ವಾಷಿಂಗ್ಟನ್, ಏಪ್ರಿಲ್ 2: ಕಳೆದ ಕೆಲ ವರ್ಷಗಳಿಂದ ಜಗತ್ತಿನ ವಿವಿಧೆಡೆ ಹಲವು ಅಮೆರಿಕನ್ ರಾಜತಾಂತ್ರಿಕ ಅಧಿಕಾರಿಗಳಿಗೆ (US Diplomats) ನಿಗೂಢ ಕಾಯಿಲೆಯೊಂದು ಬಾಧಿಸಿದೆ. ಹವಾನ ಸಿಂಡ್ರೋಮ್ (Havana Syndrome) ಎಂದು ಕರೆಯಲಾಗುವ ಈ ಕಾಯಿಲೆಗೆ ಒಳಗಾದವರಿಗೆ ತಲೆ ಸುತ್ತು ಬರುವುದು, ಸ್ಮರಣ ಶಕ್ತಿ ನಶಿಸುವುದು, ಮಂಕಾಗುವುದು ಇತ್ಯಾದಿ ತೊಂದರೆಗಳು ಕಾಡುತ್ತವೆ. ಮೂರು ಪತ್ರಿಕೆಗಳ ಜಂಟಿ ತನಿಖಾ ವರದಿಯೊಂದು ಈ ನಿಗೂಢ ಕಾಯಿಲೆಯ ಜಾಡು ಹಿಡಿಯುವ ಪ್ರಯತ್ನ ಮಾಡಿದೆ. ರಷ್ಯಾದ ಗುಪ್ತಚರ ಸಂಸ್ಥೆಯ ಒಂದು ವಿಭಾಗವು ಈ ನಿಗೂಢ ಕಾಯಿಲೆಗೆ ಕಾರಣ ಎಂದು ಈ ವರದಿ ಹೇಳಿದೆ. ಜರ್ಮನಿಯ ಸುದ್ದಿ ಸಾಪ್ತಾಯಿಕ ಡೆರ್ ಸ್ಪೀಗಲ್, ಆನ್ಲೈನ್ ನ್ಯೂಸ್ಪೇಪರ್ ದಿ ಇನ್ಸೈಡರ್, ಅಮೆರಿಕದ ಸಿಬಿಎಸ್ ನ್ಯೂಸ್ ಜಂಟಿಯಾಗಿ ಈ ತನಿಖಾ ವರದಿ ಬಿಡುಗಡೆ ಮಾಡಿವೆ. ಸೋನಿಕ್ ತಂತ್ರಜ್ಞಾನದ ಮೂಲಕ ರಷ್ಯಾ ಕೆಲ ರಾಜತಾಂತ್ರಿಕ ಅಧಿಕಾರಿಗಳನ್ನು ಗುರಿ ಮಾಡಿರಬಹುದು ಎಂದು ವರದಿಯಲ್ಲಿ ಶಂಕಿಸಲಾಗಿದೆ.
ರಷ್ಯಾ ಈ ಆರೋಪವನ್ನು ತಳ್ಳಿಹಾಕಿದೆ. ಈ ನಿಗೂಢ ಕಾಯಿಲೆಯ ಹಿಂದೆ ವಿದೇಶೀ ಶಕ್ತಿಗಳ ಚಿತಾವಣಿ ಇದೆ ಎನ್ನುವ ಸಾಧ್ಯತೆಯನ್ನು ಈ ಹಿಂದೆ ಅಮೆರಿಕದ ಅಧಿಕಾರಿಗಳೂ ತಳ್ಳಿಹಾಕಿದ್ದರು. ಆದರೆ, ಹವಾನಾ ಸಿಂಡ್ರೋಮ್ ಎಂದು ಕರೆಯಲಾಗುವ ಈ ಕಾಯಿಲೆಗೆ ಅಥವಾ ಆರೋಗ್ಯ ಸಮಸ್ಯೆಗೆ ಏನು ಕಾರಣ ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ. ಕ್ಯೂಬಾದಿಂದ ಹಿಡಿದು ಚೀನಾವರೆಗೆ ವಿವಿಧ ದೇಶಗಳಲ್ಲಿ ಈ ಕಾಯಿಲೆಯಿಂದ ಬಾಧಿತರಾಗಿರುವ ಅಮೆರಿಕನ್ ರಾಜತಾಂತ್ರಿಕರ ಸಂಖ್ಯೆ 1,000ಕ್ಕೂ ಹೆಚ್ಚು ಎಂದು ಹೇಳಲಾಗಿದೆ.
ಹವಾನ ಎಂಬುದು ಕ್ಯೂಬಾ ದೇಶದ ರಾಜಧಾನಿ. 2016ರಲ್ಲಿ ಕ್ಯೂಬಾದ ಹವಾನದಲ್ಲಿ ಈ ಪ್ರಕರಣ ಮೊದಲು ಬೆಳಕಿಗೆ ಬಂದಿದ್ದು. ಕೆಲ ವರದಿಗಳ ಪ್ರಕಾರ 2014ರಲ್ಲಿ ಜರ್ಮನಿಯಲ್ಲೂ ಇಂಥ ಪ್ರಕರಣಗಳು ಕಂಡು ಬಂದಿದ್ದವು.
ಇದನ್ನೂ ಓದಿ: ನಿಮ್ಮ ಹೆಂಡತಿಯರ ಸೀರೆ ಸುಡಬಲ್ಲಿರಾ?: ಬಾಂಗ್ಲಾದಲ್ಲಿ ಬಾಯ್ಕಾಟ್ ಇಂಡಿಯಾ ಅಭಿಯಾನ ವಿರುದ್ಧ ಪ್ರಧಾನಿ ಹಸೀನಾ ಗುಡುಗು
ಲಿಥುವೇನಿಯಾದಲ್ಲಿ ಕಳೆದ ವರ್ಷ ನಡೆದಿದ್ದ ನ್ಯಾಟೋ ಸಮಿಟ್ನಲ್ಲಿ ಅಮೆರಿಕದ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಆಗಲೂ ಅವರಿಗೆ ಹವಾನ ಸಿಂಡ್ರೋಮ್ನ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಬೇರೆ ದೇಶಗಳಲ್ಲಿ ಮಾತ್ರವಲ್ಲ, ಅಮೆರಿಕದಲ್ಲೇ ಹಲವು ಅಧಿಕಾರಿಗಳು ಈ ಕಾಯಿಲೆಗೆ ತುತ್ತಾಗಿದ್ದಾರೆ. ತಲೆ ಸುತ್ತು, ತಲೆ ನೋವು, ಕಿವಿ ನೋವು ತರುವ ಶಬ್ದ ಇವು ಬಾಧಿಸುತ್ತವೆ. ಏಕಾಗ್ರತೆಯ ಶಕ್ತಿ ಕುಸಿಯುತ್ತದೆ. ಮಿದುಳಿಗೆ ಹಾನಿಯಾಗಿದೆಯಾ ಎಂದು ನೋಡಿದರೆ ಅದೂ ಕಂಡು ಬರುತ್ತಿಲ್ಲ.
ರಹಸ್ಯವಾಗಿ ಇರಿಸಿರುವ ಸಾಧನಗಳಿಂದ ಹೊರಬರುವ ಮೈಕ್ರೋವೇವ್ ಅಥವಾ ಬಹಳ ಸಣ್ಣ ತರಂಗಾತರಗಳು ಇದಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಅಮೆರಿಕದ ಗುಪ್ತಚರ ವರದಿಯೊಂದೂ ಕೂಡ ಇಂಥ ಸಂಶಯ ವ್ಯಕ್ತಪಡಿಸಿತ್ತು. ಈ ಮೂರು ಮಾಧ್ಯಮ ಸಂಸ್ಥೆಗಳ ಜಂಟಿ ತನಿಖೆಯಲ್ಲೂ ಇದೇ ಸಂಶಯ ವ್ಯಕ್ತಪಡಿಸಲಾಗಿದೆ. 29155 ಎಂಬ ರಷ್ಯನ್ ಮಿಲಿಟರಿ ಗುಪ್ತಚರ ಘಟಕವೊಂದು ಈ ಕೃತ್ಯದ ಹಿಂದಿರಬಹುದು ಎಂದು ಶಂಕಿಸಿದೆ.
ಇದನ್ನೂ ಓದಿ: ಕಡಲ್ಗಳ್ಳರಿಂದ ರಕ್ಷಣೆ: ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪಾಕಿಸ್ತಾನೀಯರು
ರಷ್ಯಾ ಕೈವಾಡ ಇರಬಹುದು ಎಂದು ಶಂಕಿಸಲು ಕಾರಣ ಕೂಡ ಇದೆ. ಹವಾನ ಸಿಂಡ್ರೋಮ್ಗೆ ತುತ್ತಾದವರೆಲ್ಲರೂ ರಷ್ಯಾ ವಿರುದ್ಧ ಕೆಲಸ ಮಾಡಿದವರು, ಅಥವಾ ರಷ್ಯಾ ಬಗ್ಗೆ ನಿಗಾ ಇಟ್ಟವರು. ಆ ಕೆಲಸಗಳಲ್ಲಿ ಸಾಕಷ್ಟು ಯಶಸ್ವಿಯೂ ಆದವರೇ ಇದ್ದಾರೆ. ಇದರಿಂದ ಇಂಥ ಅಧಿಕಾರಿಗಳನ್ನು ರಷ್ಯಾದ ಇಂಟೆಲಿಜೆನ್ಸ್ ಯೂನಿಟ್ ಗುರಿ ಮಾಡಿರುವ ಸಾಧ್ಯತೆ ಹೆಚ್ಚಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಹವಾನ ಸಿಂಡ್ರೋಮ್ಗೆ ಒಳಗಾದ ಎಫ್ಬಿಐ ಏಜೆಂಟ್ವೊಬ್ಬಳು ಸಿಬಿಎಸ್ನ 60 ಮಿನಿಟ್ಸ್ಗೆ ತನ್ನ ಅನುಭವ ಹಂಚಿಕೊಂಡಿದ್ದಾಳೆ. 2021ರಲ್ಲಿ ಫ್ಲೋರಿಡಾದಲ್ಲಿ ತನ್ನ ಮನೆಯಲ್ಲಿದ್ದಾಗ ಯಾವುದೇ ಪ್ರಬಲ ಶಕ್ತಿ ತನಗೆ ಬಡಿದಂತೆ ಅನಿಸಿತು. ತನ್ನ ಬಲಗಿವಿಯೊಳಗೆ ಡ್ರಿಲ್ ಮಾಡಿದ ಶಬ್ದ ಕೇಳಿಬಂತು ಎಂದಿದ್ದಾಳೆ. ಈ ಘಟನೆ ಬಳಿಕ ಈಕೆಯ ಸ್ಮರಣಶಕ್ತಿ ಮತ್ತು ಏಕಾಗ್ರತೆಯ ಶಕ್ತಿ ಕುಂಠಿತಗೊಂಡಿತಂತೆ. ಅಂದರೆ ಯಾವುದೋ ನಿಗೂಢ ಶಬ್ದಾಸ್ತ್ರಗಳು ಅಮೆರಿಕನ್ ಅಧಿಕಾರಿಗಳನ್ನು ಗುರಿ ಮಾಡಿದಂತಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ