
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ಶನಿವಾರ ತೀವ್ರ ವಾಕರಿಕೆಯುಂಟಾಗಿದ್ದು ವೈದ್ಯರ ಎರಡು ತಂಡ ಅಧ್ಯಕ್ಷರ ನಿವಾಸಕ್ಕೆ ಧಾವಿಸಿದೆ. ರಷ್ಯಾದ (Russia) ಟೆಲಿಗ್ರಾಂ ಚಾನೆಲ್ ಜನರಲ್ ಎಸ್ವಿಆರ್ ಅನ್ನು ಉಲ್ಲೇಖಿಸಿ ಇಂಡಿಪೆಂಡೆಂಟ್ ವರದಿ ಮಾಡಿದ್ದು, ಪುಟಿನ್ ಅವರಿಗೆ ತುರ್ತು ವೈದ್ಯಕೀಯ ಗಮನದ ಅಗತ್ಯವಿದೆ ಎಂದು ಹೇಳಿದೆ. ಪುಟಿನ್ ಚಿಕಿತ್ಸೆಗಾಗಿ ಅರೆ ವೈದ್ಯಕೀಯ ಸೇವೆಯ ತಂಡ ಮತ್ತು ಹೆಚ್ಚುವರಿ ವೈದ್ಯರನ್ನು ಕಳುಹಿಸಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದು, ಪುಟಿನ್ ಆರೋಗ್ಯ ಸುಧಾರಿಸಿದ ನಂತರ ವೈದ್ಯರು ಅವರ ಕೋಣೆಯಿಂದ ಹೊರ ಬಂದಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಶುಕ್ರವಾರ ರಾತ್ರಿಯಿಂದ ಜುಲೈ 22 ಶನಿವಾರ, ಜುಲೈ 23ರಂದು ಅವರಿಗೆ ತುರ್ತು ವೈದ್ಯಕೀಯ ಗಮನದ ಅಗತ್ಯವಿತ್ತು. ರಾತ್ರಿ 1 ಗಂಟೆಗೆ ವೈದ್ಯಕೀಯ ತಂಡವನ್ನು ಅವರ ಮನೆಗೆ ಕರೆಯಲಾಗಿತ್ತು ಎಂದು ಚಾನೆಲ್ ಹೇಳಿದೆ. ಪುಟಿನ್ ಅವರಿಗೆ ತೀವ್ರ ವಾಕರಿಕೆ ಬಂದಿತ್ತು. 20 ನಿಮಿಷದ ನಂತರ ವೈದ್ಯರ ತಂಡ ಅಧ್ಯಕ್ಷರಿಗೆ ಚಿಕಿತ್ಸೆ ನೀಡಿದೆ. ಸುಮಾರು ಮೂರು ಗಂಟೆಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಚಾನೆಲ್ ಹೇಳಿದೆ. ನ್ಯೂಜಿಲ್ಯಾಂಡ್ ಹೆರಾಲ್ಡ್ ಪ್ರಕಾರ , ಈ ಟೆಲಿಗ್ರಾಂ ಚಾನೆಲ್ ರಷ್ಯಾದ ಮಾಜಿ ವಿದೇಶಿ ಗುಪ್ತಚರ ಸೇವೆ(ಎಸ್ ವಿಆರ್) ಲೆಫ್ಟಿನೆಂಟ್ ಜನರಲ್ ನಡೆಸುತ್ತಿದ್ದು Viktor Mikhailovich ಎಂಬ ಮಿಥ್ಯಾ ಹೆಸರಿಟ್ಟಿದ್ದಾರೆ.
ಫೆಬ್ರುವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗಿನಿಂದ ಪುಟಿನ್ ಅವರು ಟರ್ಮಿನಲ್ ಕ್ಯಾನ್ಸರ್ ಅಥವಾ ಪರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಕೆಲವು ತಿಂಗಳುಗಳ ಹಿಂದೆ ಸಾರ್ವಜನಿಕವಾಗಿ ಅಪರೂಪವಾಗಿ ಕಾಣಿಸಿಕೊಂಡಿದ್ದ ಪುಟಿನ್, ಅಧಿಕೃತ ಸಭೆಯೊಂದರಲ್ಲಿ ಪುಟಿನ್ ಕುಳಿತಾಗ ಅವರ ಪಾದಗಳು ನಡುಗುತ್ತಿರುವುದು ಕಂಡು ಬಂತು.
ಆದಾಗ್ಯೂ, ಪುಟಿನ್ ಆರೋಗ್ಯಕ್ಕೇನೂ ಆಗಿಲ್ಲ ಎಂದು ರಷ್ಯಾ ಸರ್ಕಾರ ಹೇಳಿದೆ. ಉಕ್ರೇನ್ , ಅಮೆರಿಕ ಮತ್ತು ಬ್ರಿಟಿಷರು ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಇತ್ತೀಚಿನ ತಿಂಗಳುಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಬಂದಿದ್ದಾರೆ. ಅದರಲ್ಲಿ ಯಾವುದೂ ನಿಜವಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಕಳೆದ ಎರಡು ದಶಕಗಳಿಂದ ರಷ್ಯಾದಲ್ಲಿ ಅಧಿಕಾರದಲ್ಲಿರುವ ಪುಟಿನ್, ಫೆಬ್ರವರಿ 24ರಂದು ಉಕ್ರೇನ್ ಮೇಲೆ ದಾಳಿ ನಡೆಸುವ ಮೂಲಕ ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದರು.