ಭಾರತ, ಬ್ರಿಟನ್ ಹೊಸ ವೀಸಾ ಯೋಜನೆ ಜಾರಿ; ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

‘ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ’ ಅಡಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಬ್ರಿಟನ್​ ಸರ್ಕಾರ ವಿನಂತಿಸಿದೆ. ಇದರೊಂದಿಗೆ ಯೋಜನೆ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಂತಾಗಿದೆ.

ಭಾರತ, ಬ್ರಿಟನ್ ಹೊಸ ವೀಸಾ ಯೋಜನೆ ಜಾರಿ; ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Feb 22, 2023 | 6:56 AM

ಲಂಡನ್: ಭಾರತದ (India) 18ರಿಂದ 30 ವರ್ಷ ವಯಸ್ಸಿನ ಯುವ ವೃತ್ತಿಪರರಿಗೆ ಎರಡು ವರ್ಷಗಳ ಕಾಲ ಬ್ರಿಟನ್​ನಲ್ಲಿ ನೆಲೆಸಲು ಮತ್ತು ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ‘ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ (UK-India Young Professional Scheme)’ ಅಡಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಬ್ರಿಟನ್​ ಸರ್ಕಾರ ವಿನಂತಿಸಿದೆ. ಇದರೊಂದಿಗೆ ಯೋಜನೆ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಂತಾಗಿದೆ. ಅರ್ಹ ಭಾರತೀಯ ಅಭ್ಯರ್ಥಿಗಳು ಫೆಬ್ರವರಿ 28ರಿಂದ ಮಾರ್ಚ್​​ 2ರ ಒಳಗಾಗಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಬ್ರಿಟಿಷ್ ಹೈಕಮಿಷನರ್​ ಕಚೇರಿ ತಿಳಿಸಿದೆ.

ಈ ವೀಸಾಕ್ಕೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ‘ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ’ ಬ್ಯಾಲಟ್ ಅನ್ನು ಆಯ್ಕೆ ಮಾಡಬೇಕು. ವೀಸಾ ಪಡೆಯಲು ಇರುವ ಅರ್ಹತೆಯನ್ನು ದೃಢೀಕರಿಸಬೇಕು. ವೀಸಾ ಪಡೆಯಲು ಇರುವ ಅರ್ಹತೆಗಳನ್ನು ಪೂರೈಸಿದ್ದೀರಾ ಎಂಬುದನ್ನು ಗಮನಿಸಿಕೊಂಡೇ ಅರ್ಜಿ ಸಲ್ಲಿಸಿ ಎಂದು ಬ್ರಿಟಿಷ್ ಸರ್ಕಾರದ ಪ್ರಕಟಣೆ ಮನವಿ ಮಾಡಿದೆ.

ವೀಸಾಕ್ಕೆ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳಿರಬೇಕು?

ಈ ಹೊಸ ವೀಸಾ ಯೋಜನೆಯಡಿ 18ರಿಂದ 30 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಪದವಿ ಶಿಕ್ಷಣ ಪಡೆದಿರಬೇಕು. ಬ್ರಿಟನ್​​ನಲ್ಲಿ ಖರ್ಚುವೆಚ್ಚಗಳಿಗಾಗಿ ಕನಿಷ್ಠ 2,530 ಪೌಂಡ್ ಉಳಿತಾಯ ಹೊಂದಿರಬೇಕು ಎಂದು ಬ್ರಿಟಿಷ್ ಸರ್ಕಾರದ ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಅರ್ಹರಾಗಿದ್ದರೆ ‘ಯಂಗ್ ಇಂಡಿಯಾ ಪ್ರೊಫೆಷನಲ್ಸ್ ಸ್ಕೀಮ್ ಬ್ಯಾಲಟ್’ ಎಂಟರ್ ಮಾಡಿ. ನಂತರ ವೀಸಾಗೆ ಸಲ್ಲಿಸಬೇಕಿರುವ ಅರ್ಜಿ ನಮೂನೆ ನಿಮಗೆ ದೊರೆಯುತ್ತದೆ. ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು. ಪಾಸ್​ಪೋರ್ಟ್ ಸೇರಿದಂತೆ ಸಾಮಾನ್ಯವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲ ದಾಖಲೆಗಳೂ ಈ ಹೊಸ ಯೋಜನೆಯಡಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಬೇಕಾಗುತ್ತವೆ.

ಏನಿದು ಯುವ ವೃತ್ತಿಪರರ ವೀಸಾ ಯೋಜನೆ?

ಬ್ರಿಟನ್ ಪ್ರಧಾನಿಗಳ ಕಾರ್ಯಾಲಯ ನೀಡಿರುವ ಮಾಹಿತಿ ಪ್ರಕಾರ, ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆಯ ಅಡಿಯಲ್ಲಿ, ಪದವಿ ಪಡೆದ 18ರಿಂದ 30 ವರ್ಷ ವಯಸ್ಸಿನ ಭಾರತೀಯರಿಗೆ ಪ್ರತಿ ವರ್ಷ 3,000 ವೀಸಾ ನೀಡಲಾಗುತ್ತದೆ. ಈ ಯೋಜನೆಯಡಿ ವೀಸಾ ಪಡೆದವರು ಬ್ರಿಟನ್​ಗೆ ತೆರಳಿ ಅಲ್ಲಿ ಕೆಲಸ ಮಾಡಬಹುದಾಗಿದೆ ಹಾಗೂ 2 ವರ್ಷಗಳ ವರೆಗೆ ವಾಸಿಸಬಹುದಾಗಿದೆ. ಅದೇ ರೀತಿ, ಬ್ರಿಟನ್​ನ ವೃತ್ತಿಪರರು ಉದ್ಯೋಗದ ಕಾರಣಗಳಿಗಾಗಿ ಭಾರತಕ್ಕೆ ಬಂದು ನೆಲೆಸಲು ಮತ್ತು ಇಲ್ಲಿ ಉದ್ಯೋಗ ನಿರ್ವಹಿಸಲೂ ಅವಕಾಶವಿದೆ.

ಕಳೆದ ವರ್ಷ ನಡೆದ ಜಿ-20 ಶೃಂಗಸಭೆಯ 17ನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಭಾರತೀಯರಿಗೆ ವೀಸಾ ನೀಡಿಕೆ ಯೋಜನೆ ಬಗ್ಗೆ ಬ್ರಿಟನ್ ಸರ್ಕಾರ ನಿರ್ಧಾರ ಪ್ರಕಟಿಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 am, Wed, 22 February 23