Turkey Earthquake: ಸಾವಿನ ಸಂಖ್ಯೆ 37,000ಕ್ಕೂ ಹೆಚ್ಚು; ಟರ್ಕಿಗೆ ಆದ ನಷ್ಟ ಎಷ್ಟು?

Loss From Turkey Earthquake: ಟರ್ಕಿ ಭೂಕಂಪದಿಂದ ಮೃತಪಟ್ಟಿರುವವರ ಸಂಖ್ಯೆ 37 ಸಾವಿರ ಗಡಿ ದಾಟಿದೆ. ಒಂದು ಅಂದಾಜು ಪ್ರಕಾರ, ಕಟ್ಟಡಗಳ ಪುನರ್ನಿಮಾಣ ವೆಚ್ಚ ಸೇರಿ ಟರ್ಕಿಗೆ ಈ ಭೂಕಂಪದಿಂದ ಆಗಿರುವ ನಷ್ಟ 84 ಬಿಲಿಯನ್ ಡಾಲರ್ ಎನ್ನಲಾಗಿದೆ.

Turkey Earthquake: ಸಾವಿನ ಸಂಖ್ಯೆ 37,000ಕ್ಕೂ ಹೆಚ್ಚು; ಟರ್ಕಿಗೆ ಆದ ನಷ್ಟ ಎಷ್ಟು?
ಟರ್ಕಿ ಭೂಕಂಪ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 14, 2023 | 11:14 AM

ನವದೆಹಲಿ: ಟರ್ಕಿ ಭೂಕಂಪದಲ್ಲಿ (Turkey earthquake) ಬಲಿಯಾಗಿರುವವರ ಸಂಖ್ಯೆ, ಇತ್ತೀಚಿನ ಮಾಹಿತಿ ಪ್ರಕಾರ 37 ಸಾವಿರ ಗಡಿ ದಾಟಿದೆ. ಟರ್ಕಿ ದೇಶವೊಂದರಲ್ಲೇ 32 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನೂ ಕೂಡ ಕಟ್ಟಡ ತೆರವು ಕಾರ್ಯಾಚರಣೆಗಳು ನಡೆಯುತ್ತಿದ್ದು, ಈಗಲೂ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ.

ಫೆಬ್ರುವರಿ 6ರಂದು ಟರ್ಕಿಯಲ್ಲಿ ಒಂದೇ ದಿನ ನಾಲ್ಕು ಭೂಕಂಪ ಸಂಭವಿಸಿತ್ತು. ಅದರಲ್ಲಿ ಮೊದಲೆರಡು ಭೂಕಂಪಗಳ ತೀವ್ರತೆ 7.5ಕ್ಕೂ ಹೆಚ್ಚು ಇತ್ತು. ಈ ಭೂಕಂಪವಾದ ಸ್ಥಳದಿಂದ 100 ಕಿಮೀ ಆಸುಪಾಸು ಪ್ರದೇಶಗಳು ಸ್ಮಶಾನದಂತಾಗಿವೆ. ಪೋಲಾಟ್ ಎಂಬ ಗ್ರಾಮದಲ್ಲಿ ಎಲ್ಲಾ ಮನೆಗಳೂ ನೆಲಸಮಗೊಂಡಿವೆ. ಗ್ರಾಮಸ್ಥರು ತಮ್ಮ ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ಸಂಗ್ರಹಿಸುತ್ತಿರುವ ದೃಶ್ಯ ಕರುಳುಹಿಂಡುವಂತಿದೆ.

ಟರ್ಕಿಗೆ ಲಕ್ಷಾಂತರ ಕೋಟಿ ನಷ್ಟ

ಕಳೆದ 8 ದಶಕದಲ್ಲೇ ಟರ್ಕಿಯಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪ ದುರಂತದಲ್ಲಿ ಅಪಾರ ಪ್ರಾಣಹಾನಿ, ಕಟ್ಟಡಗಳ ಹಾನಿ ಜೊತೆಗೆ ಭಾರೀ ಹಣಕಾಸು ನಷ್ಟವೂ ಆಗಿದೆ. ಒಂದು ಅಂದಾಜು ಪ್ರಕಾರ, ಈ ದುರಂತದಿಂದ ಟರ್ಕಿಗೆ 84.1 ಬಿಲಿಯನ್ ಡಾಲರ್ (ಸುಮಾರು 7 ಲಕ್ಷ ಕೋಟಿ ರೂ) ನಷ್ಟ ಆಗಬಹುದು ಎಂಬ ಅಂದಾಜು ಇದೆ. ಟರ್ಕಿ ಸರ್ಕಾರ ಅಂದಾಜು ಮಾಡಿರುವ ಪ್ರಕಾರವೇ ಕನಿಷ್ಠ 50 ಬಿಲಿಯನ್ ಡಾಲರ್ ನಷ್ಟ ಆಗಬಹುದು ಎನ್ನಲಾಗಿದೆ.

ಇದನ್ನೂ ಓದಿ: New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್

ಇದರಲ್ಲಿ ಮನೆಗಳ ದುರಸ್ತಿ ವೆಚ್ಚವೂ ಸೇರಿದೆ. ಮನೆಗಳ ದುರಸ್ತಿಗೇ ಶೇ. 80ಕ್ಕಿಂತ ಹೆಚ್ಚು ವೆಚ್ಚ ಆಗುತ್ತದೆ. ದುರಂತದಿಂದ ರಾಷ್ಟ್ರೀಯ ಆದಾಯ ನಿಂತು 10.4 ಬಿಲಿಯನ್ ಡಾಲರ್​ನಷ್ಟು ನಷ್ಟ ಆಗಿದೆ. ಕೆಲಸಗಳು ನಿಂತದ್ದರಿಂದ 2.9 ಬಿಲಿಯನ್ ಡಾಲರ್ ನಷ್ಟ ಆಗಿದೆ.

ಇದೇ ವೇಳೆ, ಭೂಕಂಪಪೀಡಿತ ಸಿರಿಯಾ ದೇಶದಿಂದ ವಲಸಿಗರನ್ನು ತನ್ನ ದೇಶಕ್ಕೆ ಬರಲು ಅವಕಾಶ ಕೊಡದಿರಲು ಟರ್ಕಿ ನಿರ್ಧರಿಸಿದೆ. ಇನ್ನು, ಟರ್ಕಿ ದೇಶಕ್ಕೆ ರಕ್ಷಣಾ ಕಾರ್ಯಾಚರಣೆಗಳಲ್ಲಿ ಅಂತಾರಾಷ್ಟ್ರೀಯ ಬೆಂಬಲ ಹೆಚ್ಚುತ್ತಿದೆ. ಭಾರತದಿಂದ ಈಗಾಗಲೇ ಏಳೆಂಟು ವಿಮಾನಗಳು ಟರ್ಕಿಗೆ ಹೋಗಿವೆ. ಅಮೆರಿಕ ಮೊದಲಾದ ಹಲವು ದೇಶಗಳೂ ರಕ್ಷಣಾ ಸಾಮಗ್ರಿ ಮತ್ತು ತಂಡಗಳನ್ನು ಕಳುಹಿಸಿವೆ. ಅತ್ತ ರಷ್ಯಾ ದೇಶ ತನ್ನ 300ಕ್ಕೂ ಹೆಚ್ಚು ತುಕಡಿಗಳನ್ನು ಸಿರಿಯಾಗೆ ಕಳುಹಿಸಿರುವುದಾಗಿ ತಿಳಿಸಿದೆ.