ಅಮೆರಿಕದಲ್ಲಿ ಭಾರತೀಯ ಯುವತಿಯ ನಿಗೂಢ ಸಾವು; ಕೊಲೆ ಮಾಡಿ ಭಾರತಕ್ಕೆ ಓಡಿಬಂದನಾ ಬಾಯ್ಫ್ರೆಂಡ್?
ಅಮೆರಿಕದ ಅಪಾರ್ಟ್‌ಮೆಂಟ್‌ನಲ್ಲಿ ಇರಿತದ ಗಾಯಗಳೊಂದಿಗೆ ನಿಕಿತಾ ಗೋಡಿಶಾಲ ಎಂಬ ಭಾರತೀಯ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಮಾಜಿ ಗೆಳೆಯನ ಮೇಲೆ ಕೊಲೆ ಆರೋಪ ಕೇಳಿಬಂದಿದೆ. ಮೇರಿಲ್ಯಾಂಡ್‌ನಲ್ಲಿರುವ ತನ್ನ ಮಾಜಿ ಗೆಳೆಯನ ಅಪಾರ್ಟ್‌ಮೆಂಟ್‌ನಲ್ಲಿ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾದಾಗಿನಿಂದ 27 ವರ್ಷದ ಆಕೆಯ ಮಾಜಿ ಪ್ರಿಯಕರ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಯಾರ್ಕ್, ಜನವರಿ 5: ಅಮೆರಿಕದಲ್ಲಿ ವಾಸಿಸುತ್ತಿದ್ದ 27 ವರ್ಷದ ಭಾರತೀಯ ಯುವತಿಯಾದ ನಿಕಿತಾ ರಾವ್ ಗೋಡಿಶಾಲ ಎಂಬಾಕೆಯನ್ನು ಮೇರಿಲ್ಯಾಂಡ್‌ನಲ್ಲಿರುವ ತನ್ನ ಮಾಜಿ ಪ್ರಿಯಕರನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆಯ ಮಾಜಿ ಪ್ರೇಮಿಯನ್ನೇ ಪ್ರಮುಖ ಶಂಕಿತ ಎಂದು ಹೆಸರಿಸಿದ್ದಾರೆ. ಆತ ಅಮೆರಿಕ (United States) ಬಿಟ್ಟು ಭಾರತಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಿಕಿತಾ ಗೋಡಿಶಾಲ ಜನವರಿ 2ರಂದು ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಸಾವಿನ ನಂತರ ಆಕೆಯ ಮಾಜಿ ಪ್ರಿಯಕರನಾದ 27 ವರ್ಷದ ಅರ್ಜುನ್ ಶರ್ಮಾ ಕಾಣೆಯಾಗಿದ್ದಾನೆ. ಮೇರಿಲ್ಯಾಂಡ್‌ನ ಹೊವಾರ್ಡ್ ಕೌಂಟಿಯಲ್ಲಿರುವ ಅರ್ಜುನ್ನ ಅಪಾರ್ಟ್‌ಮೆಂಟ್‌ನಲ್ಲಿಯೇ ಆಕೆ ಸಾವನ್ನಪ್ಪಿದ್ದಾಳೆ.
ಅರ್ಜುನ್ ಶರ್ಮಾ ಭಾರತಕ್ಕೆ ಮರಳಿದ್ದಾನೆ ಎಂದು ಪೊಲೀಸ್ ವರದಿ ತಿಳಿಸಿದೆ. ಜನವರಿ 3ರಂದು ಹೊವಾರ್ಡ್ ಕೌಂಟಿ ಪೊಲೀಸರು ಅರ್ಜುನ್ನ ಅಪಾರ್ಟ್ಮೆಂಟ್ನಿಂದ ನಿಕಿತಾಳ ಶವವನ್ನು ವಶಪಡಿಸಿಕೊಂಡಿದ್ದರು. ನಿಕಿತಾ ಕಾಣೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅರ್ಜುನ್ನನ್ನು ವಿಚಾರಣೆ ನಡೆಸಿದ್ದರು. ಆಗ ಆತ ಹೊಸ ವರ್ಷದಂದು ತಾನು ಕೊನೆಯ ಬಾರಿ ಆಕೆಯನ್ನು ತನ್ನದೇ ಫ್ಲಾಟ್ನಲ್ಲಿ ನೋಡಿದ್ದಾಗಿ ಹೇಳಿದ್ದ. ಮತ್ತೆ ಆತನನ್ನು ವಿಚಾರಣೆ ನಡೆಸಬೇಕೆನ್ನುವಷ್ಟರಲ್ಲಿ ಆತ ಭಾರತಕ್ಕೆ ಹಾರಿದ್ದ.
ಇದನ್ನೂ ಓದಿ: ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್ಗೆ ಟ್ವಿಸ್ಟ್: ಆರೋಪಿ ಕೂಡ ನೇಣಿಗೆ ಶರಣು
ಇದರಿಂದ ಅನುಮಾನಗೊಂಡ ಪೊಲೀಸರು ಆತನ ಫ್ಲಾಟ್ ಪರಿಶೀಲಿಸಿದಾಗ ಅಲ್ಲಿ ಚಾಕುವಿನಿಂದ ಇರಿತಕ್ಕೊಳಗಾದ ಗಾಯಗಳಿರುವ ನಿಕಿತಾಳ ಶವ ಪತ್ತೆಯಾಗಿತ್ತು. ತಕ್ಷಣ ಪೊಲೀಸರು ಅರ್ಜುನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದರು. ಅಮೆರಿಕದ ತನಿಖಾಧಿಕಾರಿಗಳು ಅರ್ಜುನ್ ಶರ್ಮಾ ವಾಸಿಸುತ್ತಿದ್ದ ಬಾಡಿಗೆ ಅಪಾರ್ಟ್ಮೆಂಟ್ನ ಬಾಗಿಲುಗಳನ್ನು ಮುರಿದು ಆ ಯುವತಿಯ ಶವವನ್ನು ವಶಕ್ಕೆ ಪಡೆದರು. ಆಕೆಯನ್ನು ಹಲವಾರು ಬಾರಿ ಇರಿದು ಕೊಲ್ಲಲಾಗಿತ್ತು.
ಇದನ್ನೂ ಓದಿ: ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು
ನಿಕಿತಾ ಗೋಡಿಶಾಲ ಯಾರು?:
ಭಾರತದ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ನಿಕಿತಾ ಫಾರ್ಮಸಿ ಪದವಿಯನ್ನು ಪಡೆದಿದ್ದಾಳೆ. ಆಕೆ ಬಾಲ್ಟಿಮೋರ್ ಕೌಂಟಿಯ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಆರೋಗ್ಯ ಐಟಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಅಮೆರಿಕಕ್ಕೆ ಹೋಗಿದ್ದಳು. ಆಕೆ ವೇಡಾ ಹೆಲ್ತ್‌ನಲ್ಲಿ ಡೇಟಾ ಮತ್ತು ಸ್ಟ್ರಾಟಜಿ ವಿಶ್ಲೇಷಕಳಾಗಿ ಕೆಲಸ ಮಾಡುತ್ತಿದ್ದಳು. ಆಕೆ ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಿದ್ದಳು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Mon, 5 January 26
