ದೇಶಭ್ರಷ್ಟ ಶತಕೋಟ್ಯಧಿಪತಿ, ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತ ಹಸ್ತಾಂತರಿಸಲು ಯು.ಕೆ. ಗೃಹ ಇಲಾಖೆ ಒಪ್ಪಿಗೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿನ 14,000 ಕೋಟಿ ರೂಪಾಯಿ ವಂಚನೆ ಪ್ರಕರಣ ಆರೋಪಿ, ದೇಶಭ್ರಷ್ಟ ಶತಕೋಟ್ಯಧಿಪತಿ- ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಶಿಫಾರಸನ್ನು ಯು.ಕೆ. ಗೃಹ ಇಲಾಖೆ ವಿಲೇವಾರಿ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ನಲ್ಲಿನ ರೂ. 14,000 ಕೋಟಿ ರೂಪಾಯಿ ವಂಚನೆಯಲ್ಲಿ ಭಾಗಿ ಆಗಿರುವ ಆರೋಪ ಹೊತ್ತಿರುವ, ದೇಶಭ್ರಷ್ಟ ಶತಕೋಟ್ಯಧಿಪತಿ ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ವಿಲೇವಾರಿ ಆಗಿದೆ ಎಂದು ಯುನೈಟೆಡ್ ಕಿಂಗ್ಡಮ್ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ. ತನ್ನ ಸಂಬಂಧಿ ಮೆಹುಲ್ ಚೋಕ್ಸಿ ಜೊತೆಗೂಡಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚನೆ ಮಾಡಿರುವ ಆರೋಪ ಇದೆ. ಇದೇ ವರ್ಷದ ಫೆಬ್ರವರಿ 25ನೇ ತಾರೀಕಿನಂದು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೀರವ್ ಮೋದಿಯ ಹಸ್ತಾಂತರಕ್ಕೆ ಅನುಮತಿಸಿತ್ತು. ಕೋರ್ಟ್ ಗಮನಿಸಿದ್ದ ಅಂಶವನ್ನು ಯು.ಕೆ. ಗೃಹ ಇಲಾಖೆಗೆ ಕಳಿಸಲಾಗಿತ್ತು. ಅದರ ಪ್ರಕಾರ ಈಗ ಹಸ್ತಾಂತರ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ.
ಕೊರೊನಾ ಸಂದರ್ಭದಲ್ಲಿ ನೀರವ್ ಮೋದಿಯ ಮಾನಸಿಕ ಆರೋಗ್ಯ ಕುಸಿಯುತ್ತಿದೆ ಮತ್ತು ಭಾರತೀಯ ಜೈಲುಗಳ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಮಂಡಿಸಿದ್ದ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ಹೇಳಿದೆ. “ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವುದು ಮಾನವ ಹಕ್ಕುಗಳ ನಿಯಮಾವಳಿಗೆ ಹೊಂದುವಂತೆಯೇ ಇದೆ ಎಂಬ ಬಗ್ಗೆ ನನಗೆ ಸಂತೃಪ್ತಿ ಇದೆ,” ಎಂದು ಯು.ಕೆ. ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಹೇಳಿದ್ದಾಗಿ ತಿಳಿಸಲಾಗಿದೆ. ನೀರವ್ ಮೋದಿಗೆ ಮೇಲ್ಮನವಿ ಸಲ್ಲಿಸುವ ಹಕ್ಕಿದೆ ಎಂದು ತಿಳಿಸಿದ್ದಾಗಿ ಕೂಡ ವರದಿ ಆಗಿದೆ.
ಇದಕ್ಕೂ ಮುನ್ನ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅನುರಾಗ್ ಶ್ರೀವಾಸ್ತವ ಮಾತನಾಡಿ, ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ನೀರವ್ ಮೋದಿಯ ಹಸ್ತಾಂತರಕ್ಕಾಗಿ ಯು.ಕೆ. ಗೃಹ ಕಾರ್ಯದರ್ಶಿಗೆ ಶಿಫಾರಸು ಮಾಡಿದೆ. ನೀರವ್ ಮೋದಿಯ ಶೀಘ್ರ ಹಸ್ತಾಂತರಕ್ಕಾಗಿ ಭಾರತ ಸರ್ಕಾರವು ಯು.ಕೆ. ಅಧಿಕಾರಿಗಳ ಜತೆ ಮಾತುಕತೆ ನಡೆಸಬಹುದು ಎಂದಿದ್ದರು.
ನೀರವ್ ಮೋದಿಯನ್ನು ಹಸ್ತಾಂತರ ಮಾಡಿದರೆ ಆತನಿಗೆ ನ್ಯಾಯ ಸಿಗುವುದಿಲ್ಲ ಅನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಯು.ಕೆ. ನ್ಯಾಯಾಧೀಶ ಹೇಳಿದ್ದಾರೆ. ಭಾರತದ ಮನವಿಗೆ ಅವರು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾಗಿ ವರದಿ ಆಗಿದೆ. ಭಾರತದಲ್ಲಿ ಪ್ರಕರಣ ಎದುರಿಸಬೇಕಿರುವುದು ಪ್ರಬಲವಾಗಿದೆ ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರ ವಂಚಕರ ಜತೆ ಸೇರಿ, ನಕಲಿ ಪತ್ರಗಳನ್ನು ಬಳಸಿ, ದೊಡ್ಡ ಮೊತ್ತದ ಪಾವತಿಸದ ಸಾಲಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಈ ಪ್ರಕರಣದ ಬಗ್ಗೆ ನ್ಯಾಯಾಧೀಶರು ತಿಳಿಸಿದ್ದಾರೆ.
“ನೀರವ್ ಮೋದಿ ನ್ಯಾಯಬದ್ಧವಾದ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ನಾನು ಯಾವುದೇ ನ್ಯಾಯಬದ್ಧ ವಹಿವಾಟನ್ನು ಕಂಡಿಲ್ಲ ಮತ್ತು ನಂಬಿಕೆದ್ರೋಹದ ಪ್ರಕ್ರಿಯೆಗಳು ನಡೆದಿವೆ ಎಂದುಕೊಳ್ಳುತ್ತೇನೆ,”ಎಂದಿದ್ದಾರೆ.
ಇದನ್ನೂ ಓದಿ: ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದ ಲಂಡನ್ ನ್ಯಾಯಾಲಯ
ಇದನ್ನೂ ಓದಿ: ನೀರವ್ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ ಆತನ ಸಹೋದರಿಯೇ ಪ್ರಮುಖ ಸಾಕ್ಷಿ
( Fugitive billionaire Nirav Modi extradition to India recommendation by the court to home department cleared, says UK home secretary Priti Patel)
Published On - 7:36 pm, Fri, 16 April 21