ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾ ರೂಪಾಂತರಿ ಪತ್ತೆ; ವಿಶ್ವಸಂಸ್ಥೆ ಎಚ್ಚರಿಕೆಯ ಬೆನ್ನಲ್ಲೇ ನೂತನ ನಿರ್ಧಾರ ಪ್ರಕಟಿಸಿದ ಯುಕೆ

| Updated By: shivaprasad.hs

Updated on: Nov 26, 2021 | 9:07 AM

New South Africa Covid variant: ಆಫ್ರಿಕಾದಲ್ಲಿ ನೂತನ ಕೊರೊನಾ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ, ಬ್ರಿಟನ್ ಆಫ್ರಿಕಾದ ಆರು ರಾಷ್ಟ್ರಗಳಿಗೆ ವಿಮಾನ ಪ್ರಯಾಣ ನಿರ್ಬಂಧಿಸಿದೆ. ವಿಶ್ವಸಂಸ್ಥೆಯ ಎಚ್ಚರಿಕೆಯ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾ ರೂಪಾಂತರಿ ಪತ್ತೆ; ವಿಶ್ವಸಂಸ್ಥೆ ಎಚ್ಚರಿಕೆಯ ಬೆನ್ನಲ್ಲೇ ನೂತನ ನಿರ್ಧಾರ ಪ್ರಕಟಿಸಿದ ಯುಕೆ
ಪ್ರಾತಿನಿಧಿಕ ಚಿತ್ರ
Follow us on

ಬ್ರಿಟನ್: ದಕ್ಷಿಣ ಆಫ್ರಿಕಾದಲ್ಲಿ (South Africa) ರೂಪಾಂತರಿ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಯುಕೆಯಿಂದ (UK) 6 ಆಫ್ರಿಕನ್ ರಾಷ್ಟ್ರಗಳಿಗೆ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಯುನೈಟೆಡ್ ಕಿಂಗ್‌ಡಮ್​ನ ಆರೋಗ್ಯ ಮತ್ತು ಸಾಮಾಜಿಕ ಕಾಳಜಿಯ ರಾಜ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ (Sajid Javid) ಘೋಷಣೆ ಮಾಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಹೊಸ ರೂಪಾಂತರದ ಕುರಿತು ವರದಿ ನೀಡಿದ ಕೆಲವೇ ಗಂಟೆಗಳ ನಂತರ ಯುಕೆಯ ಈ ಆದೇಶ ಹೊರಬಿದ್ದಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾದ ಭಿನ್ನ ರೂಪಾಂತರಿ ತಳಿಯನ್ನು ಅಧ್ಯಯನ ಮಾಡಲು ಸಂಸ್ಥೆಯು ಇಂದು (ಶುಕ್ರವಾರ) ವಿಶೇಷ ಸಭೆ ಕರೆದಿದೆ. ಆಫ್ರಿಕಾ ಪ್ರಯಾಣಕ್ಕೆ ಹೊಸ ನಿಯಮಾವಳಿ ಹೇರಿರುವ ಕುರಿತು ಮತ್ತಷ್ಟು ಮಾಹಿತಿ ನೀಡಿರುವ ಜಾವಿದ್ ಇದು ಮುನ್ನೆಚ್ಚರಿಕಾ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ‘‘ಹೊಸ ರೂಪಾಂತರಿಯ ಕುರಿತು ಹೆಚ್ಚಿನ ಡೇಟಾ ಅಗತ್ಯವಿದೆ. ಆದರೆ ನಾವು ಈಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾಳೆ ಮಧ್ಯಾಹ್ನದಿಂದ ಆರು ಆಫ್ರಿಕನ್ ದೇಶಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗುವುದು, ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು ಮತ್ತು ಯುಕೆ ಪ್ರಯಾಣಿಕರು ಕ್ವಾರಂಟೈನ್ ಮಾಡಬೇಕು ”ಎಂದು ಜಾವಿದ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ದಕ್ಷಿಣ ಆಫ್ರಿಕಾದ ಜೊತೆಗೆ, ನಮೀಬಿಯಾ, ಲೆಸೊಥೊ, ಎಸ್ವಾಟಿನಿ, ಜಿಂಬಾಬ್ವೆ ಮತ್ತು ಬೋಟ್ಸ್ವಾನಾ ದೇಶಗಳನ್ನು ಹೊಸ ನಿರ್ಬಂಧಗಳಲ್ಲಿ ಸೇರಿಸಲಾಗಿದೆ ಎಂದು ಯುಕೆ ಆರೋಗ್ಯ, ಸಾರಿಗೆ ಮತ್ತು ಆರೋಗ್ಯ ಭದ್ರತಾ ಏಜೆನ್ಸಿಗಳು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹೊಸ ರೂಪಾಂತರಕ್ಕೆ ಲಸಿಕೆಗಳು ಮತ್ತು ಚಿಕಿತ್ಸೆಗಳೇನು ಎಂಬುದನ್ನು ಚರ್ಚಿಸಲು WHO ಇಂದು (ಶುಕ್ರವಾರ) ವಿಶೇಷ ಸಭೆಯನ್ನು ನಡೆಸಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಸಾಜಿದ್ ಜಾವಿದ್ ಟ್ವೀಟ್ ಇಲ್ಲಿದೆ:

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, B.1.1.529 ಎಂದು ಕರೆಯಲ್ಪಡುವ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗಿದೆ. ದೇಶದ ಅತಿದೊಡ್ಡ ನಗರವಾದ ಜೋಹಾನ್ಸ್‌ಬರ್ಗ್​ನ ಗೌಟೆಂಗ್ ಪ್ರಾಂತ್ಯದ ಮೂಲಕ ರೂಪಾಂತರವು ವೇಗವಾಗಿ ಹರಡಿದೆ. ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್‌ನಲ್ಲಿ ಈ ರೂಪಾಂತರವನ್ನು ಪತ್ತೆ ಮಾಡಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಎನ್​ಐ ಹಂಚಿಕೊಂಡ ಮಾಹಿತಿ:

ಆಫ್ರಿಕಾದಲ್ಲಿ ಕಂಡುಬಂದಿರುವ ರೂಪಾಂತರಿಯ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಭಾರತ ಸೇರಿದಂತೆ ಎಲ್ಲಾ ದೇಶಗಳು ಮುನ್ನೆಚ್ಚರಿಕೆ ಕೈಗೊಳ್ಳುತ್ತಿವೆ.

ಇದನ್ನೂ ಓದಿ:

Prof KS Narayanacharya death: ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ

Earthquake: ಭಾರತ- ಮ್ಯಾನ್ಮಾರ್ ಗಡಿಯಲ್ಲಿ 6 ತೀವ್ರತೆಯ ಭೂಕಂಪ; ಕೋಲ್ಕತ್ತಾ, ಗುವಾಹಟಿಯಲ್ಲೂ ಕಂಪನದ ಅನುಭವ