AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಹಲವೆಡೆ ಭಾರಿ ಹಿಮಪಾತ: 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ಅಮೆರಿಕದಲ್ಲಿ ದಟ್ಟ ಮಂಜು ಮತ್ತು ಭಾರಿ ಹಿಮಪಾತದಿಂದ 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿವೆ. 15 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಚಂಡಮಾರುತವು ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಅಸ್ತವ್ಯಸ್ತತೆ ಉಂಟುಮಾಡಿದೆ. ತೀವ್ರ ಶೀತ ಅಲೆ ಅಪಾಯಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿದ್ದು, ತಾಪಮಾನ ಮೈನಸ್ 34 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಅಮೆರಿಕದ ಹಲವೆಡೆ ಭಾರಿ ಹಿಮಪಾತ: 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jan 25, 2026 | 7:40 AM

Share

ಡಲ್ಲಾಸ್ (ಎಪಿ), ಜನವರಿ 25: ಅಮೆರಿಕದ ಹಲವೆಡೆ ದಟ್ಟ ಮಂಜು ಮತ್ತು ಭಾರಿ ಹಿಮಪಾತ (Winter Storm) ಹಿನ್ನೆಲೆ  ನಿಗದಿಯಾಗಿದ್ದ 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ (Flights Cancelled). ಈ ಚಂಡಮಾರುತದಿಂದ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗುವ ನಿರೀಕ್ಷೆಯಿದೆ. ಅಲ್ಲದೆ, 15 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮಾತನಾಡಿ, ತಮ್ಮ ಆಡಳಿತವು ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಲು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (ಫೀಮಾ) ಸಂಪೂರ್ಣ ಸಿದ್ಧತೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮದುವೆ ಮನೆಗೆ ಸೂತಕ ತಂದ ದಾಳಿಕೋರ: ಆತ್ಮಾಹುತಿ ಬಾಂಬ್ ದಾಳಿಗೆ 7 ಜನ ಸಾವು

ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಉತ್ತರ ಟೆಕ್ಸಾಸ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಪೂರ್ತಿ ಹಿಮ ಹಾಗೂ ಮಳೆಯಾಗಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ತೀವ್ರ ಶೀತ ಅಲೆ ಅಪಾಯಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿದ್ದು, ಇದು ಸೋಮವಾರದವರೆಗೆ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಸಿದೆ. ಮುಂದಿನ ಕೆಲವು ರಾತ್ರಿಗಳಲ್ಲಿ ತಾಪಮಾನ ಮೈನಸ್ 24 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಸಿಎನ್‌ಎನ್ ವರದಿಯ ಪ್ರಕಾರ, ಅಮೆರಿಕದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭಾಗವು ಭಾರೀ ಹಿಮಪಾತದ ಚಂಡಮಾರುತ ಹಾಗೂ ತೀವ್ರ ಶೀತ ಅಲೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಈ ಚಂಡಮಾರುತದಿಂದ ಉಂಟಾಗುವ ಹಿಮವು ಟೆಕ್ಸಾಸ್‌ನಿಂದ ನ್ಯೂ ಇಂಗ್ಲೆಂಡ್‌ವರೆಗೆ 2,000 ಮೈಲುಗಳಿಗಿಂತ ಹೆಚ್ಚು ವ್ಯಾಪ್ತಿಯಲ್ಲಿ ಹರಡುವ ಸಾಧ್ಯತೆ ಇದೆ. ಈ ನಡುವೆ, ಶುಕ್ರವಾರ ಒಕ್ಲಹೋಮಾ ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಹಿಮಪಾತ ಹಾಗೂ ಮಳೆ ಸುರಿದಿದೆ.

ಇದನ್ನೂ ಓದಿ: ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ, ಇರಾನ್​ಗೆ ಹೊಸ ಎಚ್ಚರಿಕೆ ಕೊಟ್ಟ ಡೊನಾಲ್ಡ್​ ಟ್ರಂಪ್

ಚಂಡಮಾರುತ ಉತ್ತರ–ಪೂರ್ವ ದಿಕ್ಕಿನತ್ತ ಸಾಗಲಿದೆ. ಇದರ ಪರಿಣಾಮವಾಗಿ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ಹಾಗೂ ಬೋಸ್ಟನ್‌ವರೆಗೆ ವ್ಯಾಪಿಸಿರುವ ಪ್ರದೇಶಗಳಲ್ಲಿ ಸುಮಾರು ಒಂದು ಅಡಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಹಲವು ದಿನಗಳ ಕಾಲ ಮುಂದುವರಿದ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ, ಗ್ರಾಮೀಣ ಲೂಯಿಸ್ ಕೌಂಟಿ ಹಾಗೂ ಮೇಲಿನ ನ್ಯೂಯಾರ್ಕ್‌ನ ಇತರ ಭಾಗಗಳಲ್ಲಿ ಬೆಳಗಿನ ಜಾವ ತಾಪಮಾನ ಮೈನಸ್ 34 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿದಿದೆ ಎಂದು ಇಲಾಖೆ ತಿಳಿಸಿದೆ.

ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.