ಹೃದ್ರೋಗಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ ಯುಎಸ್ ವೈದ್ಯರು; ಇದು ಚರಿತ್ರೆ ಸೃಷ್ಟಿಸಿದ ಸರ್ಜರಿ !
ಸರ್ಜರಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ರೋಗಿ ಡೇವಿಡ್ ಬೆನೆಟ್ ಮೇರಿಲ್ಯಾಂಡ್ ನಿವಾಸಿಯಾಗಿದ್ದಾರೆ. ಅವರು ಸರ್ಜರಿ ಬಳಿಕ ಮಾತನಾಡಿದ್ದು, ಇದು ಮಾಡು ಇಲ್ಲವೇ ಮಡಿ ಎಂಬಂಥ ಸರ್ಜರಿಯಾಗಿತ್ತು. ನನಗೆ ಬದುಕುಳಿಯಲು ಕೊನೇ ಅವಕಾಶವಾಗಿತ್ತು ಎಂದಿದ್ದಾರೆ.
ತಳೀಯವಾಗಿ ಮಾರ್ಪಾಡಿಸಲಾದ ಹಂದಿಯೊಂದರ ಹೃದಯವನ್ನು 57ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಯುಎಸ್ನ ಶಸ್ತ್ರಚಿಕಿತ್ಸಕರು ಇತಿಹಾಸ ಸೃಷ್ಟಿಸಿದ್ದಾರೆ. ಇದು ವೈದ್ಯಕೀಯ ಲೋಕದಲ್ಲಿಯೇ ಪ್ರಥಮವಾಗಿದೆ. ಹಾಗೇ, ಮುಂದೊಂದು ದಿನ ಅಂಗಾಂಗ ದಾನ ಕೊರತೆಯ ಗಂಭೀರತೆಯನ್ನು ಕಡಿಮೆ ಮಾಡಬಲ್ಲದು ಎಂಬ ಆಶಯವನ್ನೂ ಮೂಡಿಸಿದೆ. ಅಂದಹಾಗೆ, ಈ ಐತಿಹಾಸಿಕ ವೈದ್ಯಕೀಯ ಪ್ರಕ್ರಿಯೆ ನಡೆದಿದ್ದು ಯುಎಸ್ನ ಮೇರಿಲ್ಯಾಂಡ್ ಯೂನಿವರ್ಸಿಟಿಯ ಮೆಡಿಕಲ್ ಸ್ಕೂಲ್ನಲ್ಲಿ.
ಅಂದಹಾಗೆ, ಹಂದಿಯ ಹೃದಯ ಕಸಿಯಾಗಲ್ಪಟ್ಟ ರೋಗಿಯ ಹೆಸರು ಡೇವಿಡ್ ಬೆನೆಟ್. ಇವರ ಆರೋಗ್ಯ ತುಂಬ ಕ್ಷೀಣವಾಗಿದ್ದ ಕಾರಣ, ಮತ್ತೊಂದು ಮನುಷ್ಯ ಹೃದಯವನ್ನೇ ಕಸಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತಳಿ ಮಾರ್ಪಾಡು ಮಾಡಿದ ಹಂದಿಯ ಹೃದಯವನ್ನು ಕಸಿ ಮಾಡಲಾಯಿತು. ಅದೀಗ ಯಶಸ್ವಿಯಾಗಿದ್ದು, ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗೇ, ಅವರಿಗೆ ಹಾಕಲಾದ ಹೊಸ ಅಂಗ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅತ್ಯಂತ ಎಚ್ಚರಿಕೆ ಮತ್ತು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದೂ ವೈದ್ಯರು ತಿಳಿಸಿದ್ದಾರೆ.
ಇನ್ನು ಸರ್ಜರಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ರೋಗಿ ಡೇವಿಡ್ ಬೆನೆಟ್ ಮೇರಿಲ್ಯಾಂಡ್ ನಿವಾಸಿಯಾಗಿದ್ದಾರೆ. ಅವರು ಸರ್ಜರಿ ಬಳಿಕ ಮಾತನಾಡಿದ್ದು, ಇದು ಮಾಡು ಇಲ್ಲವೇ ಮಡಿ ಎಂಬಂಥ ಸರ್ಜರಿಯಾಗಿತ್ತು. ಕತ್ತಲಲ್ಲಿ ಹೊಡೆವ ಗುಂಡು..ತಾಗಿದರೆ ತಾಗಿತು-ಇಲ್ಲದಿದ್ದರೆ ಇಲ್ಲವೆಂಬಂಥ ಕಸಿಯಾಗಿತ್ತು. ಆದರೆ ನಾನು ಬದುಕಲು ಇರುವ ಕೊನೇ ಅವಕಾಶವೂ ಆಗಿತ್ತು. ಹಾಗಾಗಿ ಒಪ್ಪಿಕೊಂಡೆ ಎಂದಿದ್ದಾರೆ. ಅಂದಹಾಗೆ, ಬೆನೆಟ್ ಹೃದಯ ಮತ್ತು ಶ್ವಾಸಕೋಶ ಬೈಪಾಸ್ ಕಾರಣದಿಂದ ಹಲವು ತಿಂಗಳುಗಳಿಂದಲೂ ಹಾಸಿಗೆಯಲ್ಲೇ ಮಲಗಿದ್ದರು. ಆದರೆ ಇದೀಗ ತಾವು ಹುಷಾರಾಗಿ, ಎದ್ದು ಓಡಾಡುವ ಆಶಯ ವ್ಯಕ್ತಪಡಿಸಿದ್ದಾರೆ.
ಇದು ಸಾಂಪ್ರದಾಯಿಕವಲ್ಲದ ಕಸಿ ಶಸ್ತ್ರಚಿಕಿತ್ಸೆಯಾಗಿದ್ದರಿಂದ ಯುಎಸ್ನ ಆಹಾರ ಮತ್ತು ಔಷಧ ಆಡಳಿತದ ಅನುಮತಿ ಕೇಳಲಾಗಿತ್ತು. ಈ ಆಡಳಿತ ಹೊಸವರ್ಷದ ಮುನ್ನಾದಿನ ಶಸ್ತ್ರಚಿಕಿತ್ಸೆಗೆ ತುರ್ತು ಅನುಮತಿ ಕೊಟ್ಟಿತ್ತು. ಅದರಂತೆ ಹೊಸ ಪ್ರಯೋಗಕ್ಕೆ ಸಜ್ಜಾದ ವೈದ್ಯರು ಕೊನೆಗೂ ಕಸಿ ಮಾಡಿ ಮುಗಿಸಿದ್ದಾರೆ. ರೋಗಿ ಮಾತನಾಡುವಷ್ಟು ಗಟ್ಟಿಯಾಗಿದ್ದಾರೆ. ಕಸಿ ಸರ್ಜರಿ ಮಾಡಿದ ವೈದ್ಯ ಬಾರ್ಟ್ಲಿ ಗ್ರಿಫಿತ್, ಇದೀಗ ನಡೆಸಿದ ಹಂದಿ ಹೃದಯ ಕಸಿ ಸರ್ಜರಿ ಅದ್ಭುತ ಶಸ್ತ್ರಚಿಕಿತ್ಸೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಅಂಗಗಳ ಕೊರತೆ ಬಿಕ್ಕಟ್ಟು ಪರಿಹರಿಸಲು ಸಹಾಯ ಮಾಡುವ ಭರವಸೆ ಇದೆ ಎಂದು ತಿಳಿಸಿದ್ದಾರೆ. ಸರ್ಜರಿ ಮಾಡಿಯಾದ ಬಳಿಕವೂ ಕೂಡ ನಾವು ತುಂಬ ಎಚ್ಚರಿಕೆಯಿಂದ ಇದ್ದೇವೆ. ರೋಗಿಯ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದೇವೆ. ಇದು ಜಗತ್ತಿನಲ್ಲೇ ಮೊದಲ ಬಾರಿಗೆ ನಡೆದ ಹೃದಯ ಕಸಿ ಎಂದೂ ಹೇಳಿದ್ದಾರೆ.
ಹಲವು ವರ್ಷಗಳ ಸಂಶೋಧನೆ ಹೀಗೆ ಹಂದಿ ಹೃದಯವನ್ನು ಏಕಾಏಕಿ ಕಸಿ ಮಾಡಿದ್ದಲ್ಲ. ನಾವು ಈ ಬಗ್ಗೆ ಹಲವು ವರ್ಷಗಳ ಸಂಶೋಧನೆ ನಡೆಸಿದ್ದೇವೆ ಎಂದು ಯೂನಿವರ್ಸಿಟಿಯ ತಜ್ಞ ವೈದ್ಯ ಮುಹಮ್ಮದ್ ಮೊಹಿಯುದ್ದೀನ್ ತಿಳಿಸಿದ್ದಾರೆ. ಹಂದಿಯಿಂದ ಹಿಡಿದು ಬಬೂನ್ಗಳವರೆಗೆ (ದಕ್ಷಿಣ ಆಫ್ರಿಕಾದ ಮಂಗ)ಒಳಗೊಂಡು ನಮ್ಮ ಅಧ್ಯಯನ ನಡೆದಿತ್ತು ಎಂದೂ ಮಾಹಿತಿ ನೀಡಿದ್ದಾರೆ. ಇದೀಗ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆ ಭವಿಷ್ಯದಲ್ಲಿ ಇಂಥ ರೋಗಿಗಳ ಜೀವ ಉಳಿಸುವ ವಿಧಾನಗಳ ಸುಧಾರಣೆ ಬಗ್ಗೆ ಭರವಸೆ ಮೂಡಿಸಿದೆ. ವೈದ್ಯಕೀಯ ಸಮುದಾಯಕ್ಕೆ ಸಹಾಯವಾಗಬಲ್ಲ ಮಾಹಿತಿಯನ್ನೂ ನೀಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ದೈತ್ಯಾಕಾರದ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು
Published On - 8:45 am, Tue, 11 January 22