bizarre store: ಬಿಸಾಡುವುದಕ್ಕೆ ಹೇಳಿದ್ದ ಲಾಟರಿಗೆ ಬಂದಿದ್ದು 1 ಮಿಲಿಯನ್ ಡಾಲರ್ ಬಹುಮಾನ

|

Updated on: May 25, 2021 | 5:04 PM

ಅಮೆರಿಕದಲ್ಲಿ ಮಹಿಳೆಯೊಬ್ಬರಿಗೆ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಬಂದಿದೆ. ಆಕೆಗೆ ಬಹುಮಾನ ಬಂದಿದ್ದಕ್ಕಿಂತ ಆ ಲಾಟರಿ ಟಿಕೆಟ್ ಕೈ ಸೇರಿದ ಪರಿ ದೊಡ್ಡ ಸುದ್ದಿ ಆಗಿದೆ.

bizarre store: ಬಿಸಾಡುವುದಕ್ಕೆ ಹೇಳಿದ್ದ ಲಾಟರಿಗೆ ಬಂದಿದ್ದು 1 ಮಿಲಿಯನ್ ಡಾಲರ್ ಬಹುಮಾನ
ಸಾಂದರ್ಭಿಕ ಚಿತ್ರ
Follow us on

ಮಹಿಳೆಯೊಬ್ಬರು ಬಿಸಾಡಲು ಹೇಳಿಹೋಗಿದ್ದ ಲಾಟರಿ ಟಿಕೆಟ್​ಗೆ 10 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಬಂದಿದ್ದು, ಆಕೆಗೆ ಬಹುಮಾನ ಬಂದಿದ್ದಕ್ಕಿಂತ ಲಾಟರಿ ಟಿಕೆಟ್ ಆಕೆಯ ಕೈ ಸೇರಿದ ರೀತಿ ದೊಡ್ಡ ಸುದ್ದಿಯಾಗಿದೆ. ಆಕೆ ಅಮೆರಿಕದ ಮಸಾಚ್ಯುಸೆಟ್ಸ್ ರಾಜ್ಯದವರು. ಆದರೆ ಆಕೆ ಪಾಲಿನ ಅದೃಷ್ಟ ಇತ್ತು ಎನಿಸುವಂತೆ ಅನಿಸುತ್ತದೆ, ಮತ್ತೆ ಅದೇ ಲಾಟರಿ ಟಿಕೆಟ್ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆ. ಆ ಲಾಟರಿ ಟಿಕೆಟನ್ನು ಭಾರತೀಯ ಮೂಲದ ಕುಟುಂಬ ಹಿಂತಿರುಗಿಸಿದೆ. ಆ ಮಹಿಳೆಯು ಭಾರತೀಯ ಮೂಲದ ಕುಟುಂಬ ನಡೆಸುವ ಲಾಟರಿ ಟಿಕೆಟ್ಅಂಗಡಿಯ ದೀರ್ಘಾವಧಿ ಗ್ರಾಹಕರಾಗಿದ್ದು, ಇದೀಗ ಆ ಕುಟುಂಬದ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಿ ರೋಸ್ ಫಿಯೆಗಾ ಅವರು ಮಾರ್ಚ್​ನಲ್ಲಿ ಡೈಮಂಡ್ ಮಿಲಿಯನ್ ಸ್ಕ್ರಾಚ್ ಆಫ್ ಟಿಕೆಟ್ ಅನ್ನು ಲಕ್ಕಿ ಶಾಪ್​ನಿಂದ ಖರೀದಿಸಿದ್ದರು. ಆ ಮಳಿಗೆಯು ಭಾರತೀಯ ಮೂಲದ ಕುಟುಂಬಕ್ಕೆ ಸೇರಿದ್ದು, ಸೌಥ್​ವಿಕ್​ನಲ್ಲಿದೆ. ಅಲ್ಲಿಗೆ ಆ ಮಹಿಳೆ ನಿರಂತರವಾಗಿ ತೆರಳುತ್ತಿದ್ದರು.

“ನಾನು ಅಂದು ಬಹಳ ಆತುರದಲ್ಲಿ ಇದ್ದೆ. ಊಟದ ಬಿಡುವಿನ ಮಧ್ಯೆ ಅಂಗಡಿಗೆ ಹೋಗಿದ್ದೆ. ಆ ಲಾಟರಿ ಟಿಕೆಟ್ ಸ್ಕ್ರಾಚ್ ಮಾಡಿದಾಗ ಅದಕ್ಕೆ ಏನೂ ಬರಲಿಕ್ಕಿಲ್ಲ ಅಂದುಕೊಂಡು, ಬಿಸಾಡುವಂತೆ ಅವರಿಗೇ ಹೇಳಿ, ಲಾಟರಿ ಟಿಕೆಟ್ ಕೊಟ್ಟು ಬಂದಿದ್ದೆ,” ಎಂದು ಫಿಯೆಗಾ ಸೋಮವಾರ ನೆನಪಿಸಿಕೊಂಡಿದ್ದಾರೆ. ಆದರೆ ಆ ಟಿಕೆಟ್ ಪೂರ್ತಿಯಾಗಿ ಸ್ಕ್ರಾಚ್ ಆಗಿರದೆ ಮಳಿಗೆಯಲ್ಲಿ ಹಾಗೇ ಉಳಿದಿದೆ. ಅದನ್ನು ಮಾಲೀಕರ ಮಗನಾದ ಅಭಿ ಶಾ ಗಮನಿಸಿದ್ದಾರೆ. ಅಂದ ಹಾಗೆ ಈ ಗೆಲುವಿನ ಟೆಕೆಟ್ ಮಾರಿರುವವರು ಅಭಿಯ ತಾಯಿ ಅರುಣಾ. “ಎಲ್ಲ ಟಿಕೆಟ್ ಪರಿಶೀಲಿಸುವಾಗ ಕಸದ ಬುಟ್ಟಿಯ ಬಳಿ ಪೂರ್ಣವಾಗಿ ಸ್ಕ್ರಾಚ್ ಮಾಡದೆ ಉಳಿದಿದ್ದ ಲಾಟರಿಯನ್ನು ಕಂಡೆ. ನಾನು ಅದನ್ನು ಪೂರ್ತಿಯಾಗಿ ಸ್ಕ್ರಾಚ್ ಮಾಡಿದೆ. ಅದು 10 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಬಂದಿದ್ದ ಟಿಕೆಟ್ ಆಗಿತ್ತು,” ಎಂದು ಅಭಿ ಸ್ಥಳೀಯ ಟೀವಿ ಚಾನೆಲ್​ಗೆ ತಿಳಿಸಿದ್ದಾರೆ.

ಅಂದು ಆ ರಾತ್ರಿ ಮಟ್ಟಿಗೆ ನಾನು ಮಿಲಿಯನೇರ್ ಆದೆ ಎಂದು ನಗುತ್ತಾ ಹೇಳಿದ್ದಾರೆ ಅಭಿ. ಅಷ್ಟೇ ಅಲ್ಲ, ಮೊದಲಿಗೆ ಟೆಸ್ಲಾ ಕಾರು ಖರೀದಿ ಮಾಡಬೇಕು ಅಂತಲೇ ಆಲೋಚಿಸಿದೆ. ಆ ನಂತರ ಅದನ್ನು ವಾಪಸ್ ಕೊಡಬೇಕು ಎಂದು ನಿರ್ಧರಿಸಿದೆ ಎಂದಿದ್ದಾರೆ. ಒಂದು ಕಡೆ ನನ್ನ ಕೈಲಿ 1 ಮಿಲಿಯನ್ ಡಾಲರ್ ಇತ್ತು ಮತ್ತು ಇನ್ನೊಂದು ಕಡೆ ಏನಾದರೂ ಒಳ್ಳೆಯದನ್ನು ಮಾಡಲು ಬಯಸುತ್ತಿದ್ದೆ ಎಂದು ಅವರು ಅನುಭವ ಹೇಳಿಕೊಂಡಿದ್ದಾರೆ. ಲಕ್ಕಿಸ್ಟೋರ್ಸ್ ಮಾಲೀಕ ಮೌನೀಶ್ ಶಾ ಮಾತನಾಡಿ, ಟಿಕೆಟ್ ಹಿಂತಿರುಗಿಸಬೇಕು ಎಂಬ ನಿರ್ಧಾರ ಅಷ್ಟು ಸಲೀಸಿರಲಿಲ್ಲ. ನಾವು ಎರಡು ರಾತ್ರಿ ನಿದ್ದೆ ಮಾಡಿಲ್ಲ. ಭಾರತದಲ್ಲಿ ಇರುವ ತಂದೆ, ಅಜ್ಜ- ಅಜ್ಜಿಗೆ ಫೋನ್ ಮಾಡಿ ಮಾತನಾಡಿದಾಗ ಆ ಟಿಕೆಟ್ ಹಿಂತಿರುಗಿಸುವ ಹಾಗೆ ಹೇಳಿದರು ಎಂದಿದ್ದಾರೆ ಮೌನೀಶ್.

ಆ ಮಹಿಳೆ ಪದೇಪದೇ ಅಂಗಡಿಗೆ ಬರುತ್ತಿದ್ದರಿಂದ ಹುಡುಕುವುದು ಕಷ್ಟ ಆಗಲಿಲ್ಲ ಎಂದಿದ್ದಾರೆ ಮೌನೀಶ್. “ಒಂದು ವೇಳೆ ಆ ಒಂದು ಮಿಲಿಯನ್ ಲಾಟರಿ ಇಟ್ಟುಕೊಂಡಿದ್ದರೆ ಇಷ್ಟು ಜನಪ್ರಿಯ ಆಗುತ್ತಿರಲಿಲ್ಲ. ನಾನು ವಾಪಸ್ ಕೊಟ್ಟಿದ್ದಕ್ಕೆ ಖುಷಿ ಆಗ್ತಿದೆ,” ಎನ್ನುತ್ತಾರೆ ಅಭಿ.

ಇದನ್ನೂ ಓದಿ: Dubai Millenium Duty Free Lottery | ದುಬೈ ಲಾಟರಿಯಲ್ಲಿ ರೂ 24 ಕೋಟಿ ಗೆದ್ದ ಶಿವಮೊಗ್ಗದ ಶಿವಮೂರ್ತಿ

(Bizarre Story: An U.S. woman who got 1 million USD prize money for a lottery ticket to which she said to thrown away)