ಬ್ರಿಟಿಷ್ ಪ್ರಧಾನ ಮಂತ್ರಿ ಸ್ಥಾನಕ್ಕೆ ರೇಸ್ನಲ್ಲಿರುವ ಲಿಜ್ ಟ್ರಸ್ ವಾಸ್ತವದಿಂದ ವಿಮುಖರಾಗುತ್ತಿದ್ದಾರೆ: ಮೈಕೆಲ್ ಗೋವ್, ಯುಕೆ ಸಂಸದ
'ಎಫ್ ಟಿ ಎಸ್ ಈ ಯ 100 ಎಕ್ಸಿಕ್ಯೂಟ್ ಶೇರು ಆದ್ಯತೆಗಳನ್ನು ಸಂರಕ್ಷಿಸುವುದು ಹೇಗೆ ನಮ್ಮ ಸಮಾಜದ ಕಡು ಬಡವನಿಗೆ ನೆರವಾದೀತು ಅನ್ನೋದನ್ನು ಅರ್ಥಮಾಡಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ. ಬೇಡಿಕೆಯ ಸ್ಥಿತಿ ತಲೆದೋರಿದಾಗ ಅದು ಸೂಕ್ತ ಪ್ರಾಶಸ್ತ್ಯ ಆಗಲಾರದು,’ ಎಂದು ಗೋವ್ ಹೇಳಿದ್ದಾರೆ.
ಲಂಡನ್: ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ನಡೆಯತ್ತಿರುವ ತುರುಸಿನ ಪೈಪೋಟಿಯಲ್ಲಿ ಭಾರತೀಯ ಮೂಲದ ರಿಷಿ ಸುನಾಕ್ (Rishi Sunak) ಅವರ ಪ್ರತಿಸ್ಪರ್ಧಿ ಮತ್ತು ಸಮೀಕ್ಷೆಗಳ ಪ್ರಕಾರ ಸುನಾಕ್ ಅವರಿಗಿಂತ ಬಹಳ ಮುಂದಿರುವ ಲಿಜ್ ಟ್ರಸ್ (Liz Truss) ಅವರ ಧೋರಣೆ ಮತ್ತು ನಿಲುವುಗಳನ್ನು ಕನ್ಸರ್ವೇಟಿವ್ ಪಕ್ಷದ ಹಿರಿಯ ಸದಸ್ಯ ಮತ್ತು ಹಿಂದೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿರುವ ಮೈಕೆಲ್ ಗೋವ್ (Michael Gove) ಕಟುವಾಗಿ ಟೀಕಿಸಿದ್ದಾರೆ. ಮುಂದಿನ ಹದಿನೈದು ದಿನಗಳಲ್ಲಿ ಮುಂದಿನ ಬ್ರಿಟಿಷ್ ಪ್ರಧಾನ ಮಂತ್ರಿ ಯಾರೆನ್ನುವುದು ಗೊತ್ತಾಗಲಿದ್ದು ಸುನಾಕ್ ಅವರೇ ಟಾಪ್ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಗೋವ್ ಹೇಳಿದ್ದಾರೆ.
ಸೆಪ್ಟೆಂಬರ್ 5 ರಂದು ಫಲಿತಾಂಶ ಹೊರಬೀಳಲಿದ್ದು ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿರುವ ಟ್ರಸ್ ಇದುವರೆಗೆ ನಡೆದಿರುವ ಎಲ್ಲ ಸುತ್ತುಗಳಲ್ಲಿ ಸುನಾಕ್ ಅವರನ್ನು ಹಿಂದಟ್ಟಿ ನಿರ್ಗಮಿಸುತ್ತಿರುವ ಬೊರಿಸ್ ಜಾನ್ಸನ್ ಸ್ಥಾನಕ್ಕೇರುವ ಸಾಧ್ಯತೆಯನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ರೇಸ್ನಲ್ಲಿ ಗೆದ್ದವರು ಮರುದಿನವೇ ಅಂದರೆ ಸೆಪ್ಟೆಂಬರ್ 6 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಗೆದ್ದ ಅಭ್ಯರ್ಥಿಯ ಹಾದಿ ಸುಗಮವಾಗೇನೂ ಇಲ್ಲ, ಯಾಕೆಂದರೆ ಯುಕೆ ಹಿಂದೆಂದೂ ಕಾಣದ ಹಣದುಬ್ಬರದಿಂದ ಬಳಲುತ್ತಿದೆ, ಈ ವರ್ಷಾಂತ್ಯದಲ್ಲಿ ದೇಶವು ಆರ್ಥಿಕ ಹಿಂಜರಿತಕ್ಕೆ ಸಿಕ್ಕುವ ಸಾಧ್ಯತೆಯಿದೆ.
ಹೆಚ್ಚುತ್ತಿರುವ ಬಿಲ್‌ಗಳನ್ನು ಪಾವತಿಸಲು ಹೆಣಗಾಡುತ್ತಿರುವ ಜನರಿಗೆ ನೆರವಾಗುವ ಯೋಜನೆ ರೂಪಿಸುವುದನ್ನು ಬಿಟ್ಟು ಅಧಿಕಾರವಹಿಸಿಕೊಂಡ ಕೂಡಲೇ ತೆರಿಗೆಗಳ ಮೇಲೆ ಕಡಿತ ಘೋಷಿಸುವ ಬಗ್ಗೆ ಟ್ರಸ್ ಮಾಡುತ್ತಿರುವುದು ಸುನಾಕ್ ಮತ್ತು ಅವರನ್ನು ಬೆಂಬಲಿಸುತ್ತಿರುವ ಸದಸ್ಯರಿಂದ ತೀವ್ರ ಟೀಕೆಗೊಳಗಾಗಿದೆ.
‘ನಾಯಕತ್ವದ ಚರ್ಚೆಯನ್ನು ರೂಪಿಸಬೇಕಾದವರು ಅದರಿಂದ ವಿಮುಖರಾಗುತ್ತಿರುವುದು ನನ್ನಲ್ಲಿ ತೀವ್ರ ಸ್ವರೂಪದ ಕಳವಳವನ್ನುಂಟು ಮಾಡಿದೆ,’ ಎಂದು ಶನಿವಾರ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ಲೇಖನದಲ್ಲಿ ಗೋವ್ ಹೇಳಿದ್ದಾರೆ.
‘ಜೀವನ ಸರಿದೂಗಿಸುವ ವೆಚ್ಚ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ತತ್ತರಿಸಿರುವ ಜನರಿಗೆ ತೆರಿಗೆ ಮೇಲಿನ ಕಡಿತ ಯಾವುದೇ ಬಗೆಯ ನಿರಾಳತೆ ಒದಗಿಸಲಾರದು,’ ಎಂದು ಗೋವ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
‘ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಕ್ಷೇತ್ರಕ್ಕೆ ಮೀಸಲಿಟ್ಟ ರಾಷ್ಟ್ರೀಯ ವಿಮಾ ತೆರಿಗೆಗಳಲ್ಲಿ ಇತ್ತೀಚಿನ ಏರಿಕೆಯನ್ನು ಕಡಿತಗೊಳಿಸಬೇಕೆನ್ನುವ ಟ್ರಸ್ ಅವರ ಯೋಜನೆಗಳು ‘ಶ್ರೀಮಂತರಿಗೆ ಅನುಕೂಲಕರವಾಗಲಿದೆ.’ ಹಾಗೆಯೇ, ನಿಗಮ ತೆರಿಗೆಯ ಮೇಲೆ ರಿಯಾಯಿತಿ ನೀಡುವುದು ದೊಡ್ಡ ಉದ್ಯಮಗಳಿಗೆ ಸಹಾಯ ಮಾಡುತ್ತದೆಯೇ ಹೊರತು ಸಣ್ಣ ಉದ್ಯಮಿಗಳಿಗೆ ಅಲ್ಲ’ ಎಂದು ಅವರು ಹೇಳಿದ್ದಾರೆ.
‘ಎಫ್ ಟಿ ಎಸ್ ಈ ಯ 100 ಎಕ್ಸಿಕ್ಯೂಟ್ ಶೇರು ಆದ್ಯತೆಗಳನ್ನು ಸಂರಕ್ಷಿಸುವುದು ಹೇಗೆ ನಮ್ಮ ಸಮಾಜದ ಕಡು ಬಡವನಿಗೆ ನೆರವಾದೀತು ಅನ್ನೋದನ್ನು ಅರ್ಥಮಾಡಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ. ಬೇಡಿಕೆಯ ಸ್ಥಿತಿ ತಲೆದೋರಿದಾಗ ಅದು ಸೂಕ್ತ ಪ್ರಾಶಸ್ತ್ಯ ಆಗಲಾರದು,’ ಎಂದು ಗೋವ್ ಹೇಳಿದ್ದಾರೆ.
ಬ್ರಿಟಿಷ್ ಪ್ರಧಾನ ಮಂತ್ರಿಯ ಸ್ಥಾನಕ್ಕೆ ರೇಸ್ ಶುರುವಾದ ಆರಂಭದಲ್ಲಿ ಅಷ್ಟೇನೂ ಜನಪ್ರಿಯರಲ್ಲದ ಬಲಫಂಥೀಯ ಸಂಸದ ಕೆಮಿ ಬದೆನೋಖ್ ಅವರನ್ನು ಬೆಂಬಲಿಸಿದ್ದ 54-ವರ್ಷ-ವಯಸ್ಸಿನ ಗೋವ್ ನಂತರದ ದಿನಗಳಲ್ಲಿ ಸ್ಪರ್ಧೆ ಸುನಾಕ್ ಮತ್ತು ಟ್ರಸ್ ನಡುವೆ ಸೀಮಿತಗೊಂಡಾಗ ಸುನಾಕ್ ರನ್ನು ಬೆಂಬಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
‘ಈ ಹುದ್ದೆ ಅಲಂಕರಿಸಲು ಅಗತ್ಯವಿರುವ ಕ್ಷಮತೆ ಮತ್ತು ಸಾಮರ್ಥ್ಯ ಏನೆನ್ನುವುದು ನನಗೆ ಚೆನ್ನಾಗಿ ಗೊತ್ತಿದೆ, ಅದು ಸುನಾಕ್ ಅವರಲ್ಲಿದೆ,’ ಎಂದು ಗೋವ್ ಹೇಳಿದ್ದಾರೆ.
ಜುಲೈ ವರೆಗೆ ಸುಧಾರಣಾ, ವಸತಿ ಮತ್ತು ಸಮುದಾಯಗಳು ಇಲಾಖೆಗಳ ಉಸ್ತವಾರಿಯಲ್ಲಿದ್ದ ಗೋವ್ ಅದಕ್ಕೂ ಮೊದಲು ಶಿಕ್ಷಣ ಮತ್ತು ನ್ಯಾಯ ಖಾತೆಗಳ ಸಚಿವರಾಗಿದ್ದರು. ಆದರೆ ಹೊಸದಾಗಿ ರಚನೆಯಾಗುವ ಸಂಪುಟದಲ್ಲಿ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಅವರು ಒಲವು ತೋರುತ್ತಿಲ್ಲ.
‘ಮತ್ತೊಮ್ಮೆ ಸರ್ಕಾರದ ಭಾಗವಾಗುವ ಇಚ್ಛೆ ನನಗಿಲ್ಲ. ಆದರೆ ನನ್ನ ಕರೀಯರ್ ನ 11 ವರ್ಷಗಳನ್ನು ಮೂರು ಬೇರೆ ಬೇರೆ ಪ್ರಧಾನ ಮಂತ್ರಿಗಳ ಅಧೀನದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ,’ ಎಂದು ಗೋವ್ ಹೇಳಿದ್ದಾರೆ.