ವಾಷಿಂಗ್ಟನ್: ಇಲ್ಲಿಯವರೆಗೂ ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಅಲ್ಲಿನ ಪೌರತ್ವ ಸಿಗುತ್ತಿತ್ತು. ಆದರೆ, ಈ ಜನ್ಮಸಿದ್ಧ ಹಕ್ಕನ್ನು ರದ್ದುಪಡಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಟ್ರಂಪ್ ಅವರ ಈ ನಿರ್ಧಾರಕ್ಕೆ ಅಮೆರಿಕದ ಅನಿವಾಸಿ ಭಾರತೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಆದೇಶವು ಜಾರಿಯಾಗುವ ಮೊದಲು ಹೆರಿಗೆ ಮಾಡಿಸಿಕೊಳ್ಳಲು ಅಮೆರಿಕದಲ್ಲಿರುವ ಭಾರತೀಯ ದಂಪತಿಗಳು ಆತುರಪಡುತ್ತಿದ್ದಾರೆ. ಈಗಾಗಲೇ ಗರ್ಭಿಣಿಯಾಗಿರುವ ಅಮೆರಿಕದ ಭಾರತೀಯ ಮೂಲದ ಮಹಿಳೆಯರು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಲು ನಿರ್ಧರಿಸುತ್ತಿದ್ದಾರೆ.
ನಾರ್ಮಲ್ ಡೆಲಿವರಿ ಬದಲು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ದಂಪತಿಗಳು ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಆದೇಶ ಫೆಬ್ರವರಿ 19ರಿಂದ ಜಾರಿಗೆ ಬರಲಿದ್ದು, ಅದರ ನಂತರ ಜನಿಸಿದ ಮಕ್ಕಳಿಗೆ ಅಮೆರಿಕದ ಜನ್ಮಸಿದ್ಧ ಪೌರತ್ವ ಸಿಗುವುದಿಲ್ಲ. ಹೀಗಾಗಿ, ಫೆಬ್ರವರಿ 19ಕ್ಕೂ ರ ಮೊದಲು ತಮ್ಮ ಮಕ್ಕಳು ಪೌರತ್ವವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತುರ್ತಾಗಿ ಸಿ-ಸೆಕ್ಷನ್‌ಗಳನ್ನು ಅಲ್ಲಿನ ದಂಪತಿಗಳು ನಿಗದಿಪಡಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದನ್ನೂ ಓದಿ: ಅಮೆರಿಕದ ಅವನತಿ ಮುಗಿಯಿತು, ಸುವರ್ಣ ಯುಗ ಆರಂಭ; ಪ್ರಮಾಣವಚನದ ಬಳಿಕ ಡೊನಾಲ್ಡ್ ಟ್ರಂಪ್
ಟ್ರಂಪ್ ಅವರ ಅಧಿಕಾರ ಸ್ವೀಕಾರದ ಸ್ವಲ್ಪ ಸಮಯದ ನಂತರ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಫೆಬ್ರವರಿ 19ರ ನಂತರ ದೇಶದಲ್ಲಿರುವ ಅಮೆರಿಕ ನಾಗರಿಕರಲ್ಲದ ಪೋಷಕರಿಗೆ ಜನಿಸಿದ ಮಕ್ಕಳಿಗೆ ಯುಎಸ್ ಪೌರತ್ವವನ್ನು ನೀಡುವ ಪದ್ಧತಿಯನ್ನು ಈ ಆದೇಶ ಕೊನೆಗೊಳಿಸುತ್ತದೆ. ಫೆಬ್ರವರಿ 19ರ ಮೊದಲು ಯುಎಸ್‌ನಲ್ಲಿ ಜನಿಸಿದ ಮಕ್ಕಳು ಜನ್ಮಸಿದ್ಧವಾಗಿ ಅಲ್ಲಿನ ಪೌರತ್ವವನ್ನು ಪಡೆಯುತ್ತಾರೆ. ಅಮೆರಿಕದ ಭಾರತೀಯ ದಂಪತಿಗಳಲ್ಲಿ ಹೆಚ್ಚಿನವರು H-1B ಮತ್ತು L1ನಂತಹ ತಾತ್ಕಾಲಿಕ ಕೆಲಸದ ವೀಸಾಗಳಲ್ಲಿದ್ದಾರೆ. ಅಥವಾ ಗ್ರೀನ್ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಉನ್ನತ ಮಟ್ಟದ ಕೆಲಸಗಾರರು ಅಮೆರಿಕಕ್ಕೆ ಬರಬೇಕು, ಎಚ್1ಬಿ ವೀಸಾ ಬೇಕು: ಡೊನಾಲ್ಡ್ ಟ್ರಂಪ್
ಅಮೆರಿಕದಲ್ಲಿ ಜನಿಸಿದ ಮಗು ಅಂತಿಮವಾಗಿ ಪೋಷಕರಿಗೆ ಅಮೆರಿಕದಲ್ಲೇ ವಾಸ್ತವ್ಯ ಹೂಡಲು ದಾರಿ ಮಾಡಿಕೊಡುತ್ತದೆ ಎಂಬುದೇ ಟ್ರಂಪ್ ಆದೇಶಕ್ಕೆ ಕಾರಣ. ಇಲ್ಲಿಯವರೆಗೆ, ಅಮೆರಿಕದಲ್ಲಿ ಜನಿಸಿದ ಮಕ್ಕಳು 21 ವರ್ಷ ತುಂಬಿದ ನಂತರ ತಮ್ಮ ಪೋಷಕರಿಗೆ ಗ್ರೀನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂಬ ಕಾನೂನು ಇತ್ತು. ಗ್ರೀನ್ ಕಾರ್ಡ್ ಅನುಮೋದನೆಗಾಗಿ ವರ್ಷಗಳಿಂದ ಕಾಯುತ್ತಿರುವ ಭಾರತೀಯ ಪ್ರಜೆಗಳು ಈ ನಿರೀಕ್ಷೆಯನ್ನು ಹೆಚ್ಚು ಗೌರವಿಸುತ್ತಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ