ಇಸ್ರೇಲ್​ನಲ್ಲಿ ಫೈಜರ್ ಕೊವಿಡ್​ ಲಸಿಕೆ ಹಾಕಿಸಿಕೊಂಡ ಕೆಲ ಯುವಕರಲ್ಲಿ ಹೃದಯದ ಸಮಸ್ಯೆ, ಹೆಚ್ಚು ಯೋಚಿಸುವ ಅಗತ್ಯವಿಲ್ಲ ಎಂದ ಔಷಧ ತಯಾರಿಕಾ ಸಂಸ್ಥೆ

ಇಸ್ರೇಲ್​ನಲ್ಲಿ ಫೈಜರ್ ಕೊವಿಡ್​ ಲಸಿಕೆ ಹಾಕಿಸಿಕೊಂಡ ಕೆಲ ಯುವಕರಲ್ಲಿ ಹೃದಯದ ಸಮಸ್ಯೆ, ಹೆಚ್ಚು ಯೋಚಿಸುವ ಅಗತ್ಯವಿಲ್ಲ ಎಂದ ಔಷಧ ತಯಾರಿಕಾ ಸಂಸ್ಥೆ
ಫೈಜರ್ ಕೊವಿಡ್​ ಲಸಿಕೆ

ಹೃದಯ ಉರಿ ಬಗ್ಗೆ ದೂರಿದ ಬಹಳಷ್ಟು ರೋಗಿಗಳು ನಾಲ್ಕು ದಿನಗಳಿಗಿಂತ ಹೆಚ್ಚು ಆಸ್ಪತ್ರೆಯಲ್ಲಿರಲಿಲ್ಲ ಮತ್ತು ಶೇಕಡಾ 95ರಷ್ಟು ಪ್ರಕರಣಗಳು ಮೈಲ್ಡ್ ಆಗಿದ್ದವು ಎಂದು ಪರಿಶೀಲನೆ ನಡೆಸಿದ ತಜ್ಞರ ಸಮಿತಿಗಳು ಹೇಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 02, 2021 | 5:47 PM

ಫೈಜರ್ ಸಂಸ್ಥೆಯ ಕೊವಿಡ್ ಲಸಿಕೆ ತೆಗೆದುಕೊಂಡ ಇಸ್ರೇಲಿನ ಕೆಲ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಹೃದಯದ ಉರಿತ ಕಂಡುಬಂದಿದ್ದು ಲಸಿಕೆ ಮತ್ತು ಉರಿತದ ನಡುವೆ ಸಂಬಂಧ ಇರುವ ಸಾಧ್ಯತೆಯಿದೆ ಎಂದು ಮಂಗಳವಾರದಂದು ಇಸ್ರೇಲಿನ ಆರೋಗ್ಯ ಇಲಾಖೆ ಹೇಳಿದೆ. ಮಯೋಕಾರ್ಡೈಟಿಸ್ ಎಂದು ಕರೆಯಲಾಗುವ ಈ ಸ್ಥಿತಿ ಬಹಷ್ಟು ಜನರಲ್ಲೇನೂ ಕಂಡುಬಂದಿಲ್ಲ,ಲಸಿಕೆ ತೆಗೆದುಕೊಂಡ ನಂತರ ಕೆಲ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ ಎಂದು ಫೈಜರ್​ ಸಂಸ್ಥೆ ಹೇಳಿದೆ.

ಡಿಸೆಂಬರ್ 2020 ರಿಂದ ಮೇ 2021ರವರೆಗೆ ಮಯೋಕಾರ್ಡೈಟಿಸ್​ನ 275 ಪ್ರಕರಣಗಳು ಇಸ್ರೇಲಿನಲ್ಲಿ ವರದಿಯಾಗಿವೆ ಎಂದು ಹೇಳಿರುವ ಇಸ್ರೇಲ್ ಆರೋಗ್ಯ ಇಲಾಖೆಯು, ಸದರಿ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಾನು ರಚಿಸಿದ ತಜ್ಞರ ಮೂರು ಸಮಿತಿಗಳು ಈಗಾಗಲೇ ವರದಿಯನ್ನು ಸಲ್ಲಿಸಿದ್ದು ಅದರಲ್ಲಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸುತ್ತಾ ಹೇಳಿದೆ.

ಹೃದಯ ಉರಿ ಬಗ್ಗೆ ದೂರಿದ ಬಹಳಷ್ಟು ರೋಗಿಗಳು ನಾಲ್ಕು ದಿನಗಳಿಗಿಂತ ಹೆಚ್ಚು ಆಸ್ಪತ್ರೆಯಲ್ಲಿರಲಿಲ್ಲ ಮತ್ತು ಶೇಕಡಾ 95ರಷ್ಟು ಪ್ರಕರಣಗಳು ಮೈಲ್ಡ್ ಆಗಿದ್ದವು ಎಂದು ಪರಿಶೀಲನೆ ನಡೆಸಿದ ತಜ್ಞರ ಸಮಿತಿಗಳು ಹೇಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಜ್ಞರು ನಡೆಸಿರುವ ಸಂಶೋಧನೆ ಪ್ರಕಾರ, 16ರಿಂದ 30 ವರ್ಷ ವಯೋಮಾನದ ಯುವಕರಲ್ಲಿ ಮಯೋಕಾರ್ಡೈಟಿಸ್ ಕಾಣಿಸಿಕೊಳ್ಳುವ ಮತ್ತು ಫೈಜರ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳುವ ನಡುವೆ ಸಂಬಂಧ ಇರುವ ಸಾಧ್ಯತೆಯಿದೆ, ಎಂದು ಇಲಾಖೆ ತಿಳಿಸಿದೆ. ಈ ಸಮಸ್ಯೆಯು 16-19 ವಯೋಮಾನದವರಲ್ಲಿ ಜಾಸ್ತಿ ಕಾಣಿಸಿಕೊಂಡಿರುವುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಇಸ್ರೇಲ್ ಆರೋಗ್ಯ ಇಲಾಖೆಯ ಹೇಳಿಕೆಯನ್ನು ತಾನು ಗಮನಿಸಿರುವುದಾಗಿ ಹೇಳಿರುವ ಫೈಜರ್ ಸಂಸ್ಥೆಯು, ಅದು ಹೇಳಿರುವ ಸಮಸ್ಯೆ ಮತ್ತು ಲಸಿಕೆ ಎರಡನೇ ಡೋಸ್ ನಡುವೆ ಅಂಥದ್ದೇನೂ ಕಂಡುಬಂದಿಲ್ಲ ಅಂತ ಪ್ರತಿಕ್ರಿಯಿಸಿದೆ.

ಲಸಿಕೆ ಅಡ್ಡ ಪರಿಣಾಮಗಳನ್ನು ಅಮೂಲಾಗ್ರವಾಗಿ ಪರಿಶೀಲನೆ ನಡೆಸಲಾಗಿದೆ ಮತ್ತು ಪೈಜರ್ ಸಂಸ್ಥೆಯ ವಿಜ್ಞಾನಿಗಳು ಇಸ್ರೇಲ್ ಆರೋಗ್ಯ ಇಲಾಖೆಯ ಲಸಿಕಾ ಸುರಕ್ಷತಾ ವಿಭಾಗದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಲಸಿಕೆ ತಯಾರಿಸುವ ಕಂಪನಿ ಹೇಳಿದೆ.

ಅಮೇರಿಕಾದ ರೋಗ ನಿಯಂತ್ರಣ ಮತ್ತು ತಡೆ (ಸಿಡಿಸಿ) ಕೇಂದ್ರದ ಸಲಹಾ ವಿಭಾಗವು ಮಯೋಕಾರ್ಡೈಟಿಸ್ ಮತ್ತು ಫೈಜರ್ ಹಾಗೂ ಮೊಡರ್ನಾ ಇನ್​ಕಾರ್ಪೊರೇಶನ್ ಸೇರಿದಂತೆ ಇತರ ಕಂಪನಿಗಳು ಉತ್ಪಾದಿಸುವ ಎಮ್ಆರ್​ಎನ್​ಎ ಲಸಿಕೆಗಳ ನಡುವೆ ಲಿಂಕ್​ ಇದೆಯಾ ಎನ್ನುವುದನ್ನು ತಿಳಿಯಲು ಮತ್ತಷ್ಟು ಅಧ್ಯಯನ ನಡೆಸಬೇಕೆಂದು ಶಿಫಾರಸ್ಸು ಮಾಡಿದೆ.

ಸಿಡಿಸಿ ನಿರ್ವಹಣಾ ವ್ಯವಸ್ಥೆಯು ಮಯೋಕಾರ್ಡೈಟಿಸ್​ನ ಹೆಚ್ಚು ಪ್ರಕರಣಗಳನ್ನು ನೋಡಿಲ್ಲವಾದರೂ ಸಲಹಾ ವಿಭಾಗವು ಹೆಲ್ತ್​ಕೇರ್ ಕ್ಷೇತ್ರದಲ್ಲಿ ಕೆಲಸಮಾಡುವವರಿಗೆ ಲಸಿಕೆಯ ಗಂಭೀರ ಅಡ್ಡ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದೆ

ಇಸ್ರೇಲಿನಲ್ಲಿ 12-15 ವರ್ಷ ವಯೋಮಾನದವರಿಗೆ ಲಸಿಕೆ ನೀಡುವುದನ್ನು ಪ್ರಾರಂಭಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರದ ನಿರೀಕ್ಷೆಯಲ್ಲಿ ಜನ ಇದ್ದಾಗಲೇ, ಅರೋಗ್ಯ ಇಲಾಖೆಯ ಹೇಳಿಕೆಯಲ್ಲಿ ಅಂಥ ಶಿಫಾರಸ್ಸು ಕಾಣಿಸಿಲ್ಲ.

ಸದರಿ ವಿಷಯದ ಬಗ್ಗೆ ಒಂದು ಟೀಮ್ ಪರಿಶೀಲನೆ ನಡೆಸುತ್ತಿದೆ ಮತ್ತು ತನ್ನ ಶಿಫಾರಸ್ಸುಗಳನ್ನು ಇಲಾಖೆಯ ಮಹಾ-ನಿರ್ದೇಶಕರಿಗೆ ತಿಳಿಸಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆಯಾದರೂ ಅದಕ್ಕೆಂದು ಯಾವುದೇ ದಿನಾಂಕವನ್ನು ಅದು ನಿಗದಿಪಡಿಸಿಲ್ಲ.

12-15 ವಯೋಮಾನದ ಗುಂಪಿನವರನ್ನು ಲಸಿಕಾ ಕಾರ್ಯಕ್ರಮಲ್ಲಿ ಭಾಗಿ ಮಾಡಬೇಕೇ ಅಥವಾ ಇಲ್ಲವೇ ಎಂಬ ಸರ್ಕಾರದ ನಿರ್ಧಾರ ರವಿವಾರದೊಳಗೆ ಗೊತ್ತಾಗಲಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಾಗೆ ಇಸ್ರೇಲ್ ವಿಶ್ವ ನಾಯಕನೆನಿಸಿಕೊಂಡಿದೆ. ಇಸ್ರೇಲ್​ನಲ್ಲಿ ಕೋವಿಡ್​-19 ಸೋಕು ಸಂಪೂರ್ಣ ಹತೋಟಿಗೆ ಬಂದಿದ್ದು ದೇಶದಾದ್ಯಂತ ಕೇವಲ 340 ಸಕ್ರಿಯ ಪ್ರಕರಣಗಳಿರುವುದರಿಂದ ಪ್ರವಾಸೋದ್ಯಮದ ಮೇಲಿರುವ ಕೆಲ ನಿರ್ಬಂಧನೆಗಳನ್ನು ಬಿಟ್ಟರೆ ಅಲ್ಲಿನ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ತೆರೆದುಕೊಂಡಿವೆ.

ಇಸ್ರೇಲ್​ ಜನಸಂಖ್ಯೆಯ ಶೇಕಡಾ 55 ರಷ್ಟು ಜನ ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾರೆ. ದೇಶದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ ಮತ್ತು ಕೆಲ ನಿರ್ದಿಷ್ಟ ಹೋಟೆಲ್ ಹಾಗೂ ರೆಸ್ಟುರಾಂಟ್​ಗಳನ್ನು ಪ್ರವೇಶಿಸಲು ಅಗತ್ಯವಿದ್ದ ಲಸಿಕೆಯ ವಿಶೇಷ ಹಸಿರು ಪಾಸುಗಳ ನಿಯಮವನ್ನು ರದ್ದು ಮಾಡಲಾಗಿದೆ.

(Youngsters in Israel complain myocarditis after taking Pfizer covid vaccine, company says its not big issue)

ಇದನ್ನೂ ಓದಿ: Vaccination Centres : ಮೈಸೂರಿನಲ್ಲಿ ಮುಂದುವರೆದ ವ್ಯಾಕ್ಸಿನ್​ಗಾಗಿ ಸಾಲು ಸಾಲು ಕ್ಯೂ.!

Follow us on

Most Read Stories

Click on your DTH Provider to Add TV9 Kannada