ಲಾಸ್ ಏಂಜಲಿಸ್: ಅಮೆರಿಕಾದ ಕೊಲೊರಾಡೊ ಬೌಲ್ಡೆರ್ ಎಂಬಲ್ಲಿನ ದಿನಸಿ ಅಂಗಡಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಹಿತ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆದರೆ, ಆತನ ಬಗ್ಗೆ ಯಾವುದೇ ಮಾಹಿತಿಗಳನ್ನು, ಆತ ಬಳಸಿರುವ ಆಯುಧದ ಮಾಹಿತಿಯನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಇಂತಹ ಸಂಕೀರ್ಣ ತನಿಖೆ ಪೂರ್ಣಗೊಳ್ಳಲು ಕನಿಷ್ಠ ಪಕ್ಷ ಐದು ದಿನವಾದರೂ ಬೇಕು ಎಂದು ಬೌಲ್ಡರ್ ಪೊಲೀಸ್ ಮುಖ್ಯಸ್ಥೆ ಮಾರಿಸ್ ಹೆರಾಲ್ಡ್ ಹೇಳಿದ್ದಾರೆ.
ಅಮೆರಿಕಾದ ಅಟ್ಲಾಂಟ ಪ್ರದೇಶದಲ್ಲಿ ವಾರದ ಹಿಂದಷ್ಟೇ ಮೂರು ಸ್ಪಾಗಳ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು. ಇದೀಗ ಸೋಮವಾರ (ಮಾರ್ಚ್ 22) ಮತ್ತೆ ಅಂಥದ್ದೇ ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಮ್ಮ ಅನುಭವ ಹಾಗೂ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಕೊಲೊರಾಡೊ ಗವರ್ನರ್ ಜೇರ್ಡ್ ಪಾಲಿಸ್ ಮತ್ತು ಬೌಲ್ಡರ್ ಮೇಯರ್ ಸಾಮ್ ವೇವರ್ ಈ ಘಟನೆಯನ್ನು ದುರಂತ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಸಿಕ್ಕಿರುವ ವಿಡಿಯೊದಲ್ಲಿ ಬಿಳಿ ವರ್ಣದ ಮಧ್ಯಮ ವಯಸ್ಕ ಗಂಡಸೊಬ್ಬ, ಅಂಗಿ ಇಲ್ಲದೆ ಮತ್ತು ರಕ್ತಸಿಕ್ತವಾಗಿ ಪೊಲೀಸರ ಕೈವಶವಾಗಿರುವುದು ಕಂಡುಬಂದಿದೆ.
ದಿನಸಿ ಅಂಗಡಿ ಒಳಗಿನಿಂದ ಸುಮಾರು 8 ಗನ್ಶಾಟ್ಗಳು ಕೇಳಿಬಂದಿದೆ. ಒಂದು ಸೋಡಾ ಹಾಗೂ ಒಂದು ಚಿಪ್ಸ್ ಬ್ಯಾಗ್ಗಾಗಿ ನಾನು ಸಾಯುತ್ತಿದ್ದೆ. ಸ್ವಲ್ಪದರಲ್ಲೇ ತಪ್ಪಿಸಿಕೊಂಡೆ ಎಂದು ಘಟನೆಯಲ್ಲಿ ಪಾರಾದ ವ್ಯಕ್ತಿ ಸಿಎನ್ಎನ್ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದಾನೆ. ಘಟನಾ ಸ್ಥಳದಲ್ಲಿ ಕನಿಷ್ಠ ಆರು ಆಂಬುಲೆನ್ಸ್ಗಳು, ಹತ್ತರಷ್ಟು FBI ಏಜೆಂಟ್ಗಳು ಹಾಗೂ ಕನಿಷ್ಠ ಒಂದು SWAT ತಂಡ ನಿಯೋಜನೆಗೊಂಡಿದೆ. ಬೌಲ್ಡರ್ ನಗರವು ರಾಜ್ಯ ರಾಜಧಾನಿ ಡೆನ್ವರ್ನಿಂದ ಸುಮಾರು 30 ಮೈಲಿ (50 ಕಿ.ಮೀ) ದೂರದಲ್ಲಿದೆ.
ಇದನ್ನೂ ಓದಿ: ‘ಹಂತಕ’ ಆರೋಪ; ಅಮೆರಿಕಾ ಅಧ್ಯಕ್ಷ ಜೋ ಬೈಡನ್ಗೆ ನೇರಾನೇರ ಚರ್ಚೆಗೆ ಆಹ್ವಾನವಿತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ
Published On - 4:04 pm, Tue, 23 March 21