ಕುಟುಂಬದ ಊಟ-ತಿಂಡಿಗೆ ಪಡೆದ ಭತ್ಯೆಯನ್ನು ವಾಪಸ್ ನೀಡುವುದಾಗಿ ಹೇಳಿದ ಫಿನ್ಲೆಂಡ್ ಫ್ರಧಾನಿ ಸಾನಾ ಮ್ಯಾರಿನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 02, 2021 | 10:50 PM

ಸುಮಾರು ಒಂದು ವಾರದ ಹಿಂದೆ ಸ್ಥಳೀಯ ಪತ್ರಿಕೆಯೊಂದು ಕೆಸರಾಂಟದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಕುಟುಂಬದ ಬೆಳಗಿನ ಉಪಹಾರಕ್ಕಾಗಿ ಪ್ರತಿ ತಿಂಗಳು ಸುಮಾರು 28,000 ಸಾವಿರ ರೂಪಾಯಿಗಳನ್ನು (300 ಯುರೋ) ಪಡೆಯುತ್ತಿದ್ದಾರೆಂದು ವರದಿ ಮಾಡಿದ ನಂತರ ಪ್ರಧಾನಿಗಳಿಗೆ ಇರುಸು ಮುರಿಸಿನ ಸ್ಥಿತಿ ಎದುರಾಯಿತು.

ಕುಟುಂಬದ ಊಟ-ತಿಂಡಿಗೆ ಪಡೆದ ಭತ್ಯೆಯನ್ನು ವಾಪಸ್ ನೀಡುವುದಾಗಿ ಹೇಳಿದ ಫಿನ್ಲೆಂಡ್ ಫ್ರಧಾನಿ ಸಾನಾ ಮ್ಯಾರಿನ್
ಸಾನಾ ಮ್ಯಾರಿನ್
Follow us on

ಫಿನ್ಲೆಂಡ್​ನಲ್ಲಿ ಅಪರೂಪದ ಸಂಗತಿಯೊಂದು ಜರುಗಿದ್ದು ಆ ದೇಶದ ಪ್ರಧಾನ ಮಂತ್ರಿಯವರು ತಮ್ಮ ಮತ್ತು ಕುಟುಂಬ ಬೆಳಗಿನ ತಿಂಡಿ ಸಲುವಾಗಿ ಬಳಸಿಕೊಂಡ ಊಟದ ಭತ್ಯೆಯನ್ನು ಸರ್ಕಾರಕ್ಕೆ ಹಿಂತಿರುಗಿಸುವುದಾಗಿ ಹೇಳಿದ್ದಾರೆ. 35 ವರ್ಷ ವಯಸ್ಸಿನ ಪ್ರಧಾನಿ ಸಾನಾ ಮ್ಯಾರಿನ್ ಅವರು ಇನ್ನು ಮುಂದೆ ಊಟದ ಭತ್ಯೆಯನ್ನು ಪಡಯುವುದಿಲ್ಲ ಅಂತ ಭರವಸೆ ನೀಡಿದ್ದು ಇದುವರೆಗೆ ವಾರಾಂತ್ಯದ ಊಟ ತಿಂಡಿಗಳಿಗೆ ಆಕೆ ಸರ್ಕಾರದಿಂದ ಪಡೆದುಕೊಂಡ 14,000 ಯೂರೋಗಳನ್ನು (ಸುಮಾರು 12.5 ಲಕ್ಷ ರೂಪಾಯಿಗಳು) ಬೊಕ್ಕಸಕ್ಕೆ ವಾಪಸ್ಸು ಮಾಡುವುದಾಗಿ ಮಂಗಳವಾರದಂದು ಹೇಳಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದ ನಂತರ ಊಟ ಮತ್ತು ತಿಂಡಿಗಳ ಭತ್ಯೆ ರೂಪದಲ್ಲಿ ಪಡೆದಿರುವ ಹಣವನ್ನು ಹಿಂತಿರುಗಿಸುವುದಾಗಿ ಮ್ಯಾರಿನ್ ಹೇಳಿದ್ದಾರೆ

‘ಊಟದ ಭತ್ಯೆ ಕುರಿತು ಬಹಿರಂಗ ಪ್ರಶ್ನೆಗಳು ಎದ್ದಿವೆ, ಈ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಹಣವನ್ನು ನಾನೇ ಭರಿಸುವೆ,’ ಎಂದು ಶನಿವಾರದಂದು ಟ್ವೀಟ್​ ಮೂಲಕ ಹೇಳಿದ್ದ ಮ್ಯಾರಿನ್ ಅವರು, ಸದರಿ ವಿಷಯವನ್ನು ಪರಾಮರ್ಶಿಸಿ ಅಗತ್ಯ ಬಿದ್ದರೆ ಮಾರ್ಗದರ್ಶನವನ್ನು ಅಪಡೇಟ್​ ಮಾಡುವ ಭರವಸೆ ನೀಡಿದ್ದಾರೆ.

‘ಊಟದ ಭತ್ಯೆಯನ್ನು ಪಡೆಯುವುದು ನಿಯಮಬದ್ಧವಾಗಿದೆ ಅಂತ ಕಾನೂನು ಹೇಳಿದರೂ, ಮುಂಬರುವ ದಿನಗಳಲ್ಲಿ ಅದನ್ನು ಬಳಸುವುದಿಲ್ಲ,’ ಎಂದು ಶನಿವಾರದಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮ್ಯಾರಿನ್ ಹೇಳಿದ್ದರು.

ಮ್ಯಾರಿನ್ ಅವರು ಕೂಡಲೇ ಅಧಿಕಾರಿಗಳನ್ನು ಕರೆದು ಊಟದ ಭತ್ಯೆಯನ್ನು ಪಡೆಯುವುದು ಕಾನೂನಾತ್ಮಕವೇ ಮತ್ತು ತಾನು ಹಿಂತಿರುಗಿಸುವ ಹಣಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆಯೇ ಎಂದು ಕೇಳಿ,ನನ್ನ ಕುಟುಂಬದ ಊಟದ ವಿಷಯ ಬಿಟ್ಟು ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ, ಅವುಗಳ ಕಡೆ ನಾನು ಗಮನಹರಿಸಬೇಕಿದೆ,’ ಎಂದು ಹೇಳಿದ್ದಾರೆ.

ಸುಮಾರು ಒಂದು ವಾರದ ಹಿಂದೆ ಸ್ಥಳೀಯ ಪತ್ರಿಕೆಯೊಂದು ಕೆಸರಾಂಟದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಕುಟುಂಬದ ಬೆಳಗಿನ ಉಪಹಾರಕ್ಕಾಗಿ ಪ್ರತಿ ತಿಂಗಳು ಸುಮಾರು 28,000 ಸಾವಿರ ರೂಪಾಯಿಗಳನ್ನು (300 ಯುರೋ) ಪಡೆಯುತ್ತಿದ್ದಾರೆಂದು ವರದಿ ಮಾಡಿದ ನಂತರ ಪ್ರಧಾನಿಗಳಿಗೆ ಇರುಸು ಮುರಿಸಿನ ಸ್ಥಿತಿ ಎದುರಾಯಿತು.

ವರದಿಯ ನಂತರ ಪೋಲಿಸ್ ಮತ್ತು ತೆರಿಗೆ ಅಧಿಕಾರಿಗಳು ಉಪಹಾರಗಳಿಗೆ ಹಣ ಸಂದಾಯವಾಗಿರುವ ಮೂಲವನ್ನು ಪರಿಶೀಲಿಸಿದಾಗ ಪ್ರತಿವಾರ ಮ್ಯಾರಿನ್ ಅವರು ಸುಮಾರು ರೂಪಾಯಿ 75,000 ಹಣ ಕ್ಲೇಮ್​ ಮಾಡಿರುವುದು ಪತ್ತೆಯಾಗಿದೆ.

‘ಒಬ್ಬ ಪ್ರಧಾನ ಮಂತ್ರಿಯಾಗಿ ನಾನು ಈ ಪ್ರಯೋಜನವನ್ನು ಕೇಳಿರಲಿಲ್ಲ ಅಥವಾ ತಿಂಡಿಯನ್ನು ಒದಗಿಸಲು ತೆಗೆದುಕೊಂಡ ನಿರ್ಣಯದಲ್ಲಿ ನಾನು ಭಾಗಿಯಲ್ಲ,’ ಎಂದು ಮ್ಯಾರಿನ್ ಟ್ವೀಟ್​ ಮಾಡಿದ್ದಾರೆ

ಎರಡು ವಾರಗಳ ನಂತರ ನಡೆಯಲಿರುವ ಸ್ಥಳೀಯ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಈ ವಿಷಯವನ್ನು ಬಳಸಿಕೊಂಡು ಮ್ಯಾರಿನ್ ಅವರ ಪಕ್ಷಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಫಿನ್ಲೆಂಡ್​ನಲ್ಲಿ ಅಸಮಾನತೆಯ ಭಾವ ಹೆಚ್ಚು ಕಡಿಮೆ ಅಳಿದುಹೋಗುತ್ತಿದ್ದು ಅದು ಅಲ್ಲಿನ ಜನರ ರಾಷ್ಟ್ರೀಯ ಹೆಮ್ಮೆಯೆನಿಸಿದೆ. ಆ ದೇಶದಲ್ಲಿ ಸಾಮಾನ್ಯ ಜನರಂತೆ ಜೀವಿಸುವ ನಾಯಕರಿಗೆ ಮಾತ್ರ ಮನ್ನಣೆಯಿದೆ.

ಆದರೆ, ಮ್ಯಾರಿನ್ ನೇತೃತ್ವದ ಸೆಂಟರ್-ಲೆಫ್ಟ್ ಸಮ್ಮಿಶ್ರ ಸರ್ಕಾರ ಸದಸ್ಯರು ಪ್ರಧಾನ ಮಂತ್ರಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅವರಲ್ಲಿ ಮ್ಯಾರಿನ್​ಗಿಂತ ಮೊದಲು ಪ್ರಧಾನ ಮಂತ್ರಿಯಾಗಿದ್ದ ಌಂಟಿ ರಿನ್ನೆ ಅವರೂ ಸೇರಿದ್ದಾರೆ.

ಫಿನ್ಲೆಂಡ್​ ಸೋಶಿಯಲ್ ಡೆಮೊಕ್ರಾಟ್ಸ್ ಪಕ್ಷದ ನಾಯಕಿಯಾಗಿರುವ ಮ್ಯಾರಿನ್ ಅವರು ಡಿಸೆಂಬರ್​ 2019 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕರಿಂದ ಭಾರಿ ಬೆಂಬಲ ಪಡೆದುಕೊಂಡಿದ್ದಾರೆ. ಅವರ ಸಮ್ಮಿಶ್ರ ಸರ್ಕಾರವು ದೇಶದಲ್ಲಿ ಕೊರೋನಾ ವೈರಸ್ ಉಪಟಳವನ್ನು ಅತ್ಯುತ್ತಮವಾಗಿ ನಿಯಂತ್ರಿಸಿದೆ.

ಅಷ್ಟಾಗಿಯೂ ಮುಂಬರಲಿರುವ ಚುನಾವಣೆಗಳಲ್ಲಿ ವಿರೋಧ ಪಕ್ಷಗಳ ಎದುರು ಮ್ಯಾರಿನ್ ಪಕ್ಷ ದುರ್ಬಲ ಎನಿಸುತ್ತಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಜೂನ್ 13ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿರೋಧ ಪಕ್ಷವಾಗಿರುವ ಫಿನ್ಸ್ ಪಕ್ಷ ಜಯಭೇರಿ ಬಾರಿಸಲಿದೆಯೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಡೊನಾಲ್ಟ್ ಟ್ರಂಪ್ ಸರ್ಕಾರದಲ್ಲಿ ಅನುಭವಿಸಿದ ನೋವು ತೋಡಿಕೊಂಡ ಅಮೆರಿಕದ ಆಂತೋನಿ ಫೌಚಿ