ಮಧ್ಯಪ್ರಾಚ್ಯದಲ್ಲಿ ಶಾಂತಿ ಮುನ್ನುಡಿ: ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ,ಈಗ ಅನುಷ್ಠಾನ ಪರೀಕ್ಷಿಸುವ ಸಮಯ ಎಂದ ಇರಾನ್

ಅಮೆರಿಕ ಮತ್ತು ಇರಾನ್ ಮಧ್ಯಪ್ರಾಚ್ಯದಲ್ಲಿ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ, 110 ದಿನಗಳ ಭೀಕರ ಸಂಘರ್ಷಕ್ಕೆ ಅಂತ್ಯ ಹಾಡಿವೆ. ಈ ಒಪ್ಪಂದದ ಮೂಲಕ ಹಾರ್ಮುಜ್ ಜಲಸಂಧಿ ಮುಕ್ತವಾಗಲಿದ್ದು, ಜಾಗತಿಕ ತೈಲ ಬೆಲೆಗಳು ಇಳಿಯುವ ನಿರೀಕ್ಷೆಯಿದೆ. ಅಮೆರಿಕ ತನ್ನ ದಿಗ್ಬಂಧನ ಮತ್ತು ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಲಿದೆ. ಆದರೆ, ಇರಾನ್ ಈ ಒಪ್ಪಂದದ ಅನುಷ್ಠಾನವನ್ನು ಪರೀಕ್ಷಿಸಲು ಸಿದ್ಧ ಎಂದು ಹೇಳಿದೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಮುನ್ನುಡಿ:  ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ,ಈಗ ಅನುಷ್ಠಾನ ಪರೀಕ್ಷಿಸುವ ಸಮಯ ಎಂದ ಇರಾನ್
ಡೊನಾಲ್ಡ್​ ಟ್ರಂಪ್
Image Credit source: X Account: Emmanuel Macron

Updated on: Jun 18, 2026 | 7:48 AM

ಟೆಹ್ರಾನ್, ಜೂನ್ 18: ಮಧ್ಯಪ್ರಾಚ್ಯದಲ್ಲಿ ಕಳೆದ ಮೂರೂವರೆ ತಿಂಗಳುಗಳಿಂದ ನಡೆಯುತ್ತಿದ್ದ ಭೀಕರ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜಗತ್ತಿನ ಗಮನ ಸೆಳೆದಿದ್ದ ಅತ್ಯಂತ ಮಹತ್ವದ ಶಾಂತಿ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್(Iran) ದೇಶಗಳು ಅಧಿಕೃತವಾಗಿ ಸಹಿ ಹಾಕಿವೆ. ಜಿ-7 (G7) ಶೃಂಗಸಭೆಯ ನಂತರ ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಆಯೋಜಿಸಲಾಗಿದ್ದ ಪ್ರಮುಖ ಭೋಜನಕೂಟದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇದನ್ನು ಜಾಗತಿಕ ರಾಜತಾಂತ್ರಿಕತೆಯ ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ. ಅಮೆರಿಕ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ, ಈ ಒಪ್ಪಂದಕ್ಕೆ ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದಎಂದು ಹೆಸರಿಡಲಾಗಿದೆ.

ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ತಕ್ಷಣವೇ ಮತ್ತು ಶಾಶ್ವತವಾಗಿ ನಿಲ್ಲಬೇಕು. ಅಮೆರಿಕವು ಇರಾನ್ ಮೇಲಿನ ತನ್ನ ನೌಕಾ ದಿಗ್ಬಂಧನವನ್ನು ಮುಂದಿನ 30 ದಿನಗಳಲ್ಲಿ ಸಂಪೂರ್ಣವಾಗಿ ಹಿಂಪಡೆಯಲಿದೆ. ಇದರಿಂದ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಮತ್ತೆ ಮುಕ್ತವಾಗಿ ತೆರೆದುಕೊಳ್ಳಲಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಇಳಿಕೆಯಾಗಲಿವೆ.

ಮತ್ತಷ್ಟು ಓದಿ: ಭಾರತದ ಮೇಲೆ ದಾಳಿಯಾದರೆ ಅಮೆರಿಕ ರಕ್ಷಣೆಗೆ ಧಾವಿಸುತ್ತದೆ; ಮೋದಿಗೆ ಟ್ರಂಪ್ ಭರವಸೆ

ಅಂತಿಮ ಒಪ್ಪಂದ ಪೂರ್ಣಗೊಂಡ 30 ದಿನಗಳ ಒಳಗಾಗಿ ಅಮೆರಿಕ ತನ್ನ ಸೇನಾ ಪಡೆಗಳನ್ನು ಇರಾನ್ ಸುತ್ತಮುತ್ತಲಿನ ಪ್ರದೇಶದಿಂದ ಹಿಂತೆಗೆದುಕೊಳ್ಳಲಿದೆ. ಇರಾನ್ ಮುಂದಿನ 60 ದಿನಗಳ ಕಾಲ ಯಾವುದೇ ಶುಲ್ಕವಿಲ್ಲದೆ ಅಂತಾರಾಷ್ಟ್ರೀಯ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರದ ಸಂಪೂರ್ಣ ಜವಾಬ್ದಾರಿ ಹೊರಲಿದೆ.

ಈಗ ಅನುಷ್ಠಾನವನ್ನು ಪರೀಕ್ಷಿಸುವ ಸಮಯ: ಇರಾನ್ ಖಡಕ್ ಮಾತು
ಇರಾನ್ ಸರ್ಕಾರವೂ ಸಹ ಈ ಒಪ್ಪಂದವನ್ನು ದೃಢಪಡಿಸಿದೆ. ಇಸ್ಲಾಮಾಬಾದ್ ಒಪ್ಪಂದದ ಪಠ್ಯಕ್ಕೆ ನಮ್ಮ ಅಧ್ಯಕ್ಷರ ಸಹಿಯೊಂದಿಗೆ ಅಂತಿಮ ರೂಪ ನೀಡಲಾಗಿದೆ. ಈಗ ಒಪ್ಪಂದದ ನಿಯಮಗಳನ್ನು ಅಮೆರಿಕ ಹೇಗೆ ಜಾರಿಗೆ ತರುತ್ತದೆ ಎಂಬುದನ್ನು ಪರೀಕ್ಷಿಸುವ ಸಮಯ ಬಂದಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ತಿಳಿಸಿದ್ದಾರೆ. ಈ ಹಿಂದೆ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಿಗದಿಯಾಗಿದ್ದ ಔಪಚಾರಿಕ ಸಭೆಯು ಎಂದಿನಂತೆ ನಡೆಯಲಿದ್ದು, ಮುಂದಿನ 60 ದಿನಗಳಲ್ಲಿ ಒಪ್ಪಂದದ ಅಂತಿಮ ನಿಯಮಗಳ ಬಗ್ಗೆ ಉಭಯ ದೇಶಗಳು ಮತ್ತಷ್ಟು ಚರ್ಚಿಸಲಿವೆ.

110 ದಿನಗಳ ಭೀಕರ ಸಂಘರ್ಷಕ್ಕೆ ಮುಕ್ತಿ
ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮೊದಲ ಬಾರಿಗೆ ದಾಳಿ ಮಾಡಿದ್ದವು. ಅಂದಿನಿಂದ ಸರಿಸುಮಾರು 110 ದಿನಗಳ ಕಾಲ ನಡೆದ ಭೀಕರ ಯುದ್ಧ ಹಾಗೂ ರಕ್ತಪಾತಕ್ಕೆ ಈ ಸಹಿಯ ಮೂಲಕ ಅಧಿಕೃತವಾಗಿ ಅಂತ್ಯ ಹಾಡಲಾಗಿದೆ.

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಯುದ್ಧ ನಿಲ್ಲಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಇದರಿಂದಾಗಿ ಜಾಗತಿಕ ತೈಲ ಸಾಗಣೆಯ ಹಾದಿ ಸುಗಮವಾಗಲಿದ್ದು, ತೈಲ ಬೆಲೆಗಳು ಇಳಿಕೆಯಾಗುವ ಮೂಲಕ ಇಡೀ ವಿಶ್ವಕ್ಕೆ ದೊಡ್ಡ ಸಮಾಧಾನ ತರಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us