Nupur Sharma: ಬಿಜೆಪಿ ನಾಯಕಿ ನೂಪುರ್ ಶರ್ಮಾ ತಲೆ ಕತ್ತರಿಸಿದವರಿಗೆ 50 ಲಕ್ಷ ಬಹುಮಾನ ಘೋಷಿಸಿದ ಪಾಕಿಸ್ತಾನಿಗಳು
ನೂಪುರ್ ಶರ್ಮಾಗೆ ಗಡಿಯಾಚೆಗಿನ ಉಗ್ರ ಸಂಘಟನೆಗಳಿಂದ ಪ್ರಾಣ ಬೆದರಿಕೆಗಳೂ ಬರಲಾರಂಭಿಸಿವೆ. ನೂಪುರ್ ಶರ್ಮಾಳ ಶಿರಚ್ಛೇದ ಮಾಡಿದವರಿಗೆ 5 ಮಿಲಿಯನ್ ಬಹುಮಾನ ನೀಡಲಾಗುವುದು ಎಂದು ಪಾಕಿಸ್ತಾನದ ಲಬ್ಬೈಕಿಯನ್ಸ್ ಟಿವಿ ಟ್ವೀಟ್ ಮಾಡಿದೆ.
ನವದೆಹಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ (Mohammed Zubair) ಅವರು ನೂಪುರ್ ಶರ್ಮಾ ಮೇಲೆ ಇಸ್ಲಾಮಿಸ್ಟ್‌ಗಳನ್ನು ಛೂ ಬಿಟ್ಟಾಗಿನಿಂದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ (Nupur Sharma) ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಕೊಲೆ ಬೆದರಿಕೆಗಳು ಬರುತ್ತಿವೆ. ಇದೀಗ ನೂಪುರ್ ಶರ್ಮಾಗೆ ಗಡಿಯಾಚೆಗಿನ ಉಗ್ರ ಸಂಘಟನೆಗಳಿಂದ ಪ್ರಾಣ ಬೆದರಿಕೆಗಳೂ ಬರಲಾರಂಭಿಸಿವೆ. ನೂಪುರ್ ಶರ್ಮಾಳ ಶಿರಚ್ಛೇದ ಮಾಡಿದವರಿಗೆ 5 ಮಿಲಿಯನ್ (50 ಲಕ್ಷ) ಬಹುಮಾನ ನೀಡಲಾಗುವುದು ಎಂದು ಲಬ್ಬೈಕಿಯನ್ಸ್ ಟಿವಿ ಟ್ವೀಟ್ ಮಾಡಿದೆ. ಈ ಟ್ವಿಟ್ಟರ್ ಹ್ಯಾಂಡಲ್ ಅನ್ನು ಇಸ್ಲಾಮಿಕ್ ಉಗ್ರಗಾಮಿ ಪಕ್ಷವಾದ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (TLP) ಬೆಂಬಲಿಗರು ನಡೆಸುತ್ತಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಮುಂಬೈನಲ್ಲಿ ಕೇಸ್ ದಾಖಲಾಗಿದೆ. ಭಾರತೀಯ ಸುನ್ನಿ ಮುಸ್ಲಿಮರಿಗಾಗಿ ಇರುವ ರಾಜಾ ಅಕಾಡೆಮಿ ನೂಪುರ್ ಶರ್ಮಾ ವಿರುದ್ಧ ದೂರು ನೀಡಿತ್ತು. ಆಲ್ಟ್ ನ್ಯೂಸ್ನ ಮಾಲೀಕರು ತನ್ನ ವಿರುದ್ಧದ ಟ್ರೋಲ್ಗಳನ್ನು ಉತ್ತೇಜಿಸಲು ಎಡಿಟ್ ಮಾಡಲಾಗಿರುವ ವಿಡಿಯೋ ಪ್ರಕಟಿಸಿದ್ದರು. ನಮಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಏನಾದರೂ ಆದರೆ ಅದಕ್ಕೆ ಆಲ್ಟ್ ನ್ಯೂಸ್ ಮಾಲಿಕರೇ ಜವಾಬ್ದಾರಿ ಎಂದು ನೂಪುರ್ ಶರ್ಮಾ ದೂರಿದ್ದರು.
ಇದನ್ನೂ ಓದಿ: ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಎಫ್ಐಆರ್
ಶುಕ್ರವಾರ (ಮೇ 27) ಟೈಮ್ಸ್ ನೌ ಚಾನೆಲ್‌ನಲ್ಲಿ ನಡೆಸಲಾಗಿದ್ದ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದ ನೂಪುರ್ ಶರ್ಮಾ ದ್ವೇಷ ಮತ್ತು ಕೊಲೆ ಬೆದರಿಕೆಗಳ ಸುರಿಮಳೆಯನ್ನು ಸ್ವೀಕರಿಸುತ್ತಿದ್ದಾರೆ. ವಿವಾದಿತ ಜ್ಞಾನವಾಪಿ ರಚನೆಯ ಕುರಿತ ಚರ್ಚೆಯ ಸಂದರ್ಭದಲ್ಲಿ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಜನರು ಇಸ್ಲಾಮಿಕ್ ನಂಬಿಕೆಗಳನ್ನು ಅಪಹಾಸ್ಯ ಮಾಡಬಹುದು ಎಂದು ಶರ್ಮಾ ವಾದಿಸಿದ್ದರು. ಇದಾದ ನಂತರ ನೂಪುರ್ ಸರ್ಮಾ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರತೊಡಗಿದವು. ಅವರ ಕುಟುಂಬಸ್ಥರಿಗೂ ಬೆದರಿಕೆ ಕರೆಗಳು ಬರಲಾರಂಭಿಸಿದವು. (Source)
ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಮಾಧ್ಯಮ ಸಂದರ್ಶನವೊಂದಲ್ಲಿ ನೂಪುರ್ ಶರ್ಮ, ‘ಹಿಂದೂ ನಂಬಿಕೆಗಳನ್ನು ಜನರು ಪದೇ ಪದೇ ಅಪಹಾಸ್ಯಕ್ಕೆ ಗುರಿಪಡಿಸುವ ಹಾಗೇ ನಾವು ಕೂಡ ಇನ್ನಿತರ ಧರ್ಮದ ನಂಬಿಕೆಯ ಬಗ್ಗೆ ಅಪಹಾಸ್ಯ ಮಾಡಬಹುದು’ ಎಂದಿದ್ದರು. ಈ ಭಾಗದ ವಿಡಿಯೋವನ್ನು ಹಂಚಿಕೊಂಡ ಆಲ್ಟ್‌ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್, ‘ನೂಪುರ್ ಓರ್ವ ಕೋಮುವಾದಿಯಾಗಿದ್ದು, ಗಲಭೆಯನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜುಬೇರ್ ಬೆಂಬಲಿಗರೇ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ನೂಪುರ್ ಶರ್ಮ ಆರೋಪಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Mon, 30 May 22