2009 ರಲ್ಲಿ “ಹೇರ್ ಲೈಕ್ ಮೈನ್” ಎಂಬ ಶೀರ್ಷಿಕೆಯ ಮೂಲಕ ಗಮನ ಸೆಳೆದ ಫೋಟೊದಲ್ಲಿ ತನ್ನ ತಲೆ ಕೂದಲನ್ನು ಮುಟ್ಟಿದ್ದ ಬಾಲಕ ಜಾಕೋಬ್ ಫಿಲಡೆಲ್ಫಿಯಾ (Jacob Philadelphia) ಅವರೊಂದಿಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (Barack Obama) ಇತ್ತೀಚೆಗೆ ವಿಡಿಯೊ ಕಾಲ್ ಮೂಲಕ ಮಾತನಾಡಿದ್ದಾರೆ. ಜಾಕೋಬ್ ಫಿಲಡೆಲ್ಫಿಯಾ ತನ್ನ ಪೋಷಕರು ಮತ್ತು ಹಿರಿಯ ಸಹೋದರನೊಂದಿಗೆ ಓವಲ್ ಕಚೇರಿಗೆ ಭೇಟಿ ನೀಡಿದಾಗ ಆತನ ವಯಸ್ಸು 5 ವರ್ಷ. ಒಬಾಮಾರನ್ನು ಭೇಟಿ ಮಾಡಿದ ಆತ ಅವರಲ್ಲಿ ಕೇಳಿದ್ದು, ನಿಮ್ಮ ಕೂದಲು ನನ್ನಂತೆಯೇ ಇದೆಯೇ ಎಂಬುದಾಗಿತ್ತು. ಬಾಲಕನ ಈ ಪ್ರಶ್ನೆಗೆ ಬರಾಕ್ ಒಬಾಮಾ, ಮುಟ್ಟಿ ನೋಡಿ ಬಿಡು ಎಂದು ಆತನ ಮುಂದೆ ತಲೆ ಬಾಗಿ ನಿಂತರು. ಬಾಲಕ ಅಮೆರಿಕ ಅಧ್ಯಕ್ಷರ ತಲೆ ಕೂದಲನ್ನು ಮುಟ್ಟುತ್ತಿರುವ ಆ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಫೋಟೊಗೆ “ಹೇರ್ ಲೈಕ್ ಮೈನ್’ ಎಂಬ ಶೀರ್ಷಿಕೆ ನೀಡಲಾಗಿತ್ತು. ಈಗ 13 ವರ್ಷಗಳ ನಂತರ ಒಬಾಮಾ ಮತ್ತೆ ಜಾಕೋಬ್ ಅವರನ್ನು ವರ್ಚುವಲ್ ಆಗಿ ಭೇಟಿಯಾಗಿದ್ದು ಅವರ ಸಂವಾದದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಒಬಾಮ ಜಾಕೋಬ್ ಪ್ರೌಢಶಾಲಾ ಪದವಿ ಪಡೆದುದನ್ನು ಅಭಿನಂದಿಸಿದ್ದು 2009 ರಲ್ಲಿ ನಡೆದ ಅವರ ಮಾತುಕತೆಯನ್ನು ನೆನಪಿಸಿಕೊಂಡರು.
ಜಾಕೋಬ್ ಫಿಲಡೆಲ್ಫಿಯಾ ಓವಲ್ ಕಚೇರಿಗೆ ಭೇಟಿ ನೀಡಿದಾಗ ಆತನಿಗೆ ಐದು ವರ್ಷ. ನಿಮ್ಮ ಕೂದಲು ನನ್ನಂತೆಯೇ ಇದೆಯೇ ಎಂದು ನನ್ನಲ್ಲಿ ಕೇಳಿದರು. ಆ ಫೋಟೋ ನಮ್ಮ ಇಷ್ಟದ ಫೋಟೊಗಳಲ್ಲೊಂದು. ಇದು ನಿಮ್ಮ ನಾಯಕರಲ್ಲಿ ನಿಮ್ಮನ್ನು ನೋಡುವ ಶಕ್ತಿಯ ಜ್ಞಾಪನೆ. ಇವತ್ತು ಜಾಕೋಬ್ ಹೈಸ್ಕೂಲ್ ನಿಂದ ಗ್ಯಾಜುವೇಟ್ ಆಗುತ್ತಿದ್ದಾರೆ. ನಮ್ಮ ಪುನರ್ ಮಿಲನ ವಿಡಿಯೊ ನೋಡಿ ಎಂದು ಒಬಾಮ ಟ್ವೀಟ್ ಮಾಡಿದ್ದಾರೆ.
Jacob Philadelphia was five years old when he visited the Oval Office and asked if his hair was like mine. That photo became one of our favorites – a reminder of the power of seeing yourself in your leaders.
Today, he’s graduating from high school! Check out our recent reunion. pic.twitter.com/gB39hFS3Wp
— Barack Obama (@BarackObama) May 27, 2022
ಈ ವಿಡಿಯೊ 1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಗಳಿಸಿದೆ. “ಆತ್ಮೀಯ ಅಧ್ಯಕ್ಷ ಒಬಾಮಾ. ಈ ವಿಡಿಯೊ ನಿಜವಾಗಿ ನನ್ನ ಕಣ್ಣಲ್ಲಿ ನೀರು ತರಿಸಿತು, ನಾವು ಸಾಕಷ್ಟು ಶ್ರಮಿಸಿದರೆ ಮತ್ತು ಸಾಕಷ್ಟು ನಂಬಿದರೆ ನಾವು ಆಕಾಶದಲ್ಲಿರುವ ನಕ್ಷತ್ರವನ್ನು ತಲುಪಬಹುದು ಎಂದು ನನಗೆ ನೆನಪಿಸಿತು. ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ನೀವು ನನ್ನ ಅಧ್ಯಕ್ಷರು ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ, ”ಎಂದು ಟ್ವೀಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಒಬಾಮಾ ಅವರು ಜಾಕೋಬ್‌ಗೆ ಕರೆ ಮಾಡಿ ನೆನಪಿದೆಯಾ ಎಂದು ಕೇಳುವುದರೊಂದಿಗೆ ವಿಡಿಯೊ ಆರಂಭವಾಗುತ್ತದೆ. “ಮುಂದಿನ ಬಾರಿ ನಿಮ್ಮ ಕೂದಲು ಗ್ರೇ ಕಲರ್ ಗೆ ತಿರುಗುತ್ತದೆ ಎಂದು ನೀವು ನನಗೆ ಹೇಳಿದ್ದು ನನಗೆ ನೆನಪಿದೆ” ಎಂದು ಜಾಕೋಬ್ ಹೇಳುತ್ತಾರೆ. ಒಬಾಮ ನಗುತ್ತಾ ‘ನಾನು ಸುಳ್ಳು ಹೇಳುತ್ತಿಲ್ಲ!’ ಅಂತಾರೆ.
ಐದು ನಿಮಿಷದ ಈ ವಿಡಿಯೊದಲ್ಲಿ ಓವಲ್ ಕಚೇರಿಯಲ್ಲಿ ಅಧ್ಯಕ್ಷ ಒಬಾಮರನ್ನು ಭೇಟಿಯಾಗುವುದು “ನನ್ನ ಜೀವನದ ಒಂದು ದೊಡ್ಡ ಪ್ರಮುಖ ಸಂಗತಿ” ಎಂದು ಜಾಕೋಬ್ ಹೇಳಿದ್ದಾರೆ. ಮೆಂಫಿಸ್ ವಿಶ್ವವಿದ್ಯಾನಿಲಯದಲ್ಲಿ ಪೊಲಿಟಿಕಲ್ ಸಯನ್ಸ್ ಅಧ್ಯಯನ ಮಾಡುವ ತನ್ನ ಯೋಜನೆಗಳ ಬಗ್ಗೆ ಅವರು ಮಾಜಿ ಅಧ್ಯಕ್ಷರಿಗೆ ತಿಳಿಸಿದ್ದು, ಓಹ್ ನೀವು ಶ್ವೇತಭವನದ ಭೇಟಿಯಿಂದ ಸ್ಫೂರ್ತಿ ಪಡೆದಿದ್ದೀರಿ ಎಂದಿದ್ದಾರೆ.
“ಈ ಚಿತ್ರವು ನಾನು ಮೊದಲು ಕಚೇರಿಗೆ ಹೋಗಲು ಪ್ರಾರಂಭಿಸಿದಾಗ ನಾನು ಹೊಂದಿದ್ದ ಭರವಸೆಗಳಲ್ಲಿ ಒಂದನ್ನು ಸಾಕಾರಗೊಳಿಸಿದೆ ಎಂದು ನಾನು ಭಾವಿಸುತ್ತೇನೆ” ಎಂದು ಒಬಾಮಾ ವಿಡಿಯೊದಲ್ಲಿ ಹೇಳಿದ್ದಾರೆ.