆಯ ಸರೈ ಅಲಮ್‌ಗಿರ್‌ನಲ್ಲಿ ಈ ಹತ್ಯೆ ನಡೆದಿದೆ.
ಇಬ್ಬರು ಹೆಣ್ಣುಮಕ್ಕಳು ಮತ್ತು ಮೂರರಿಂದ ಏಳು ವರ್ಷದೊಳಗಿನ ಮಗನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.
ಪೊಲೀಸರು ಆ ಮಹಿಳೆಯನ್ನು ಸಿದ್ರಾ ಬಶೀರ್ ಮತ್ತು ಆಕೆಯ ಸಹಚರ ಬಾಬರ್ ಹುಸೇನ್ ಎಂದು ಗುರುತಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಇಬ್ಬರೂ ಸುಮಾರು ಒಂದೂವರೆ ವರ್ಷಗಳ ಹಿಂದೆ ಭೇಟಿಯಾಗಿದ್ದರು ಮತ್ತು ನಂತರ ಮದುವೆಯಾಗಲು ನಿರ್ಧರಿಸಿದ್ದರು.
ಮಹಿಳೆ ಪದೇ ಪದೇ ತನ್ನ ಪತಿಗೆ ವಿಚ್ಛೇದನ ಕೇಳುತ್ತಿದ್ದಳು ಮತ್ತು ಆಗಾಗ ಅವರೊಂದಿಗೆ ಜಗಳವಾಡುತ್ತಿದ್ದರು ಎಂದು ಪಿಟಿಐ ಉಲ್ಲೇಖಿಸಿ ಪೊಲೀಸ್ ಅಧಿಕಾರಿ ಒಮರ್ ಫಾರೂಕ್ ಹೇಳಿದ್ದಾರೆ. ಮಕ್ಕಳು ಜೀವಂತವಾಗಿರುವಾಗ ಮದುವೆಯಾಗಲು ಸಾಧ್ಯವಿಲ್ಲ ಎಂದು ಅವರಿಬ್ಬರು ಮಕ್ಕಳನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಸಿದ್ರಾ ಮತ್ತು ಹುಸೇನ್ ಆ ಕಾರಣಕ್ಕಾಗಿ ಮಕ್ಕಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಇಬ್ಬರು ಹಣ್ಣಿನ ಚಾಟ್‌ನಲ್ಲಿ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಬೆರೆಸಿ ಮಕ್ಕಳಿಗೆ ನೀಡಿದ್ದರು. ಮಕ್ಕಳು ಗಾಢ ನಿದ್ರೆಗೆ ಜಾರಿದ ನಂತರ, ಅವರನ್ನು ಒಬ್ಬೊಬ್ಬರಾಗಿ ಕತ್ತು ಹಿಸುಕಲಾಯಿತು.
ಮತ್ತಷ್ಟು ಓದಿ: ಹೊಸ ವರ್ಷದ ದಿನ ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ
ಇಬ್ಬರೂ ಶವಗಳನ್ನು ಗುರುತಿಸಲಾಗದಂತೆ ನಿರ್ಜನ ಸ್ಥಳದಲ್ಲಿ ಸುಟ್ಟುಹಾಕಿ ನಂತರ ಅಲ್ಲಿ ಹೂತುಹಾಕಿದರು ಎಂದು ಫಾರೂಕ್ ಹೇಳಿದರು. ಸಿದ್ರಾ ಅವರ ಪತಿ ತನ್ನ ಪತ್ನಿ ಮತ್ತು ಅವರ ಮೂವರು ಮಕ್ಕಳು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ ನಂತರ ಅಪರಾಧ ಬೆಳಕಿಗೆ ಬಂದಿತ್ತು. ವರದಿ ದಾಖಲಾದ ನಂತರ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಮಹಿಳೆಯನ್ನು ಪತ್ತೆಹಚ್ಚುವುದು ಕಷ್ಟಕರವಾದ ಕೆಲಸವಾಗಿತ್ತು.
ನಮ್ಮ ಗುಪ್ತಚರ ತಂಡವು ಯಶಸ್ವಿಯಾಗಿದೆ ಮತ್ತು ಆಕೆಯನ್ನು ಬಂಧಿಸಿದೆ ಎಂದು ಫಾರೂಕ್ ಹೇಳಿದರು. ಆಕೆಯ ಬಂಧನದ ನಂತರ, ನಾವು ಆಕೆಯ ಪ್ರಿಯಕರ ಬಾಬರ್ ಹುಸೇನ್‌ನನ್ನು ಸಹ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಸಿದ್ರಾ ಕೊಲೆಗಳನ್ನು ಒಪ್ಪಿಕೊಂಡಿದ್ದಾಳೆ ಮತ್ತು ಶವಗಳನ್ನು ಹೂಳಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿದ್ದಾಳೆ ಎಂದು ಹೇಳಲಾಗಿದೆ.
ತನಿಖೆಯನ್ನು ಪೂರ್ಣಗೊಳಿಸಲು ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಶಂಕಿತರನ್ನು ಇನ್ನೂ ಬಂಧನದಲ್ಲಿಟ್ಟು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
