ತಪಸ್ಸು ಕಡಿಮೆಯಾಯ್ತು: ಪವನ್ ಖೇರಾ, ನಗ್ಮಾಗೆ ಟಿಕೆಟ್ ನಿರಾಕರಣೆ, ಬಯಲಿಗೆ ಬಂದ ಕಾಂಗ್ರೆಸ್ ಭಿನ್ನಮತ

ಹಲವು ಕಾಂಗ್ರೆಸ್ ನಾಯಕರು ರಾಜ್ಯಸಭೆ ಟಿಕೆಟ್ ನಿರಾಕರಣೆಯ ನಂತರ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ತಪಸ್ಸು ಕಡಿಮೆಯಾಯ್ತು: ಪವನ್ ಖೇರಾ, ನಗ್ಮಾಗೆ ಟಿಕೆಟ್ ನಿರಾಕರಣೆ, ಬಯಲಿಗೆ ಬಂದ ಕಾಂಗ್ರೆಸ್ ಭಿನ್ನಮತ
ಚಿತ್ರನಟಿ ನಗ್ಮಾ ಮತ್ತು ಕಾಂಗ್ರೆಸ್ ನಾಯಕ ಪವನ್ ಖೇರಾ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 30, 2022 | 10:23 AM

ದೆಹಲಿ: ಕಾಂಗ್ರೆಸ್ ಪಕ್ಷವು (Congress Party) ಭಾನುವಾರ ರಾಜ್ಯಸಭೆಗೆ 10 ಉಮೇದುವಾರರಿಗೆ ಟಿಕೆಟ್ (Congress Rajya Sabha Ticket) ಘೋಷಿಸಿದೆ. ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇರಿಸಿಕೊಂಡಿದ್ದ ಹಲವರು ಟಿಕೆಟ್ ನಿರಾಕರಣೆಯ ನಂತರ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಪಕ್ಷವನ್ನು ರಾಷ್ಟ್ರೀಯ ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಸಹ ಇದಕ್ಕೆ ಹೊರತಾಗಿಲ್ಲ. ರಾಜಸ್ಥಾನದಿಂದ ಸ್ಪರ್ಧಿಸಬೇಕು ಎಂದು ಅವರು ಬಯಸಿದ್ದರು.

‘ಬಹುಷಃ ನನ್ನ ತಪಸ್ಸಿನಲ್ಲೇ ಏನೋ ಲೋಪ ಇರಬೇಕು’ ಎಂದು ಟ್ವೀಟ್ ಮಾಡುವ ಮೂಲಕ ಪವನ್ ಖೇರಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಟ್ವೀಟ್​ಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾಕಷ್ಟು ಕಾರ್ಯಕರ್ತರು ಇದನ್ನು ರಿಟ್ವೀಟ್ ಮಾಡಿ, ಕಾಮೆಂಟ್ ಮಾಡಿದ್ದಾರೆ. ಕೆಲ ಹೊತ್ತಿನ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿರುವ ಪವನ್ ಖೇರಾ, ‘ಕಾಂಗ್ರೆಸ್ ಪಕ್ಷವು ನನಗೆ ಅಸ್ತಿತ್ವ ತಂದುಕೊಟ್ಟಿದೆ’ ಎಂದು ಹೇಳಿದ್ದಾರೆ.

ಪವನ್ ಖೇರಾ ಅವರಿಗೆ ಟಿಕೆಟ್ ನಿರಾಕರಿಸಿದ್ದ ಕಾಂಗ್ರೆಸ್, ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್​ನಿಕ್ ಮತ್ತು ಪ್ರಮೋದ್ ತಿವಾರಿ ಅವರಿಗೆ ರಾಜಸ್ಥಾನದಿಂದ ಅವಕಾಶ ಕಲ್ಪಿಸಿತ್ತು. ಇವರಲ್ಲಿ ಯಾರೊಬ್ಬರೂ ರಾಜಸ್ಥಾನಕ್ಕೆ ಸೇರಿದವರಲ್ಲ. ‘ರಾಜಸ್ಥಾನದ ಯಾವುದೇ ಕಾಂಗ್ರೆಸ್​ ನಾಯಕ / ಕಾರ್ಯಕರ್ತನಿಗೆ ಅವಕಾಶ ನೀಡಿಲ್ಲ. ಪಕ್ಷವು ಈ ನಿರ್ಧಾರಕ್ಕೆ ಏನು ಕಾರಣ ಎಂದು ಸ್ಪಷ್ಟಪಡಿಸಬೇಕು’ ಎಂದು ರಾಜಸ್ಥಾನದ ಸಿರೋಹಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸನ್ಯಾಮ್ ಲೋಧಾ ಟ್ವೀಟ್ ಮಾಡಿದ್ದಾರೆ.

ಪವನ್ ಖೇರಾ ಅವರ ಆಕ್ಷೇಪಕ್ಕೆ ದನಿಗೂಡಿಸಿರುವ ಕಾಂಗ್ರೆಸ್ ನಾಯಕಿ, ಮಾಜಿ ನಟಿ ನಗ್ಮಾ, ‘ಇಮ್ರಾನ್ ಭಾಯ್ (ಇಮ್ರಾನ್ ಪ್ರತಾಪ್​ಗರ್​ಹಿ) ಅವರಿಗೆ ಮಹಾರಾಷ್ಟ್ರದಿಂದ ಅವಕಾಶ ಕೊಡಲಲಾಗಿದೆ. 2003-04ರಲ್ಲಿ ಅವಕಾಶ ನೀಡುವುದಾಗಿ ನನಗೆ ಸ್ವತಃ ಸೋನಿಯಾ ಗಾಂಧಿ ಭರವಸೆ ಕೊಟ್ಟಿದ್ದರು. ಆ ಮಾತಿಗೆ ಈಗ 18 ವರ್ಷಗಳಾಗಿವೆ. ಆದರೂ ನನಗೆ ಟಿಕೆಟ್ ಕೊಡಬೇಕಿತ್ತು ಎನ್ನುವುದು ಅವರಿಗೆ ಮರೆತು ಹೋಗಿದೆ. ನಾನು ಇಮ್ರಾನ್​ಗಿಂತ ಕಡಿಮೆ ಅರ್ಹತೆ ಹೊಂದಿದ್ದೇನೆಯೇ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಬಿಜೆ ಘಟಕದ ಮುಖ್ಯಸ್ಥ ಸತೀಶ್ ಪೂಂಜಾ ಸಹ ಕಾಂಗ್ರೆಸ್ ನಾಯಕರ ಈ ಭಿನ್ನಮತದ ಹೇಳಿಕೆಗಳಿಗೆ ತುಪ್ಪ ಸುರಿದಿದ್ದಾರೆ. ‘ಕಾಂಗ್ರೆಸ್​ನ ಚಿಂತನ ಶಿಬಿರ ರಾಜಸ್ಥಾನದಲ್ಲಿಯೇ ನಡೆದಿತ್ತು. ಈ ಚಿಂತನೆಯ ನಂತರ ಸ್ಥಳೀಯ ಉಮೇದುವಾರರಿಗೆ ಅವಕಾಶ ನಿರಾಕರಿಸಲಾಗಿದೆ. ಸ್ಥಳೀಯರಿಗೆ ಅವಕಾಶವಿಲ್ಲದಿದ್ದರೆ ಇವರದು ಬಾಯ್ಮಾತಿನ ಉಪಚಾರವಾಗುತ್ತದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ನೀವು ಅವಕಾಶ ಕೊಟ್ಟಿರುವ ಎಷ್ಟು ಜನರು ಒಬಿಸಿ/ಎಸ್​ಸಿ/ಎಸ್​ಟಿ ವರ್ಗಗಳಿಗೆ ಸೇರಿದವರು ಎಂದು ತಿಳಿಸಿ’ ಎಂದು ಕಾಂಗ್ರೆಸ್ ಗುಜರಾತ್ ಘಟಕದ ಸಹ ಉಸ್ತುವಾರಿ ಜಿತೇಂದ್ರ ಬಾಘೇಲ್ ಟ್ವೀಟ್ ಮಾಡಿದ್ದಾರೆ. ಗ್ರೆಸ್​ನ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ ಅವರಿಗೂ ಈ ಬಾರಿ ಅವಕಾಶ ಸಿಕ್ಕಿಲ್ಲ.

ಬಿಜೆಪಿಯ ಅಮಿತ್ ಮಾಳವೀಯ ಸಹ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಬಹುದಾದ ಒಬ್ಬನೇ ಒಬ್ಬ ವ್ಯಕ್ತಿ ಕಾಂಗ್ರೆಸ್ ಕಣ್ಣಿಗೆ ಬೀಳಲಿಲ್ಲವೇ? ಅಶೋಕ್ ಗೆಹ್ಲೋಟ್ ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ರಾಜಸ್ಥಾನದ ಹಿತವನ್ನೇ ಗಾಂಧಿ ಕುಟುಂಬದೊಂದಿಗೆ ಶಾಮೀಲಾಗಿ ಬಲಿಕೊಟ್ಟರೇ’ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada