Russia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 18, 2022 | 9:08 AM

ರಷ್ಯಾ ರವಾನಿಸಿರುವ ಸಬ್​ಮರೀನ್​ಗಳಲ್ಲಿ 16 ಖಂಡಾಂತರ ಕ್ಷಿಪಣಿಗಳಿದ್ದು, ಒಂದು ಇಡೀ ನಗರ ಅಥವಾ ಪಟ್ಟಣವನ್ನು, ನಿರ್ದಿಷ್ಟ ಭೂ ಪ್ರದೇಶವನ್ನು ಹಾಳುಗೆಡವುವ ಸಾಮರ್ಥ್ಯ ಈ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳಿವೆ ಇವೆ.

Russia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ
ರಷ್ಯಾ ಉತ್ತರ ಅಟ್ಲಾಂಟಿಕ್​ ಸಾಗರಕ್ಕೆ ಅಣ್ವಸ್ತ್ರ ಸಜ್ಜಿತ ಸಬ್​ಮರೀನ್​ಗಳನ್ನು ರವಾನಿಸಿದೆ (ಪ್ರಾತಿನಿಧಿಕ ಚಿತ್ರ)
Follow us on

ರಷ್ಯಾದ ಒಂದೇ ಒಂದು ಯುದ್ಧನೌಕೆ ಮುಳುಗಿದರೂ ಜಗತ್ತು 3ನೇ ಮಹಾಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಅಣ್ವಸ್ತ್ರ ದಾಳಿಯ ಭೀತಿಯನ್ನೂ ತಳ್ಳಿ ಹಾಕಲು ಆಗುವುದಿಲ್ಲ ಎಂದು ಜಾಗತಿಕ ಮಟ್ಟದಲ್ಲಿ ಹಲವು ವಿಶ್ಲೇಷಕರು ಎಚ್ಚರಿಸುತ್ತಲೇ ಇದ್ದರು. ಯಾವುದು ಆಗಬಾರದು ಎಂದು ಎಲ್ಲರೂ ಬಯಸುತ್ತಿದ್ದರೋ ಅದು ಆಗಿಯೇ ಬಿಟ್ಟಿದೆ. ರಷ್ಯಾ ನೌಕಾಪಡೆಯ ಪ್ರಮುಖ ಯುದ್ಧನೌಕೆ ಮೊಸ್​ಕೊವ್​ ಮುಳುಗಿದೆ. ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ರಷ್ಯಾ ಇದೀಗ ಉಕ್ರೇನ್​ನ ಮರಿಯುಪೋಲ್ ನಗರದ ಮೇಲೆ ದಾಳಿ ತೀವ್ರಗೊಳಿಸಿದೆ. ‘ಶರಣಾಗಲು ಕೊನೆಯ ಅವಕಾಶ’ ಎನ್ನುವ ರಷ್ಯಾದ ಬೆದರಿಕೆಯನ್ನು ಉಕ್ರೇನ್ ಸೇನೆ ಸಾರಾಸಗಟಾಗಿ ತಳ್ಳಿ ಹಾಕಿದ್ದು, ‘ಏನು ಬೇಕಾದರೂ ಆಗಲಿ ಶರಣಾಗುವುದಿಲ್ಲ’ ಎಂದು ಘೋಷಿಸಿದೆ. ನಗರ ರಕ್ಷಣೆಗೆ ಅಂತಿಮ ಹಂತದ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಉಕ್ರೇನ್ ರಾಜಧಾನಿ ಕೀವ್​ ನಗರದ ಮೇಲೆಯೂ ರಷ್ಯಾ ಹೊಸ ಜಿದ್ದಿನಿಂದ ದಾಳಿ ಸಂಘಟಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿದ್ದು, ಉಕ್ರೇನ್ ಸಹ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಈ ನಡುವೆ ಹೊಸ ವಿಡಿಯೊ ಸಂದೇಶದ ಮೂಲಕ ಜಗತ್ತನ್ನು ಎಚ್ಚರಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ, ‘ರಷ್ಯಾದಿಂದ ಅಣ್ವಸ್ತ್ರ ದಾಳಿ ಭೀತಿಯಿದೆ. ವಿಕಿರಣದ ಪ್ರಭಾವ ತಗ್ಗಿಸುವ ಔಷಧಿಗಳನ್ನು ಒದಗಿಸಿ’ ಎಂದು ಮೊರೆಯಿಟ್ಟಿದ್ದಾರೆ. ನಿರ್ಣಾಯಕ ಹಂತಕ್ಕೆ ಬಂದಿರುವ ರಷ್ಯಾ-ಉಕ್ರೇನ್ ಸಂಘರ್ಷದ ಇತ್ತೀಚಿನ 10 ಪ್ರಮುಖ ಬೆಳವಣಿಗೆಗಳು ಇದು.

  1. ಶರಣಾಗುವ ಪ್ರಶ್ನೆಯೇ ಇಲ್ಲ: ಉಕ್ರೇನ್​ನ ಮರಿಯುಪೋಲ್​ನಲ್ಲಿರುವ ಭದ್ರತಾ ಪಡೆಗಳಿಗೆ ಶರಣಾಗುವಂತೆ ರಷ್ಯಾ ನೀಡಿದ್ದ ಗಡುವು ಅಂತ್ಯಗೊಂಡಿದೆ. ಕೊನೆಯ ಹಂತದ ತೀವ್ರ ದಾಳಿ ನಡೆಸಿ, ನಗರವನ್ನು ವಶಕ್ಕೆ ಪಡೆದುಕೊಳ್ಳಲು ರಷ್ಯಾ ಸೇನೆ ಸಿದ್ಧವಾಗಿದೆ. ‘ಮರಿಯುಪೋಲ್​ನಲ್ಲಿರುವ ಉಕ್ರೇನ್​ ಸೇನೆಯ ಕೊನೆಯ ಸೈನಿಕ ಕೊನೆಯ ಗುಂಡು ಇರುವವರೆಗೂ ಹೋರಾಡುತ್ತಾನೆ. ಶರಣಾಗುವ ಮಾತೇ ಇಲ್ಲ’ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಘೋಷಿಸಿದ್ದಾರೆ.
  2. ಮುರಿದು ಬಿದ್ದ ಮಾತುಕತೆ: ಒಂದು ವೇಳೆ ಮರಿಯುಪೋಲ್​ನಲ್ಲಿರುವ ಉಕ್ರೇನ್​ನ ಎಲ್ಲ ಸೈನಿಕರನ್ನೂ ರಷ್ಯಾ ಹತ್ಯೆ ಮಾಡಿದರೆ, ಶಾಂತಿ ಮಾತುಕತೆ ಮುರಿದು ಬೀಳುತ್ತದೆ ಎಂದು ಝೆಲೆನ್​ಸ್ಕಿ ಎಚ್ಚರಿಸಿದ್ದಾರೆ. ಆದರೆ ಈ ಮೊದಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ‘ಉಕ್ರೇನ್​ನೊಂದಿಗಿನ ಶಾಂತಿ ಮಾತುಕತೆಗೆ ಅರ್ಥವಿಲ್ಲ’ ಎಂದು ಹೇಳಿದ್ದರು.
  3. ಸೋಲೊಪ್ಪದ ಉಕ್ರೇನ್: ರಷ್ಯಾ ಸೇನೆಯು ಉಕ್ರೇನ್​ನ ಬಹುತೇಕ ಪ್ರಮುಖ ನಗರಗಳಿಗೆ ದಿಗ್ಬಂಧನ ವಿಧಿಸಿದೆ. ಆದರೆ ಖೆರ್​ಸೊನ್ ಸೇರಿದಂತೆ ಯಾವುದೇ ನಗರವನ್ನು ಉಕ್ರೇನ್ ಆಡಳಿತ ರಷ್ಯಾಕ್ಕೆ ಬಿಟ್ಟುಕೊಟ್ಟಿಲ್ಲ. ಬದಲಿಗೆ ಈ ಮೊದಲು ರಷ್ಯಾ ಸೇನೆ ವಶಪಡಿಸಿಕೊಂಡಿದ್ದ 900ಕ್ಕೂ ಹೆಚ್ಚು ನಗರ-ಪಟ್ಟಣಗಳನ್ನು ಉಕ್ರೇನ್ ಸೇನೆ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿದೆ.
  4. ಜನವಸತಿ ಮೇಲೆ ದಾಳಿ: ಉಕ್ರೇನ್​ನ ಪೂರ್ವ ಗಡಿಯ ನಗರ-ಪಟ್ಟಣಗಳ ಜನವಸತಿಯನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ರಷ್ಯಾ ಮುಂದುವರಿಸಿದೆ. ಖಾರ್ಕಿವ್ ನಗರದ ಮೇಲೆ ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಐವರು ನಾಗರಿಕರು ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ರಷ್ಯಾ ಗಡಿಯಿಂದ ಕೇವಲ 21 ಕಿಮೀ ದೂರದಲ್ಲಿದೆ.
  5. ಅಪಾಯದಲ್ಲಿ 1 ಲಕ್ಷ ಜನರು: ಮರಿಯುಪೋಲ್​ ನಗರದಲ್ಲಿ ಇಂದಿಗೂ ಒಂದು ಲಕ್ಷಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ಆಹಾರ, ನೀರು ಮತ್ತು ವಿದ್ಯುತ್ ಕೊರತೆಯಿಂದ ಅವರೆಲ್ಲರ ಜೀವ ಅಪಾಯದಲ್ಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
  6. ಕದನ ವಿರಾಮಕ್ಕೆ ಪೋಪ್ ಕರೆ: ಈಸ್ಟರ್ ಹಬ್ಬದ ಸಂದರ್ಭದಲ್ಲಿ ಕದನವಿರಾಮ ಘೋಷಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದರು. ‘ಯುದ್ಧದಿಂದ ಅನಾಥರಾದ ಮಕ್ಕಳ ಮುಖ ನನ್ನನ್ನು ಕಾಡುತ್ತಿದೆ’ ಎಂದು ಪೋಪ್ ಭಾವುಕ ಸಂದೇಶ ನೀಡಿದ್ದರು. ಆದರೆ ಎರಡೂ ದೇಶಗಳು ಕದನ ವಿರಾಮದ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
  7. ಊಹಿಸದ ರೀತಿಯಲ್ಲಿ ಕಾಡುತ್ತೇವೆ: ಉಕ್ರೇನ್​ಗೆ ಯುದ್ಧೋಪಕರಣ ರವಾನೆ ಮತ್ತು ಇತರ ರೀತಿಯಲ್ಲಿ ನೆರವಾಗುವುದು ಮುಂದುವರಿಸಿದರೆ ನೀವು ಊಹೆ ಮಾಡದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಇತರ ದೇಶಗಳು ಒದಗಿಸಿದ್ದ ಯುದ್ಧೋಪಕರಣಗಳಿದ್ದ ವಿಮಾನವನ್ನು ಹೊಡೆದುರುಳಿಸಿದ್ದಾಗಿ ರಷ್ಯಾ ಹೇಳಿಕೊಂಡಿದೆ.
  8. ರಷ್ಯಾದತ್ತ ಬ್ರಿಟನ್ ನೌಕಾಪಡೆ: ಉಕ್ರೇನ್ ಯುದ್ಧ ಪ್ರಯತ್ನಗಳಿಗೆ ಒತ್ತಾಸೆಯಾಗಿರುವ ಬ್ರಿಟನ್​ನ ನಡೆ ಖಂಡಿಸಿ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ವಿರುದ್ಧ ಪುಟಿನ್ ಹರಿಹಾಯ್ದಿದ್ದರು. ಈ ಬೆಳವಣಿಗೆಯ ಬೆನ್ನಿಗೇ ಬ್ರಿಟನ್ ತನ್ನ ಅಣುಶಕ್ತಿ ಚಾಲಿತ, ಅಣ್ವಸ್ತ್ರ ಸಜ್ಜಿತ ಶಕ್ತಿಶಾಲಿ ಜಲಾಂತರ್ಗಾಮಿ ನೌಕೆಯನ್ನು ರಷ್ಯಾದತ್ತ ಕಳುಹಿಸಲು ಚಿಂತನೆ ನಡೆಸಿದೆ.
  9. ಎಚ್​ಎಂಎಸ್ ಅಡಾಷಿಯಸ್: ವಿಶ್ವದ ಅತ್ಯಂತ ಪ್ರಬಲ ಮತ್ತು ಮಾರಕ ಹಂಟರ್-ಕಿಲ್ಲರ್ ಸಬ್​ಮರೀನ್ ಎಂದೇ ಬ್ರಿಟನ್​ನ ಎಚ್​ಎಂಎಸ್​ ಅಡಾಷಿಯಸ್​ ಅನ್ನು ಗುರುತಿಸಲಾಗುತ್ತದೆ. 3ನೇ ವಿಶ್ವಯುದ್ಧ ನಡೆಯಬಹುದು, ರಷ್ಯಾ ಅಣ್ವಸ್ತ್ರ ಬಳಸಬಹುದು ಎಂಬ ಆತಂಕಗಳ ಬೆನ್ನಿಗೇ ಬ್ರಿಟನ್​ನ ಈ ನಡೆಯು ಹಲವು ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
  10. ರಷ್ಯಾದಿಂದ ಅಣ್ವಸ್ತ್ರ ಸಜ್ಜಿತ ಸಬ್​ಮರೀನ್ ರವಾನೆ: ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಲೆಂದು ರಷ್ಯಾ ಸಹ ತನ್ನ ಅಣಸ್ತ್ರ ಸಜ್ಜಿತ ಸಬ್​ಮರೀನ್​ಗಳನ್ನು ಕಳೆದ ತಿಂಗಳೇ ಉತ್ತರ ಅಟ್ಲಾಂಟಿಕ್ ಸಾಗರಕ್ಕೆ ರವಾನಿಸಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಸಬ್​ಮರೀನ್​ಗಳಲ್ಲಿ 16 ಖಂಡಾಂತರ ಕ್ಷಿಪಣಿಗಳಿದ್ದು, ಒಂದು ಇಡೀ ನಗರ ಅಥವಾ ಪಟ್ಟಣವನ್ನು, ನಿರ್ದಿಷ್ಟ ಭೂ ಪ್ರದೇಶವನ್ನು ಹಾಳುಗೆಡವುವ ಸಾಮರ್ಥ್ಯ ಈ ಸಬ್​ಮರೀನ್​ಗಳಲ್ಲಿರುವ ಕ್ಷಿಪಣಿಗಳಿಗೆ ಇವೆ.

ಇದನ್ನೂ ಓದಿ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ

ಇದನ್ನೂ ಓದಿ: ಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ

Published On - 9:01 am, Mon, 18 April 22