AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು

ಇಷ್ಟು ಮುಂದುವರೆದ ಯುಗದಲ್ಲಿಯೂ ಮೂಢನಂಬಿಕೆ, ಆಚರಣೆಗಳಿಗೆ ಕಲಬುರಗಿಯ ಮಹಿಳೆಯೊಬ್ಬರು ಬಲಿಯಾಗಿರುವುದು ಮಹಾರಾಷ್ಟ್ರದಲ್ಲಿ ನಡೆದಿದೆ. ದೆವ್ವ ಹಿಡಿದಿದೆ ಎಂಬ ಅಸಂಬದ್ಧ ನಂಬಿಕೆಯಿಂದ ಮುಕ್ತಬಾಯಿ ಎಂಬುವರನ್ನು ಬೇವಿನ ಕಟ್ಟಿಗೆಯಿಂದ ಹೊಡೆದು ಸೋಲಾಪುರದಲ್ಲಿ ಕೊಲೆ ಮಾಡಲಾಗಿದೆ. ಈ ಘಟನೆ ಮೂಢನಂಬಿಕೆಗಳ ವಿರುದ್ಧ ಸಮಾಜ ಎಚ್ಚೆತ್ತುಕೊಳ್ಳಬೇಕೆಂಬ ಗಂಭೀರ ಎಚ್ಚರಿಕೆಯಾಗಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು
ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದ ಪಾಪಿಗಳು!
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Dec 27, 2025 | 2:50 PM

Share

ಕಲಬುರಗಿ, ಡಿಸೆಂಬರ್ 27: ತಂತ್ರಜ್ಞಾನ ಯುಗದಲ್ಲಿಯೂ ಮೂಢನಂಬಿಕೆಗಳ ಅಂಧಕಾರ ಇನ್ನೂ ಜೀವಂತವಾಗಿರುವುದಕ್ಕೆ ಕಲಬುರಗಿಯ (Kalaburagi) ಮಹಿಳೆಯೊಬ್ಬರ ದಾರುಣ ಸಾವು ಸಾಕ್ಷಿಯಾಗಿದೆ. ದೆವ್ವ ಹಿಡಿದಿದೆ ಎಂಬ ಅಸಂಬದ್ಧ ನಂಬಿಕೆಯ ಹೆಸರಿನಲ್ಲಿ ಮಹಿಳೆಯನ್ನು ಬೇವಿನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮುರುಮ್ ಗ್ರಾಮದಲ್ಲಿ ನಡೆದಿದೆ.

ಬೇವಿನ ಕಟ್ಟಿಗೆಯಿಂದ ಹಲ್ಲೆ

ಕೊಲೆಯಾದ ಮಹಿಳೆಯನ್ನು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವೆಂಕಟೇಶ್ವರ ನಗರ ನಿವಾಸಿ ಮುಕ್ತಬಾಯಿ ಎಂದು ಗುರುತಿಸಲಾಗಿದೆ. ಸುಮಾರು ಆರು ವರ್ಷಗಳ ಹಿಂದೆ ಮುಕ್ತಬಾಯಿಗೆ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಐದು ವರ್ಷದ ಗಂಡು ಮಗನೂ ಇದ್ದನು. ಇತ್ತೀಚಿನ ದಿನಗಳಲ್ಲಿ ಮುಕ್ತಬಾಯಿಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿದ ಗಂಡನ ಮನೆಯವರು, ಆಕೆಯ ಮೇಲೆ ಪದೇಪದೇ ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.

ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ

ಐದು ವರ್ಷದ ಮಗನ ಎದುರಲ್ಲೇ ಥಳಿತ

ಈ ಬಗ್ಗೆ ಮಾತನಾಡಿದ ಮೃತಳ ತಾಯಿ ತಿಪ್ಪವ್ವ, ಮಗಳಿಗೆ ಯಾವುದೇ ದೆವ್ವ ಹಿಡಿದಿಲ್ಲ. ಅವಳನ್ನು ಹಿಂಸಿಸಬೇಡಿ ಎಂದು ಮನವಿ ಮಾಡಿದರೂ ಆಕೆಯ ಮಾತು ಕೇಳಲಿಲ್ಲ. ನಿನ್ನೆ ಗಂಡ ಮನೆಯಲ್ಲಿ ಇಲ್ಲದ ವೇಳೆ, ಐದು ವರ್ಷದ ಮಗನ ಎದುರಲ್ಲೇ ಮುಕ್ತಬಾಯಿಯ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ ಎಂದಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ, ನದಿ ಸ್ನಾನ ಮಾಡಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮುಕ್ತಬಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ಶಕ್ತಿ ಯೋಜನೆಯೇ ಬಂಡವಾಳ, ಮಹಿಳೆಯರೇ ಟಾರ್ಗೆಟ್​​: ಕಳ್ಳಿಯರ ಗ್ಯಾಂಗ್​​ ಭೇದಿಸಿದ ಖಾಕಿ

ಮೃತಳ ಸಹೋದರಿ ಶ್ರೀದೇವಿ, ಇದು ಮೂಢನಂಬಿಕೆಯ ಹೆಸರಿನ ನೇರ ಕೊಲೆ ಎಂದು ಆರೋಪಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಳಂದ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಿ, ತನಿಖೆಯನ್ನು ಮಹಾರಾಷ್ಟ್ರದ ಮುರುಮ್ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.